ದಿಲ್ಲಿ ಗಲಭೆ ಪ್ರಕರಣ: ಪೊಲೀಸರ ಮೇಲೆ ವಿಧಿಸಲಾಗಿದ್ದ 25,000ರೂ. ದಂಡ ಪಾವತಿಗೆ ಹೈಕೋರ್ಟ್ ತಡೆ

Update: 2021-07-28 10:47 GMT

ಹೊಸದಿಲ್ಲಿ : ಈಶಾನ್ಯ ದಿಲ್ಲಿಯಲ್ಲಿ ಕಳೆದ ವರ್ಷದ ಫೆಬ್ರವರಿಯಲ್ಲಿ ನಡೆದ ಹಿಂಸಾಚಾರ ಕುರಿತಾದ ಪ್ರಕರಣವೊಂದರಲ್ಲಿ ದಿಲ್ಲಿ ಪೊಲೀಸರ ಮೇಲೆ ವಿಧಿಸಲಾಗಿದ್ದ ರೂ 25,000 ದಂಡ ಪಾವತಿಗೆ ಇಂದು ತಡೆಯಾಜ್ಞೆ ವಿಧಿಸಿರುವ ದಿಲ್ಲಿ ಹೈಕೋರ್ಟ್ ಅದೇ ಸಮಯ  ತನಿಖೆ ಕುರಿತಂತೆ ವಿಚಾರಣಾಧೀನ ನ್ಯಾಯಾಲಯದ  ಆದೇಶದಲ್ಲಿ ಈಗ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಮುಂದಿನ ವಿಚಾರಣೆಯ ತನಕ ಪೊಲೀಸರು ದಂಡ ಮೊತ್ತ ಪಾವತಿಸಬೇಕಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ,

ಹಿಂಸಾಚಾರದ ವೇಳೆ ಗುಂಡೇಟಿಗೊಳಗಾಗಿ ಎಡಕಣ್ಣಿನ ದೃಷ್ಟಿ ಕಳೆದುಕೊಂಡಿದ್ದ ಮುಹಮ್ಮದ್ ನಾಸಿರ್ ಎಂಬವರು ದಾಖಲಿಸಿದ್ದ ದೂರಿನ ಆಧಾರದಲ್ಲಿ ವಿಚಾರಣಾಧೀನ ನ್ಯಾಯಾಲಯವು ಅಕ್ಟೋಬರ್ 27, 2020ರಂದು ದಿಲ್ಲಿ ಪೊಲೀಸರಿಗೆ ಎಫ್‍ಐಆರ್ ದಾಖಲಿಸುವಂತೆ ಸೂಚಿಸಿತ್ತು. ಆದರೆ ಆದೇಶ ದೊರೆತ ನಂತರವೂ ಪೊಲೀಸರು ಅದನ್ನು ನಿರ್ಲಕ್ಷ್ಯಿಸಿದ್ದರೆಂದು ಸಂತ್ರಸ್ತ ದೂರಿದ್ದರು. ಇದನ್ನು ಪ್ರಶ್ನಿಸಿ ದಿಲ್ಲಿ ಪೊಲೀಸರು ನ್ಯಾಯಾಲಯದ ಮೊರೆ ಹೋದರೂ ಅಲ್ಲಿ ತನಿಖೆಯ ವಿಳಂಬಗತಿಯ ಕುರಿತು ನ್ಯಾಯಾಲಯ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು ಹಾಗೂ ರೂ 25,000 ದಂಡ ಪಾವತಿಸುವಂತೆ ಆದೇಶಿಸಿತ್ತು.

ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರ ಅಪೀಲಿನ ಕುರಿತು ಬುಧವಾರ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿತಲ್ಲದೆ ದೂರುದಾರ ನಾಸಿರ್‌ ರಿಂದ 10 ದಿನಗಳೊಳಗಾಗಿ  ಪ್ರತಿಕ್ರಿಯೆ ಕೇಳಿದೆ.

ಗಲಭೆ ಸಂದರ್ಭ ನರೇಶ್ ತ್ಯಾಗಿ, ಸುಭಾಷ್ ತ್ಯಾಗಿ, ಉತ್ತಮ್ ತ್ಯಾಗಿ ಹಾಗೂ ಸುಶೀಲ್ ಎಂಬವರು ತನಗೆ ಹಲ್ಲೆ ನಡೆಸಿದ್ದರೆಂದು ನಾಸಿರ್ ತಮ್ಮ ದೂರಿನಲ್ಲಿ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News