ಬಿಹಾರ: ಮೇಯರ್ ಶಿವರಾಜ್ ಪಾಸ್ವಾನ್ ಗುಂಡಿಕ್ಕಿ ಹತ್ಯೆ

Update: 2021-07-30 13:12 GMT
photo: ANI

ಪಾಟ್ನಾ: ಬಿಹಾರದ ಕಟಿಹಾರ್ ಮೇಯರ್ ಅವರನ್ನು ಗುರುವಾರ ಸಂಜೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 40 ವರ್ಷದ ಶಿವರಾಜ್ ಪಾಸ್ವಾನ್  ಹತ್ಯೆಗೀಡಾದವರು. ಈ ಘಟನೆ ನಡೆದಾಗ ಪಾಸ್ವಾನ್ ಅವರು ಸಭೆ ಮುಗಿಸಿ  ಮನೆಗೆ ಮರಳುತ್ತಿದ್ದರು. ಪಾಸ್ವಾನ್ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ..

ನೆರೆಯ ಪುರ್ನಿಯಾದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದ ಕ್ರಿಮಿನಲ್ ಗುಡ್ಡು ಮಿಯಾ ಹತ್ಯೆಯಾದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.

ಪಾಸ್ವಾನ್ ತನ್ನ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಸಂತೋಶಿ ಚೌಕ್ ಬಳಿ ಮೂವರು ಶಸ್ತ್ರಸಜ್ಜಿತ ದುಷ್ಕರ್ಮಿಗಳು ಅವರನ್ನು ತಡೆದು ಪರಾರಿಯಾಗುವ ಮುನ್ನ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಶಿವರಾಜ್ ಪಾಸ್ವಾನ್ ಅವರನ್ನು ಕಟಿಹಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಕೆಎಂಸಿಎಚ್) ಕರೆದೊಯ್ಯಲಾಯಿತು. ಅಲ್ಲಿ ವೈದ್ಯರ ತಂಡವು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಘಟನೆಯ ನಂತರ ಅಪರಾಧಿಗಳು ಹಲವು ಸುತ್ತು ಗುಂಡು ಹಾರಿಸುವ ಮೂಲಕ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

11 ಮಂದಿಯ ವಿರುದ್ಧ ಎಫ್ ಐಆರ್, 4 ಆರೋಪಿಗಳ ಬಂಧನ

ಗುರುವಾರ ರಾತ್ರಿ ನಡೆದ ಬಹುಚರ್ಚಿತ ಮೇಯರ್ ಹತ್ಯೆ ಘಟನೆಗೆ ಸಂಬಂಧಿಸಿ 11 ಜನರ ವಿರುದ್ದ ಎಫ್ ಐಆರ್ ದಾಖಲಿಸಲಾಗಿದ್ದು, ಈ ಪೈಕಿ 4 ಆರೋಪಿಗಳನ್ನು ಬಂಧಿಸಲಾಗಿದೆ. ಇತರ ಆರೋಪಿಗಳ ಬಂಧನಕ್ಕಾಗಿ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ. ಈ ಪ್ರಕರಣದಲ್ಲಿ ಬಿಜೆಪಿ ಶಾಸಕಿ ಕವಿತಾ ಪಾಸ್ವಾನ್ ಅವರ ಸೋದರಳಿಯನ  ಹೆಸರು ಕೇಳಿಬಂದಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News