ಲಾಕ್ಡೌನ್ ಸಡಿಲಿಕೆ, ಕೋವಿಡ್ ನಿಯಮಗಳ ಉಲ್ಲಂಘನೆ ಸೋಂಕು ಹೆಚ್ಚಳಕ್ಕೆ ಕಾರಣ: ಕೇಂದ್ರ
ಹೊಸದಿಲ್ಲಿ,ಜು.30: ಲಾಕ್ಡೌನ್ ಸಡಿಲಿಕೆ,ಕೋವಿಡ್ ನಿಯಮಗಳ ಪಾಲನೆಯಲ್ಲಿ ಸಮುದಾಯದ ನಿರ್ಲಕ್ಷ ಮತ್ತು ಕೊರೋನವೈರಸ್ನ ಹೆಚ್ಚು ಸಾಂಕ್ರಾಮಿಕ ಪ್ರಭೇದಗಳ ಹರಡುವಿಕೆ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಸಹಾಯಕ ಆರೋಗ್ಯ ಸಚಿವೆ ಭಾರತಿ ಪ್ರವೀಣ ಪವಾರ್ ಅವರು ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು.
ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ನಂತಹ ಪ್ರಭೇದಗಳಿಂದ ಸೋಂಕು ಉಂಟಾಗಿರುವ ಪ್ರಕರಣಗಳಲ್ಲಿ ಹೆಚ್ಚಿನ ಸಾಂಕ್ರಾಮಿಕತೆಯನ್ನು ಸೂಚಿಸುವ ಕೆಲವು ಸಾಕ್ಷಾಧಾರಗಳು ಲಭ್ಯವಿವೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ ಪವಾರ್,ಆರೋಗ್ಯ ಸಚಿವಾಲಯವು ತಜ್ಞರೊಂದಿಗೆ ಚರ್ಚಿಸಿದ ಬಳಿಕ ಕೋವಿಡ್-19 ವೈರಸ್ ನ ರೂಪಾಂತರಿಗಳಿಂದ ಸೋಂಕಿನ ಪ್ರಕರಣಗಳಲ್ಲಿ ಹಾಲಿ ಕೋವಿಡ್ ಪ್ರಕರಣಗಳಲ್ಲಿ ನೀಡುತ್ತಿರುವ ಚಿಕಿತ್ಸೆಯೇ ಸಾಕು ಮತ್ತು ಚಿಕಿತ್ಸಾ ವಿಧಾನದಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲವೆಂದು ನಿರ್ಧರಿಸಿದೆ ಎಂದರು.
ಡೆಲ್ಟಾ ಪ್ಲಸ್ ಮತ್ತು ಲಂಬ್ಡಾಗಳಂತಹ ಹೊಸ ಪ್ರಭೇದಗಳು ಹೆಚ್ಚು ಸಾಂಕ್ರಾಮಿಕವೇ ಮತ್ತು ಕೇರಳ,ಅರುಣಾಚಲ ಪ್ರದೇಶ,ತ್ರಿಪುರಾ,ಒಡಿಶಾ,ಛತ್ತೀಸ್ಗಡ ಹಾಗೂ ಮಣಿಪುರ ಸೇರಿದಂತೆ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಕರಣಗಳ ಹೆಚ್ಚಳಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ಕಾಯಿಲೆಯ ತುರ್ತು ನಿಯಂತ್ರಣಕ್ಕೆ ಸರಕಾರವು ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಪವಾರ್,ಆರೋಗ್ಯವು ರಾಜ್ಯಕ್ಕೆ ಸಂಬಂಧಿಸಿದ ವಿಷಯವಾಗಿದ್ದರೂ ಕೇಂದ್ರ ಸರಕಾರವು ಸಾಂಕ್ರಾಮಿಕವನ್ನು ಎದುರಿಸಲು ಹಾಲಿ ಆರೋಗ್ಯ ಮೂಲಸೌಕರ್ಯಗಳನ್ನು ಇನ್ನಷ್ಟು ಬಲಗೊಳಿಸಲು ಅಗತ್ಯ ತಾಂತ್ರಿಕ,ಹಣಕಾಸು ಮತ್ತು ಲಾಜಿಸ್ಟಿಕ್ ಬೆಂಬಲಗಳನ್ನು ರಾಜ್ಯಗಳಿಗೆ ಒದಗಿಸಿದೆ.
ಐಸೊಲೇಷನ್ ಮತ್ತು ಐಸಿಯು ಹಾಸಿಗೆಗಳ ಸಂಖ್ಯೆಗಳನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ. ಉಕ್ಕು ತಯಾರಿಕೆ ಮತ್ತು ಇತರ ಸ್ಥಾವರಗಳಲ್ಲಿ ಆಮ್ಲಜನಕದ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಆಸ್ಪತ್ರೆಗಳಿಗೆ ದ್ರವ ವೈದ್ಯಕೀಯ ಆಮ್ಲಜನಕದ ದೈನಂದಿನ ಪೂರೈಕೆಯನ್ನು ಹೆಚ್ಚಿಸಲಾಗಿದೆ. ಅಲ್ಲದೆ ಆಮ್ಲಜನಕದ ಕೈಗಾರಿಕಾ ಬಳಕೆಯನ್ನೂ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು.