ರಿಮಾಂಡ್ ಅಂತ್ಯ, ರವಿ ಪೂಜಾರಿ ಮತ್ತೆ ಬೆಂಗಳೂರು ಜೈಲಿಗೆ

Update: 2021-07-29 18:29 GMT

ಅಹ್ಮದಾಬಾದ್, ಜು. 29: ಗುಜರಾತ್‌ನಲ್ಲಿ ದಾಖಲಿಸಲಾಗಿದ್ದ ಹಲವು ಕ್ರಿಮಿನಲ್ ಪ್ರಕರಣಗಳ ತನಿಖೆಗೆ ಜುಲೈ 19ರಂದು ಅಹ್ಮದಾಬಾದ್‌ಗೆ ಕರೆ ತರಲಾಗಿದ್ದ ಜೈಲು ಹಕ್ಕಿ ಭೂಗತ ಪಾತಕಿ ರವಿ ಪೂಜಾರಿಯನ್ನು ಮತ್ತೆ ಕರ್ನಾಟಕದ ಬೆಂಗಳೂರು ಜೈಲಿಗೆ ಹಿಂದೆ ಕಳುಹಿಸಲಾಗಿದೆ.

ಆನಂದ್‌ನ ಬೊರ್ಸಾದ್ ನ್ಯಾಯಾಲಯ ನೀಡಿದ ಒಂದು ದಿನ ಹೆಚ್ಚುವರಿ ಪೊಲೀಸ್ ಕಸ್ಟಡಿ ಪೂರ್ಣಗೊಂಡ ಬಳಿಕ ಬುಧವಾರ ರಾತ್ರಿ ವಿಮಾನದ ಮೂಲಕ ರವಿ ಪೂಜಾರಿಯನ್ನು ಬೆಂಗಳೂರಿಗೆ ಕಳುಹಿಸಲಾಯಿತು.

ಆನಂದ್‌ನ ಬೊರ್ಸಾದ್ ಪಟ್ಟಣದ ಸ್ವತಂತ್ರ ಕೌನ್ಸಿಲರ್ ಪ್ರಜ್ನೇಶ್ ಪಟೇಲ್ ಅವರ ಹತ್ಯೆ ಯತ್ನದ 2017ರ ಪ್ರಕರಣದ ತನಿಖೆಗೆ ಸಂಬಂಧಿಸಿ ಅಹ್ಮದಾಬಾದ್‌ನ ಡಿಸಿಬಿ ಪೊಲೀಸರು ಪೂಜಾರಿಯನ್ನು ಬೆಂಗಳೂರಿನಿಂದ ಕರೆ ತಂದಿದ್ದರು.

‘‘ಆರಂಭದಲ್ಲಿ ಆನಂದ್‌ನ ಬೊರ್ಸಾದ್‌ನ ನ್ಯಾಯಾಲಯದಿಂದ ರವಿ ಪೂಜಾರಿಯನ್ನು 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದೆವು. ಮಂಗಳವಾರ ಒಂದು ದಿನದ ಹೆಚ್ಚುವರಿ ಕಸ್ಟಡಿ ಪಡೆದುಕೊಂಡೆವು. ಬುಧವಾರ ಆತನನ್ನು ಬೆಂಗಳೂರಿಗೆ ಕಳುಹಿಸಲಾಗಿದೆ’’ ಎಂದು ಅಹ್ಮದಾಬಾದ್ ಡಿಸಿಬಿಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News