ಪೆಗಾಸಸ್ ವಿವಾದ: ಸಂಸತ್ತಿನಲ್ಲಿ ಮುಂದುವರಿದ ಬಿಕ್ಕಟ್ಟು
ಹೊಸದಿಲ್ಲಿ, ಜು.28: ಪೆಗಾಸಸ್ ಸ್ಪೈವೇರ್ ಬಳಸಿ ಗೂಢಚಾರಿಕೆ ನಡೆಸಲಾಗುತ್ತಿದೆ ಎಂಬ ವರದಿಯ ಬಗ್ಗೆ ಸಂಸತ್ತಿನಲ್ಲಿ ಚರ್ಚೆಗೆ ಆಗ್ರಹಿಸಿ ವಿಪಕ್ಷಗಳು ಪ್ರತಿಭಟನೆ ಮುಂದುವರಿಸಿರುವಂತೆಯೇ ಬುಧವಾರ ಸಂಸತ್ತಿನ ಎರಡೂ ಸದನದ ಕಲಾಪವನ್ನು ಮುಂದೂಡಲಾಗಿದೆ. ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಮತ್ತು ಎಡಪಕ್ಷಗಳ ಸಂಸದರು ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಸಂಸತ್ತಿನ ಕಲಾಪಕ್ಕೆ ಸಂಬಂಧಿಸಿದ ಪೇಪರ್ ಅನ್ನು ಹರಿದು ಸದನದ ಸ್ಪೀಕರ್ ಆಸನದತ್ತ ಹಾಗೂ ಅಧಿಕಾರಿಗಳ ಮೇಜಿನತ್ತ ಎಸೆದರು.
ಬಳಿಕ ಇವರನ್ನು ಕೂಡಿಕೊಂಡ ಟಿಎಂಸಿ ಸಂಸದದರು ‘ಖೇಲಾ ಹೋಬೆ’ (ಆಟ ಆರಂಭವಾಗಿದೆ) ಎಂಬ ಘೋಷಣೆ ಕೂಗಿದರು. ಪೆಗಾಸಸ್ ಗೂಢಚಾರಿಕೆ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ತನಿಖೆ ನಡೆಯಲಿ ಎಂದು ಆಗ್ರಹಿಸುವ ಒಕ್ಕಣೆಯುಳ್ಳ ಫಲಕವನ್ನು ಸಂಸದರು ಪ್ರದರ್ಶಿಸಿದರು. ಈ ಮಧ್ಯೆ, ಸುಮಾರು ಪೆಗಾಸಸ್ ಸ್ಪೈವೇರ್ ಬಳಸಿ ಫೋನ್ಗಳನ್ನು ಹ್ಯಾಕ್ ಮಾಡಿರುವ ಹಗರಣದ ವಿಷಯದಲ್ಲಿ ಸರಕಾರದ ವಿರುದ್ಧದ ಕಾರ್ಯತಂತ್ರವನ್ನು ರೂಪಿಸಲು ಹೊಸದಿಲ್ಲಿಯಲ್ಲಿ ಬುಧವಾರ 14 ವಿಪಕ್ಷಗಳ ಸಭೆ ನಡೆಯಿತು.
ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ಧಿಗಾರರ ಜತೆ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪೆಗಾಸಸ್ ಸ್ಪೈವೇರ್ ಅನ್ನು ಖರೀದಿಸಲಾಗಿದೆಯೇ ಮತ್ತು ಇದನ್ನು ಭಾರತದಲ್ಲಿ ಕೆಲವರ ವಿರುದ್ಧ ಬಳಸಲಾಗಿದೆಯೇ ಎಂಬುದಷ್ಟೇ ನಮ್ಮ ಪ್ರಶ್ನೆಯಾಗಿದೆ. ಪೆಗಾಸಸ್ ಸ್ಪೈವೇರ್ ಬಳಕೆ ರಾಷ್ಟ್ರೀಯತೆ ಮತ್ತು ದೇಶದ್ರೋಹಕ್ಕೆ ಸಂಬಂಧಿಸಿರುವುದರಿಂದ ಆತಂಕದ ವಿಷಯವಾಗಿದೆ ಎಂದರು.
ಪ.ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರೂ ಪೆಗಾಸಸ್ ವಿಷಯದಲ್ಲಿ ಸಂಸತ್ತಿನಲ್ಲಿ ಚರ್ಚೆಯಾಗಬೇಕೆಂದು ಆಗ್ರಹಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಹೊಸದಿಲ್ಲಿಯಲ್ಲಿ ಭೇಟಿಯಾದ ಬಳಿಕ ಸುದ್ಧಿಗಾರರ ಜತೆ ಮಾತನಾಡಿದ ಅವರು, ಸರಕಾರ ಸಂಸತ್ತಿನಲ್ಲಿ ಪೆಗಾಸಸ್ ಬಗ್ಗೆ ಉತ್ತರಿಸಲು ಯಾಕೆ ಹಿಂದೇಟು ಹಾಕುತ್ತಿದೆ? ಕಾರ್ಯನೀತಿ ನಿರ್ಧಾರವನ್ನು ಸಂಸತ್ತಿನಲ್ಲಿ ಕೈಗೊಳ್ಳುವುದಿಲ್ಲ ಎಂದಾದರೆ, ಚರ್ಚೆ ನಡೆಯುವುದಿಲ್ಲ ಎಂದಾದರೆ ಮತ್ತೆಲ್ಲಿ ಚರ್ಚೆ ನಡೆಯಬೇಕು ? ಚಹಾದ ಅಂಗಡಿಯಲ್ಲಿ ಚರ್ಚಿಸುವ ವಿಷಯವೇ ಇದು ಎಂದು ಪ್ರಶ್ನಿಸಿದರು.
ವಿಪಕ್ಷಗಳು ಕಲಾಪಕ್ಕೆ ಅಡ್ಡಿಮಾಡುವ ಮೂಲಕ ಚರ್ಚೆಯಿಂದ ಓಡಿಹೋಗುತ್ತಿವೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಟೀಕಿಸಿದ್ದಾರೆ. ಸ್ಪೀಕರ್ ರತ್ತ, ಸಚಿವರತ್ತ, ಮಾಧ್ಯಮದವರ ಗ್ಯಾಲರಿಯತ್ತಲೂ ಪೇಪರ್ ಎಸೆದಿದ್ದಾರೆ. ಯಾಕೆ ಅವರು ಇಂತಹ ಆಕ್ಷೇಪಾರ್ಹ ವರ್ತನೆ ತೋರುತ್ತಿದ್ದಾರೆ. ಅವರಿಗೆ ಚರ್ಚೆ ನಡೆಸಲು ವಿಷಯವೇ ಇಲ್ಲವೇ? ಅವರು ವಿಶ್ವದಲ್ಲಿ ಭಾರತಕ್ಕೆ ಅಪಖ್ಯಾತಿ ತರಲು ಬಯಸಿದ್ದಾರೆಯೇ? ಎಂದವರು ಪ್ರಶ್ನಿಸಿದ್ದಾರೆ.
ಈ ಮಧ್ಯೆ, ಸಂಸತ್ತಿನಲ್ಲಿ ಚರ್ಚೆಯ ವಿಷಯದಲ್ಲಿ ವಿಪಕ್ಷ ಹಾಗೂ ಸರಕಾರದ ನಡುವಿನ ಬಿಕ್ಕಟ್ಟು ಮುಂದುವರಿದಿದೆ. ಬುಧವಾರ ನಿಗದಿಯಾಗಿದ್ದ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿ ಸಭೆ, ಬಿಜೆಪಿ ಸದಸ್ಯರ ಗೈರುಹಾಜರಿಯ ಕಾರಣ ನಡೆಯಲಿಲ್ಲ. ಕಾಂಗ್ರೆಸ್ ನ ಶಶಿ ತರೂರ್ ಅಧ್ಯಕ್ಷತೆಯ ಈ ಸಮಿತಿ, ನಾಗರಿಕರ ದತ್ತಾಂಶ ಸುರಕ್ಷತೆ ಮತ್ತು ಗೋಪ್ಯತೆಗೆ ಸಂಬಂಧಿಸಿದ ವಿಷಯದ ಬಗ್ಗೆ ಚರ್ಚಿಸಲು ಗೃಹ ಇಲಾಖೆ, ದೂರಸಂಪರ್ಕ ವಿಭಾಗ, ಇಲೆಕ್ಟ್ರಾನಿಕ್ಸ್ ಮತ್ತು ತಂತ್ರಜ್ಞಾನ ಸಚಿವಾಲಯದ ಅಧಿಕಾರಿಗಳಿಗೆ ಸಮನ್ಸ್ ನೀಡಿತ್ತು. ಸಮಿತಿಯ ಅಧ್ಯಕ್ಷತೆಯಿಂದ ತರೂರ್ರನ್ನು ವಜಾಗೊಳಿಸಬೇಕೆಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಗೊತ್ತುವಳಿಯನ್ನು ಮಂಡಿಸಿದ್ದು, ಸಮಿತಿಯ 30 ಸದಸ್ಯರಲ್ಲಿ 17 ಮಂದಿ ತರೂರ್ ರ ಮೇಲೆ ವಿಶ್ವಾಸ ಹೊಂದಿಲ್ಲ ಎಂದು ಗೊತ್ತುವಳಿಯಲ್ಲಿ ಉಲ್ಲೇಖಿಸಲಾಗಿದೆ.
ಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ಧಿಗಾರರ ಜತೆ ಮಾತನಾಡಿದರು. ಸಂಪೂರ್ಣ ವಿಪಕ್ಷವೇ ಇಲ್ಲಿದೆ. ಸಂಸತ್ತಿನಲ್ಲಿ ನಮ್ಮ ಧ್ವನಿಯನ್ನು ಮೊಟಕುಗೊಳಿಸಲಾಗಿದೆ. ಪೆಗಾಸಸ್ ಸ್ಪೈವೇರ್ ಅನ್ನು ಖರೀದಿಸಲಾಗಿದೆಯೇ ಮತ್ತು ಇದನ್ನು ಭಾರತದಲ್ಲಿ ಕೆಲವರ ವಿರುದ್ಧ ಬಳಸಲಾಗಿದೆಯೇ ಎಂಬುದಷ್ಟೇ ನಮ್ಮ ಪ್ರಶ್ನೆಯಾಗಿದೆ. ನರೇಂದ್ರ ಮೋದಿ ನಿಮ್ಮ ಫೋನಿನಲ್ಲಿ ಸೇರಿಸಿರುವ ಆಯುಧವೊಂದಿದೆ. ಇದನ್ನು ವಿಪಕ್ಷಗಳ ಮುಖಂಡರು, ಪತ್ರಕರ್ತರು, ಹೋರಾಟಗಾರರ ವಿರುದ್ಧ ಬಳಸಲಾಗಿದೆ. ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕೇ ಎಂಬ ಪ್ರಶ್ನೆಯನ್ನು ಈಗ ನಾನು ಜನರಲ್ಲಿ ಕೇಳಲು ಬಯಸುತ್ತೇನೆ. ಪೆಗಾಸಸ್ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯದಿದ್ದರೆ ಈ ವಿಷಯ ಇಲ್ಲಿಗೇ ಸಮಾಧಿ ಸೇರಲಿದೆ. ಆದ್ದರಿಂದ ಸಂಸತ್ತಿನಲ್ಲಿ ಚರ್ಚೆಯಾಗದೆ ನಾವು ಇಲ್ಲಿಂದ ಕದಲುವುದಿಲ್ಲ ಎಂದು ರಾಹುಲ್ ಹೇಳಿದರು.
ಸಂಸತ್ತಿನ ಕಲಾಪ ಸಾಗಲು ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಕಲಾಪಕ್ಕೆ ಅಡ್ಡಿ ತರುತ್ತಿದ್ದೇವೆ ಎಂದು ಅವರು ಆರೋಪಿಸುತ್ತಿದ್ದಾರೆ. ಆದರೆ ನಾವು ನಮ್ಮ ಜವಾಬ್ದಾರಿ ಈಡೇರಿಸುತ್ತಿದ್ದೇವೆ ಎಂದರು. ಸಭೆಯಲ್ಲಿ ಪಾಲ್ಗೊಂಡಿದ್ದ ಶಿವಸೇನೆಯ ಸಂಸದ ಸಂಜಯ್ ರಾವತ್ ಮಾತನಾಡಿ, ರಾಷ್ಟ್ರೀಯ ಭದ್ರತೆ, ಪ್ರಜಾಪ್ರಭುತ್ವ ಮತ್ತು ರೈತರ ಶ್ರೇಯೋಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರತಿಪಕ್ಷಗಳ ಒಗ್ಗಟ್ಟು ಮುಂದುವರಿಯಲಿದೆ . ರಾಹುಲ್ ಗಾಂಧಿ ಹೇಳಿದಂತೆ, ಪೆಗಾಸಸ್ ಆಯುಧವನ್ನು ಸರಕಾರ ಪ್ರಜಾಪ್ರಭುತ್ವದ ವಿರುದ್ಧ ಬಳಸಿದ್ದು ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಲೇಬೇಕು ಎಂದರು. ಕಾಂಗ್ರೆಸ್, ಶಿವಸೇನೆ, ಸಿಪಿಐ, ಸಿಪಿಐ(ಎಂ), ಆರ್ಜೆಡಿ, ಆಮ್ ಆದ್ಮಿ ಪಕ್ಷ, ಡಿಎಂಕೆ, ಎನ್ಸಿಪಿ, ನ್ಯಾಷನಲ್ ಕಾನ್ಫರೆನ್ಸ್, ಸಮಾಜವಾದಿ ಪಕ್ಷದ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.