ಪೆಗಾಸಸ್ ವಿವಾದ : ಎನ್‌ಎಸ್‌ಓ ಮೇಲೆ ಇಸ್ರೇಲ್ ಏಜೆನ್ಸಿ ದಾಳಿ

Update: 2021-07-30 06:43 GMT

ಹೊಸದಿಲ್ಲಿ : ಪೆಗಾಸಸ್ ಸ್ಪೈವೇರ್ ಕಣ್ಗಾವಲು ಸಾಫ್ಟ್‌ವೇರ್ ಮೂಲಕ ಸರ್ಕಾರ, ಗಣ್ಯರು, ಪತ್ರಕರ್ತರು ಮತ್ತು ರಾಜಕೀಯ ವಿರೋಧಿಗಳ ಬಗ್ಗೆ ಬೇಹುಗಾರಿಕೆ ಮಾಡಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಇಸ್ರೇಲಿನ ರಕ್ಷಣಾ ಸಚಿವಾಲಯದ ತಂಡ ಈ ಸಾಫ್ಟ್‌ವೇರ್ ಮಾರಾಟಗಾರ ಕಂಪನಿಯಾದ ಎನ್‌ಎಸ್‌ಓ ಸಮೂಹದ ಮೇಲೆ ದಾಳಿ ನಡೆಸಿ, ಭದ್ರತಾ ಉಲ್ಲಂಘನೆ ಆರೋಪಗಳ ಬಗ್ಗೆ ತನಿಖೆ ಆರಂಭಿಸಿದೆ.

ಇಸ್ರೇಲ್ ರಕ್ಷಣಾ ಇಲಾಖೆಯ ಪ್ರತಿನಿಧಿಗಳು ಎನ್‌ಎಸ್‌ಓ ಕೇಂದ್ರ ಕಚೇರಿ ಮೇಲೆ ಮಂಗಳವಾರ ದಾಳಿ ನಡೆಸಿದ್ದಾರೆ ಎಂದು ಜೆರುಸಲೇಂ ಪೋಸ್ಟ್ ವರದಿ ಮಾಡಿದೆ. ಈ ದಾಳಿಯನ್ನು ಇಸ್ರೇಲ್‌ನ ರಕ್ಷಣಾ ಸಚಿವಾಲಯ ಟ್ವೀಟ್ ಮೂಲಕ ದೃಢಪಡಿಸಿದೆ.

ಎನ್‌ಎಸ್‌ಓ ವಕ್ತಾರ ಕೂಡಾ ಈ ದಾಳಿಯನ್ನು ಇಸ್ರೇಲಿ ನ್ಯೂಸ್ ವೆಬ್ ಸೈಟ್ ನಲ್ಲಿ ದೃಢಪಡಿಸಿದ್ದಾರೆ. "ಇಸ್ರೇಲ್ ರಕ್ಷಣಾ ಸಚಿವಾಲಯದ ಪ್ರತಿನಿಧಿಗಳು ನಮ್ಮ ಕಚೇರಿಗೆ ಭೇಟಿ ನೀಡಿದ್ದಾರೆ. ಅವರ ತಪಾಸಣೆಯನ್ನು ನಾವು ಸ್ವಾಗತಿಸಿದ್ದೇವೆ" ಎಂದು ವಕ್ತಾರರು ತಿಳಿಸಿದ್ದಾಗಿ ’ದ ರೆಕಾರ್ಡ್’ ವರದಿ ಮಾಡಿದೆ. "ಕಂಪನಿ ಇಸ್ರೇಲಿ ಅಧಿಕಾರಿಗಳ ಜತೆ ಸಂಪೂರ್ಣ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಇದು ಕಂಪನಿಯ ಮೇಲೆ ಮಾಡಲಾಗುತ್ತಿರುವ ಸುಳ್ಳು ಆರೋಪಗಳ ಬಗ್ಗೆ ಸತ್ಯಾಂಶವನ್ನು ಬೆಳಕಿಗೆ ತರಲಿದೆ" ಎಂದು ಅವರು ಹೇಳಿದ್ದಾರೆ.

ಈ ದಾಳಿಯ ಸ್ವರೂಪದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಆದರೆ ಇದು ಎನ್‌ಎಸ್‌ಓ ದಾಖಲೆಗಳು ಮತ್ತು ಕಂಪ್ಯೂಟರ್ ಸಿಸ್ಟಂಗಳ ಪರಿಶೋಧನೆಗಿಂತ ಹೆಚ್ಚಾಗಿ ಔಪಚಾರಿಕ ಭೇಟಿಯಾಗಿತ್ತು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಟೆಲ್ ಅವೀವ್ ಸಮೀಪದ ಹೆರ್ಜೆಲಿಯಾದಲ್ಲಿರುವ ಎನ್‌ಎಸ್‌ಓ ಸಮೂಹದ ಕೇಂದ್ರ ಕಚೇರಿ ಮೇಲೆ ದಾಳಿ ನಡೆದಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News