ಅಲೋಪತಿ ಕುರಿತು ಟೀಕೆ: ಬಾಬಾ ರಾಮದೇವ್ ಗೆ ನೋಟಿಸ್ ಹೊರಡಿಸಿದ ದಿಲ್ಲಿ ಹೈಕೋರ್ಟ್
ಹೊಸದಿಲ್ಲಿ,ಜು.30: ಅಲೋಪತಿ ವೈದ್ಯಪದ್ಧತಿಯನ್ನು ಟೀಕಿಸಿದ್ದ ಯೋಗಗುರು ಬಾಬಾ ರಾಮದೇವ ಅವರಿಗೆ ಅಲೋಪತಿ ಮತ್ತು ಅಲೋಪತಿ ವೈದ್ಯರ ವಿರುದ್ಧ ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ದಿಲ್ಲಿ ಉಚ್ಚ ನ್ಯಾಯಾಲಯವು ಶುಕ್ರವಾರ ನೋಟಿಸ್ ಹೊರಡಿಸಿದೆ. ಕೋವಿಡ್ ಪ್ರಕರಣಗಳಲ್ಲಿ ಚಿಕಿತ್ಸಾ ಪದ್ಧತಿಗಾಗಿ ರಾಮದೇವ ಅಲೋಪತಿ ವೈದ್ಯರನ್ನು ಟೀಕಿಸಿದ್ದರು. ನ್ಯಾಯಾಲಯವು ಆ.10ರಂದು ಈ ವಿಷಯವನ್ನು ವಿಚಾರಣೆಗಾಗಿ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ತನ್ನ ಟೀಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ರಾಮದೇವ ತನ್ನ ಹೇಳಿಕೆಯನ್ನು ಹಿಂಪಡೆದುಕೊಂಡಿದ್ದರು. ಕೊರೋನವೈರಸ್ ಚಿಕಿತ್ಸೆಯಲ್ಲಿ ಕೆಲವು ಔಷಧಿಗಳ ಬಳಕೆಯನ್ನು ಪ್ರಶ್ನಿಸಿದ್ದ ಅವರು,ಕೋವಿಡ್ಗಾಗಿ ಅಲೋಪತಿ ಔಷಧಿಗಳನ್ನು ಸೇವಿಸಿದ ಬಳಿಕ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.
ರಾಮದೇವ ಹೇಳಿಕೆಯ ವಿರುದ್ಧ ವೈದ್ಯ ಸಂಘಗಳಿಂದ ತೀವ್ರ ಪ್ರತಿಭಟನೆಯ ಬಳಿಕ ಇಂತಹ ಹೇಳಿಕೆ ಅತ್ಯಂತ ದುರದೃಷ್ಟಕರ ಎಂದು ಬಣ್ಣಿಸಿದ್ದ ಆಗಿನ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ ಹೇಳಿಕೆಯನ್ನು ವಾಪಸ್ ಪಡೆಯುವಂತೆ ಅವರಿಗೆ ಸೂಚಿಸಿದ್ದರು.