ಮಹಾರಾಷ್ಟ್ರ: ನಕ್ಸಲ್ ದಂಪತಿ ಪೊಲೀಸರಿಗೆ ಶರಣು
ನಾಗಪುರ, ಜು. 30: ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ನಕ್ಸಲ್ ದಂಪತಿ ಮಹಾರಾಷ್ಟ್ರದ ಗಡ್ಚಿರೋಳಿ ಜಿಲ್ಲೆಯಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಇವರ ತಲೆಗೆ 8 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಶರಣಾದ ನಕ್ಸಲ್ ದಂಪತಿಯನ್ನು ವಿನೋದ್ ಆಲಿಯಾಸ್ ಮಣಿರಾಮ್ ಬೋಗಾ (32), ಅವರ ಪತ್ನಿ ಕವಿತಾ ಆಲಿಯಾಸ್ ಸಟ್ಟೋ ಕೊವಚಿ (33) ಎಂದು ಗುರುತಿಸಲಾಗಿದೆ. ಬೋಗಾ ಗಡ್ಚಿರೋಳಿಯ ಬೋಟೆಝರಿಯ ನಿವಾಸಿ.
ಮಾವೋವಾದಿಗಳ ಕೊರ್ಚಿ ದಳಂನ ಪ್ರದೇಶ ಸಮಿತಿಯ ಸದಸ್ಯನಾಗಿದ್ದ ಈತ ವೈದ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈತ 13 ಹತ್ಯೆ ಪ್ರಕರಣಗಳು ಹಾಗೂ ಪೊಲೀಸ್- ನಕ್ಸಲ್ ಎನ್ಕೌಂಟರ್ನ 21 ಪ್ರಕರಣಗಳಲ್ಲಿ ಬೇಕಾಗಿದ್ದ. ಈತನ ತಲೆಗೆ 6 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಈತನ ಪತ್ನಿ ತಿಪಾಗಢ ದಳಂ ನ ಸದಸ್ಯೆ ಈಕೆಯ ತಲೆಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಈಕೆ ಪೊಲೀಸ್-ಮಾವೋವಾದಿ ಎನ್ಕೌಂಟರ್ನ 5 ಪ್ರಕರಣ, ಬೆಂಕಿ ಹಚ್ಚಿದ 1 ಪ್ರಕರಣ ಹಾಗೂ ಇತರ ಪ್ರಕರಣಗಳಿಗೆ ಬೇಕಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರು ಗಡ್ಚಿರೋಳಿಯ ಪೊಲೀಸ್ ಅಧೀಕ್ಷಕ ಅಂಕಿತ್ ಗೋಯಲ್ ಅವರ ಸಮ್ಮುಖದಲ್ಲಿ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.