2022ರ ಮೂರನೇ ತ್ರೈಮಾಸಿಕದಲ್ಲಿ ಚಂದ್ರಯಾನ-3 ಉಡಾವಣೆ ಸಾಧ್ಯತೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್
ಹೊಸದಿಲ್ಲಿ, ಜು.28: ಕೋವಿಡ್ ಸಾಂಕ್ರಾಮಿಕದಿಂದಾಗಿ ಪ್ರಗತಿ ಕುಂಠಿತಗೊಂಡಿದ್ದ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 2022ರ ಮೂರನೇ ತ್ರೈಮಾಸಿಕದಲ್ಲಿ ಉಡಾವಣೆಗೊಳ್ಳುವ ಸಾಧ್ಯತೆಯಿದೆ ಎಂದು ಕೇಂದ್ರ ಬಾಹ್ಯಾಕಾಶ ಮತ್ತು ಅಣುಶಕ್ತಿ ಇಲಾಖೆಯ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರು ಬುಧವಾರ ಲೋಕಸಭೆಯಲ್ಲಿ ತಿಳಿಸಿದರು.
ಚಂದ್ರಯಾನ-3 ಕಾರ್ಯಕ್ರಮವನ್ನು ಮರುನಿಗದಿಗೊಳಿಸಲಾಗಿದೆ. ಇನ್ನು ಮುಂದೆ ಕೆಲಸಕಾರ್ಯಗಳು ಸಹಜ ರೀತಿಯಲ್ಲಿ ಮುಂದುವರಿಯಲಿವೆ ಎಂದು ಆಶಿಸಲಾಗಿದ್ದು, ಮುಂದಿನ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಚಂದ್ರಯಾನ-3 ಉಡಾವಣೆಗೊಳ್ಳುವ ಸಾಧ್ಯತೆಯಿದೆ ಎಂದು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಅವರು ತಿಳಿಸಿದರು.
ಚಂದ್ರಯಾನ-3 ಹಲವಾರು ಪ್ರಕ್ರಿಯೆಗಳನ್ನು ಒಳಗೊಂಡಿದ್ದು,ಅದರ ಕಾರ್ಯ ನಿರ್ವಹಣೆಯ ಕುರಿತು ವಿವಿಧ ವಿಶೇಷ ಪರೀಕ್ಷೆಗಳನ್ನು ಕೈಗೊಳ್ಳಬೇಕಿದೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಯೋಜನೆಯ ಪ್ರಗತಿ ಕುಂಠಿತಗೊಂಡಿತ್ತಾದರೂ ಲಾಕ್ಡೌನ್ ಅವಧಿಯಲ್ಲಿಯೂ ಸಾಧ್ಯವಿರುವ ಎಲ್ಲ ಕೆಲಸಗಳನ್ನು ವಿಜ್ಞಾನಿಗಳು ಮನೆಯಿಂದಲೇ ನಿರ್ವಹಿಸಿದ್ದರು. ಅನ್ಲಾಕ್ ಬಳಿಕ ಯೋಜನೆಯ ಕೆಲಸವು ವೇಗವನ್ನು ಪಡೆದುಕೊಂಡಿದೆ ಎಂದರು.
ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಡರ್ ನ್ನು ಇಳಿಸುವ ಉದ್ದೇಶದಿಂದ 2019,ಜು.22ರಂದು ಚಂದ್ರಯಾನ-2 ಅನ್ನು ಉಡಾವಣೆಗೊಳಿಸಲಾಗಿತ್ತು. ಆದರೆ 2019,ಸೆ.7ರಂದು ಲ್ಯಾಂಡರ್ ಚಂದ್ರನ ಮೇಲ್ಮೈಗೆ ಅಪ್ಪಳಿಸುವ ಮೂಲಕ ತನ್ನ ಮೊದಲ ಪ್ರಯತ್ನದಲ್ಲಿಯೇ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ವಿಶ್ವದ ಮೊದಲ ದೇಶವಾಗುವ ಭಾರತದ ಕನಸು ಭಗ್ನಗೊಂಡಿತ್ತು.