ಕೋವಿಡ್ ನಿಯಂತ್ರಣದಲ್ಲಿ ಕೇರಳ ವಿಫಲವಾಗಿದೆ ಎಂದು ಬಿಂಬಿಸಲು ಅಭಿಯಾನ ನಡೆಯುತ್ತಿದೆ: ಕೇರಳ ಆರೋಗ್ಯ ಸಚಿವೆ ಆರೋಪ

Update: 2021-07-30 08:08 GMT

ತಿರುವನಂತಪುರಂ: ಕೋವಿಡ್-19 ನಿಯಂತ್ರಿಸಲು ಕೇರಳ ವಿಫಲವಾಗಿದೆ ಎಂದು  ಬಿಂಬಿಸಲು ಅಭಿಯಾನವೇ ನಡೆಯುತ್ತಿದೆ ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಗುರುವಾರ ಆರೋಪಿಸಿದ್ದಾರೆ.

ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಕೋವಿಡ್ ನಿಯಂತ್ರಣಕ್ಕೆ ಬಹಳಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ ಎಂದು ಹೇಳಿದರು.

"ಆ ದಿನಗಳಲ್ಲಿ ಕೂಡ (ನಿರ್ಬಂಧಗಳನ್ನು ಸಡಿಲಿಸಿದ ಸಮಯ) ಒಟ್ಟು ಪಾಸಿಟಿವಿಟಿ ಪ್ರಮಾಣ ಸುಮಾರು 12%ದಷ್ಟಿತ್ತು, ಆದರೆ ರಾಜ್ಯದ ಆಡಳಿತ ವ್ಯವಸ್ಥೆ ಕೋವಿಡ್ ನಿಯಂತ್ರಣಕ್ಕೆ ವಿಫಲವಾಗಿದೆ ಎಂದು ಬಿಂಬಿಸುವ ಯತ್ನ ದುರದೃಷ್ಟಕರ. ಕೇರಳದ ಪ್ರಸಕ್ತ ವ್ಯವಸ್ಥೆ ಬಹಳಷ್ಟು ಉತ್ತಮವಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ರಾಜ್ಯದ ಜನಸಂಖ್ಯಾ ಸಾಂದ್ರತೆ ಅಧಿಕವಾಗಿದೆ" ಎಂದು ಅವರು ಹೇಳಿದರು.

ಕೋವಿಡ್-19ರ ಡೆಲ್ಟಾ ರೂಪಾಂತರಿ ರಾಜ್ಯದಲ್ಲಿ ಪ್ರಕರಣಗಳ ಏರಿಕೆಗೆ ಕಾರಣ, ರಾಜ್ಯದಲ್ಲಿ ಕೋವಿಡ್-19 ಪರೀಕ್ಷೆಗಳನ್ನು ವ್ಯಾಪಕವಾಗಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. "ಬುಧವಾರ 1.96 ಲಕ್ಷ ಪರೀಕ್ಷೆಗಳು ಹಾಗೂ ಗುರುವಾರ 1.63 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿದೆ. ಎಲ್ಲಾ ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಸಂಪರ್ಕಿತರನ್ನು ಪರೀಕ್ಷೆಗೊಳಪಡಿಸಲಾಗುತ್ತಿದೆ" ಎಂದು ಅವರು ಹೇಳಿದರು.

ಐಸಿಎಂಆರ್ ನಡೆಸಿದ ಸಮೀಕ್ಷೆ ಪ್ರಕಾರ ಕೇರಳದ 44.4% ಜನಸಂಖ್ಯೆಯಲ್ಲಿ ಕೋವಿಡ್-19 ಪ್ರತಿಕಾಯಗಳಿವೆ ಇದು ಸೋಂಕಿನಿಂದ ಅಥವಾ ಲಸಿಕೆ ನೀಡಿಕೆಯಿಂದ ಆಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಯಾವುದೇ ಸೋಂಕಿತರು ಆಕ್ಸಿಜನ್ ಯಾ ಹಾಸಿಗೆ ಕೊರತೆಯಿಂದ ಸತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ರಾಜ್ಯದಲ್ಲಿ ಗುರುವಾರ ಸತತ ಮೂರನೇ ದಿನ 22,000ಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News