ಸಮುದ್ರದ ಉಪ್ಪು ನೀರು ಸಿಹಿಯಾಗುವ ಕಾಲ ಸನ್ನಿಹಿತ

Update: 2021-07-30 06:43 GMT
ಸಾಂದರ್ಭಿಕ ಚಿತ್ರ

ಮಂಗಳೂರು : ಅರಬಿ ಸಮುದ್ರದ ಉಪ್ಪುನೀರನ್ನು ಸಂಸ್ಕರಿಸಿ ಕೈಗಾರಿಕೆಗಳಿಗೆ ನೀಡುವ ರಾಜ್ಯದ ಮೊದಲ ಯೋಜನೆ ಮಂಗಳೂರಿನ ತಣ್ಣೀರುಬಾವಿಯಲ್ಲಿ ಅನುಷ್ಠಾನಗೊಂಡಿದೆ. ಉಪ್ಪು ನೀರು ಸಂಸ್ಕರಣಾ ಘಟಕದ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದ್ದು, ಸಮುದ್ರದ ಉಪ್ಪುನೀರು ಸಿಹಿಯಾಗುವ ದಿನಗಣನೆ ಶುರುವಾಗಿದೆ.

ಎಂಆರ್‌ಪಿಎಲ್ (ಮಂಗಳೂರು ರಿೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್) ಈ ಘಟಕವನ್ನು ನಿರ್ಮಿಸುತ್ತಿದೆ. ತಣ್ಣೀರುಬಾವಿಯಲ್ಲಿ ಘಟಕದ ಕಾಮಗಾರಿಯು ಶೇ.90ರಷ್ಟು ಈಗಾಗಲೇ ಪೂರ್ಣವಾಗಿದೆ. ಅಲ್ಲಿ ಸಂಸ್ಕರಣೆ ಮಾಡಿದ ಸಮುದ್ರದ ನೀರನ್ನು ಪೈಪ್‌ಲೈನ್ ಮೂಲಕ ಎಂಆರ್‌ಪಿಎಲ್‌ಗೆ ಸರಬರಾಜು ಮಾಡಲಾಗುತ್ತದೆ.

 637 ಕೋಟಿ ರೂ. ವೆಚ್ಚ: ಉಪ್ಪು ನೀರು ಸಂಸ್ಕರಣಾ ಘಟಕ ನಿರ್ಮಾಣ ಯೋಜನೆಗೆ ಒಟ್ಟು 637 ಕೋಟಿ ರೂ. ವೆಚ್ಚ ತಗು ಲಿದೆ. ಈ ಪೈಕಿ ಚೆನ್ನೈ ಮೂಲದ ಬಹು ರಾಷ್ಟ್ರೀಯ ಕಂಪೆನಿ ‘ವಿಎ ಟೆಕ್ ವಬಾಗ್’ಗೆ 550 ಕೋಟಿ ರೂ.ಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಇದೇ ಕಂಪೆನಿ 20ಕ್ಕೂ ಹೆಚ್ಚು ರಾಷ್ಟ್ರ ಗಳಲ್ಲಿ ಇಂತಹ ಬೃಹತ್ ಸ್ಥಾವರ ನಿರ್ಮಾಣದ ಅನುಭವ ಹೊಂದಿದೆ. ತಣ್ಣೀರುಬಾವಿ ಸಮೀಪದ 13 ಎಕರೆ ಪ್ರದೇಶದಲ್ಲಿ ಸ್ಥಾವರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಉಳಿಕೆ ಶೇ.10ರಷ್ಟು ಕಾಮಗಾರಿ ನಡೆಯಲು ಬಾಕಿ ಯಿದೆ. ಅಕ್ಟೋಬರ್ ತಿಂಗಳಲ್ಲಿ ಬಳಕೆಗೆ ಅವಕಾಶ ದೊರೆಯಲಿದೆ. ಎಂಆರ್‌ಪಿಎಲ್‌ಗೆ ಅಗತ್ಯವಿರುವ ನೀರನ್ನು ಘಟಕದ ಮೂಲಕವೇ ಪಡೆಯಲು ಉದ್ದೇಶಿಸಲಾಗಿದೆ ಎನ್ನುತ್ತಾರೆ ಎಂಆರ್‌ಪಿಎಲ್‌ನ ಕಾರ್ಪೊರೇಟ್ ಸಂವಹನದ ಪ್ರಧಾನ ವ್ಯವಸ್ಥಾಪಕ ರುಡಾಲ್ಫ್ ವಿ.ಜೆ. ನರೋನ್ಹ.

ಎಂಆರ್‌ಪಿಎಲ್‌ಗೆ ಆರು ಎಂಜಿಡಿ ನೀರು: ಎಂಆರ್‌ಪಿಎಲ್‌ನಲ್ಲಿ ರಿಫೈನರಿಯನ್ನು ಚಲಾಯಿಸುವುದಕ್ಕೆ ಪ್ರತಿದಿನ ಆರು ಎಂಜಿಡಿಯಷ್ಟು ನೀರು ಬೇಕಾಗುತ್ತದೆ. ಇದರಲ್ಲಿರುವ ಕ್ಯಾಪ್ಟಿವ್ ಪವರ್ ಪ್ಲಾಂಟ್ ಮೂಲಕ ವಿದ್ಯುತ್ ಉತ್ಪಾದಿಸಲು ಅಪಾರ ಪ್ರಮಾಣದ ನೀರಿನ ಅಗತ್ಯವಿದೆ. ಅತ್ಯಧಿಕ 300ರಿಂದ 400 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಕಚ್ಚಾ ತೈಲವನ್ನು ಸಂಸ್ಕರಿಸಲಾಗುತ್ತಿದ್ದು, ಅದನ್ನು ತಣಿಸುವುದಕ್ಕೆ ಮತ್ತೆ ಭಾರೀ ಪ್ರಮಾಣದ ನೀರಿನ ಅಗತ್ಯವಿದೆ ಎನ್ನುತ್ತಾರೆ ಅಧಿಕಾರಿಗಳು.

ನದಿ ನೀರನ್ನು ಆಶ್ರಯಿಸುವ ಬದಲು ಸಮುದ್ರದ ಉಪ್ಪು ನೀರನ್ನು ಸಂಸ್ಕರಣೆ ಮಾಡಿ ಬಳಕೆ ಮಾಡಲು ಎಂಆರ್‌ಪಿಎಲ್ ನಿರ್ಧರಿಸಿದ್ದು, ತಣ್ಣೀರುಬಾವಿಯಲ್ಲಿ ಘಟಕ ನಿರ್ಮಾಣ ಕೈಗೊಂಡಿದೆ. ಕೋವಿಡ್‌ನಿಂದಾಗಿ ಕಾಮಗಾರಿಯ ವೇಗ ಕುಂಠಿತವಾಗಿತ್ತು. ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಅಕ್ಟೋಬರ್ ವೇಳೆಗೆ ಬಳಕೆಗೆ ಸಿಗಲಿದೆ. ಇದು ನೀರಿನ ಬಳಕೆಗೆ ಸಂಬಂಧಿಸಿ ಮಹತ್ವದ ಯೋಜನೆ.

  ರುಡಾಲ್ಫ್ ವಿ.ಜೆ. ನರೋನ್ಹ, ಪ್ರಧಾನ ವ್ಯವಸ್ಥಾಪಕ, ಕಾರ್ಪೊರೇಟ್ ಸಂವಹನ, ಎಂಆರ್‌ಪಿಎಲ್

ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬ್ರವರಿ ನಂತರ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನೇತ್ರಾವತಿಯಲ್ಲಿ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಕೊರತೆ ಎದುರಾಗುವ ಕಾರಣದಿಂದ ನೇತ್ರಾವತಿಯಿಂದ ಕೈಗಾರಿಕೆಗಳಿಗೆ ವಿತರಿಸುವ ನೀರನ್ನು ಕಡಿತ ಮಾಡಲಾಗುತ್ತದೆ. ಕೈಗಾರಿಕೆಗಳಿಗೆ ನೀರಿನ ಸಮಸ್ಯೆ ಎದುರಾದಾಗ ಎಂಆರ್‌ಪಿಎಲ್ ಸೇರಿದಂತೆ ಕೆಲವು ಕಂಪೆನಿಗಳು ಶಟ್‌ಡ್‌ನ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ನದಿ ನೀರನ್ನೇ ಅವಲಂಬಿಸುವ ಬದಲು ಪರ್ಯಾಯದ ಬಗ್ಗೆ ಯೋಚಿಸಬೇಕು ಎಂದು ಮನಗಂಡು ಉಪ್ಪುನೀರು ಸಂಸ್ಕರಣ ಘಟಕ ನಿರ್ಮಿಸಲಾಗಿದೆ.

ಮಂಗಳೂರಿನ ನಾಲ್ಕು ಕಡೆಗಳಲ್ಲಿ ಪಾಲಿಕೆ ವತಿಯಿಂದ ನಿರ್ಮಿಸಿರುವ ಎಸ್‌ಟಿಪಿಗೆ (ಸಂಸ್ಕರಣಾ ಘಟಕ) ಬರುತ್ತದೆ. 16 ಎಂಎಲ್‌ಡಿ ಸಾಮರ್ಥ್ಯದ ಸುರತ್ಕಲ್ ಎಸ್‌ಟಿಪಿ, 20 ಎಂಎಲ್‌ಡಿಯ ಜಪ್ಪಿನಮೊಗರು ಎಸ್‌ಟಿಪಿ, 44.4 ಎಂಎಲ್‌ಡಿಯ ಕಾವೂರು ಎಸ್‌ಟಿಪಿ ಹಾಗೂ 8.7 ಎಂಎಲ್‌ಡಿ ಸಾಮರ್ಥ್ಯದ ಪಚ್ಚನಾಡಿ ಎಸ್‌ಟಿಪಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತದೆ. ಇದರಲ್ಲಿ ಕಾವೂರು ಎಸ್‌ಟಿಪಿಯ ನೀರನ್ನು ಮಾತ್ರ ಸದ್ಯ ಸಂಸ್ಕರಣೆ ಮಾಡಿದ ನಂತರ ಎಂಆರ್‌ಪಿಎಲ್ ಪಡೆದುಕೊಳ್ಳುತ್ತಿದೆ ಎನ್ನುತ್ತಾರೆ ಅಧಿಕಾರಿಗಳು.

ನೀರಿನ ಬರ ಎದುರಿಸಲು ಘಟಕ

ಮಂಗಳೂರಿನಲ್ಲಿ ಮೂರು-ನಾಲ್ಕು ವರ್ಷಗಳ ಹಿಂದೆ ಎದುರಾದ ನೀರಿನ ಕೊರತೆಯ ಬಿಸಿ ಎಂಆರ್‌ಪಿಎಲ್‌ಗೂ ತಟ್ಟಿತ್ತು. ದಕ್ಷಿಣ ಭಾರತದ ಏಕೈಕ ಯೂರಿಯ ಉತ್ಪಾದನೆ ಘಟಕವಾದ ಎಂಸಿಎಫ್ ಕೂಡ ನೀರಿಲ್ಲದೆ ತಿಂಗಳ ಕಾಲ ಉತ್ಪಾದನೆಯನ್ನೇ ಸ್ಥಗಿತಗೊಳಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಎಂಆರ್‌ಪಿಎಲ್ ತನ್ನದೇ ಆದ ನೀರಿನ ವ್ಯವಸ್ಥೆಯನ್ನು ಹೊಂದಲು ಅಂದೇ ತೀರ್ಮಾನಿಸಿತ್ತು. ಅದರ ಕಾರ್ಯರೂಪವೇ ಸಮುದ್ರದ ಉಪ್ಪುನೀರು ಸಂಸ್ಕರಣ ಘಟಕವಾಗಿದೆ.

ಈ ಹಿಂದೆಯೇ ನಡೆದಿತ್ತು ಸಿಹಿನೀರಿನ ಆವಿಷ್ಕಾರ

ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸುವ ಆವಿಷ್ಕಾರವು ಕರಾವಳಿ ಭಾಗದಲ್ಲೂ ಈ ಹಿಂದೆ ನಡೆದಿತ್ತು. ಉಡುಪಿಯ ಕಾರ್ಕಳದ ನಿಟ್ಟೆ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ಕಾರ್ಯರೂಪಕ್ಕೆ ತಂದಿದ್ದರು. ‘ಸೀ ವಾಟರ್ ಸೋಲಾರ್ ಡಿಸ್ಯಾಲಿನೇಟರ್’ ಮಾದರಿಯನ್ನು ಕೈಗೆತ್ತಿಕೊಂಡು ಪ್ರಯೋಗದಲ್ಲಿ ಯಶಸ್ಸು ಕಂಡಿದ್ದರು.

ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ ಶ್ರೇಯಸ್ ಪೈ, ಸುವಿಧ್ ಅಧಿಕಾರಿ, ಹರ್ಷ ಕರ್ಕೇರ ಹಾಗೂ ವಿನಯರಾಜ್ ಹೆಬ್ಬಾರ್ ಎಂಬವರು ಪ್ರಾಧ್ಯಾಪಕ ಡಾ.ಮಲ್ಲಿಕಪ್ಪ ಮಾರ್ಗದರ್ಶನದಲ್ಲಿ ಸಮುದ್ರ ನೀರಿನಿಂದ ಉಪ್ಪಿನ ಅಂಶವನ್ನು ಹೊರ ತೆಗೆದು ಕುಡಿಯಲು ಯೋಗ್ಯವಾದ ನೀರನ್ನಾಗಿ ಮಾಡುವ ಸಂಶೋಧನೆ ನಡೆಸಿದ್ದರು. ವಿದ್ಯಾರ್ಥಿಗಳ ಆವಿಷ್ಕಾರದಲ್ಲಿ ಒಂದೇ ದಿನದಲ್ಲಿ ಆರು ಲೀಟರ್ ಸಿಹಿನೀರನ್ನು ಉತ್ಪಾದಿಸಲಾಗಿತ್ತು.

Writer - ಬಂದೇನವಾಝ್ ಮ್ಯಾಗೇರಿ

contributor

Editor - ಬಂದೇನವಾಝ್ ಮ್ಯಾಗೇರಿ

contributor

Similar News