ಎಬಿವಿಪಿ ದೂರಿನ ನಂತರ ಪೊಲೀಸರ ಎಚ್ಚರಿಕೆ: ವೆಬಿನಾರ್ ನಿಂದ ಹಿಂದೆ ಸರಿದ ಮಧ್ಯಪ್ರದೇಶ ವಿವಿ

Update: 2021-07-31 07:46 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಮಧ್ಯ ಪ್ರದೇಶದ ಸಾಗರ್ ಜಿಲ್ಲೆಯ ಡಾ ಹರಿಸಿಂಗ್ ಗೌರ್ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗವು  ಆಯೋಜಿಸಿದ್ದ ವೆಬಿನಾರ್ ಒಂದು ಆರಂಭಗೊಳ್ಳಲು ಕೆಲವೇ ಗಂಟೆಗಳಿರುವಾಗ ವಿಶ್ವವಿದ್ಯಾಲಯ ಅದರ ಆಯೋಜಕತ್ವದಿಂದ ಹಿಂದೆ ಸರಿದಿದೆ. ಧಾರ್ಮಿಕ ಮತ್ತು ಜಾತಿ ಭಾವನೆಗಳಿಗೆ ನೋವುಂಟು ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ಪೊಲೀಸರು ವಿವಿ ಉಪಕುಲಪತಿಗಳಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ವೆಬಿನಾರ್ ನಿಂದ ವಿವಿ ಹಿಂದೆ ಸರಿದಿದೆ. ಎಬಿವಿಪಿ ಈ ಕುರಿತಂತೆ ದಾಖಲಿಸಿದ ದೂರಿನ ಆಧಾರದಲ್ಲಿ ಪೊಲೀಸರು ಇಂತಹ ಕ್ರಮ ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.

ಈ ವೆಬಿನಾರ್‍ನಲ್ಲಿ ಮಾಜಿ ಸಿಎಸ್‍ಐಆರ್ ವಿಜ್ಞಾನಿ ಗೌಹರ್ ರಝಾ, ದಿಲ್ಲಿ ವಿವಿಯ ಪ್ರೊಫೆಸರ್ ಅಪೂರ್ವಾನಂದ್, ಮೆಸಾಚುಸೆಟ್ಸ್ ನ ಬ್ರಿಡ್ಜ್ ವಾಟರ್ ಸ್ಟೇಟ್ ವಿವಿಯ ಸಹಾಯಕ ಪ್ರೊಫೆಸರ್ ಡಾ ಅಸೀಂ ಹಸ್ನೈನ್ ಹಾಗೂ ಐಐಟಿ ಹೈದರಾಬಾದ್‍ನ ಪ್ರೊಫೆಸರ್ ಹರ್ಜಿಂದರ್ ಸಿಂಗ್ ಭಾಗವಹಿಸುವವರಿದ್ದರು. "ವೈಜ್ಞಾನಿಕ ಮನೋಭಾವನೆ  ಬೆಳೆಸುವಲ್ಲಿ ಸಾಂಸ್ಕೃತಿಕ ಮತ್ತು ಭಾಷಾ ಅಡ್ಡಿಗಳು" ಎಂಬ ವಿಚಾರದಲ್ಲಿ ಈ ವೆಬಿನಾರ್ ಅನ್ನು ಗುರುವಾರ ಅಮೆರಿಕಾದ ಮೊಂಟ್‍ಕ್ಲೇರ್ ಸ್ಟೇಟ್ ವಿವಿ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

ವೆಬಿನಾರ್ ಶುಕ್ರವಾರ ನಿಗದಿಯಂತೆ ನಡೆದರೂ ಹರಿಸಿಂಗ್ ಗೌರ್ ವಿವಿ ಅದರ ಸಂಚಾಲಕ ಸ್ಥಾನದಿಂದ ಹಿಂದೆ ಸರಿದಿತ್ತು.

ಈ ವೆಬಿನಾರ್ ನಲ್ಲಿ ರಝಾ ಹಾಗೂ ಅಪೂರ್ವಾನಂದ್ ಅವರ ಭಾಗವಹಿಸುವಿಕೆಯನ್ನು ಪ್ರಶ್ನಿಸಿ ಎಬಿವಿಪಿ ಪೊಲೀಸರಿಗೆ ದೂರಿತ್ತೆನ್ನಲಾಗಿದ್ದು ಅವರಿಬ್ಬರು ದೇಶವಿರೋಧಿ ಭಾವನೆಗಳನ್ನು ಹೊಂದಿದ್ದಾರೆ ಹಾಗೂ ಅಂತಹ ಚಟುವಟಿಕೆಗಳಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ವೆಬಿನಾರ್‍ನಲ್ಲಿ ಭಾಷಣ ಮಾಡಲಿರುವವರ ಪೂರ್ವ ಇತಿಹಾಸ ಅವರ ದೇಶವಿರೋಧ ಭಾವನೆ ಹಾಗೂ ಅವರು ಹಿಂದೆ ನೀಡಿರುವ ಜಾತಿ ಸಂಬಂಧಿ ಹೇಳಿಕೆಗಳ ಕುರಿತು ತಮಗೆ ಮಾಹಿತಿ ದೊರಕಿದೆ ಎಂದು ಸಾಗರ ಜಿಲ್ಲಾ ಎಸ್‍ಪಿ ಅತುಲ್ ಸಿಂಗ್ ಅವರು ವಿವಿಗೆ ಗುರುವಾರ ಕಳುಹಿಸಿದ ಪತ್ರದಲ್ಲಿ ವಿವರಿಸಲಾಗಿದೆ.

ವೆಬಿನಾರ್‍ನಲ್ಲಿ ಚರ್ಚೆಯಾಗುವ ವಿಷಯಗಳು ಹಾಗೂ ಅಲ್ಲಿ ಪ್ರಸ್ತುತಪಡಿಸಲಾಗುವ ವಿಚಾರಗಳ ಕುರಿತು  ಮುಂಚಿತವಾಗಿಯೇ ನಿರ್ಧರಿಸಬೇಕು ಹಾಗೂ ಸಾರ್ವಜನಿಕವಾಗಿ ಸಮಸ್ಯೆಯುಂಟುಮಾಡುವ ಹೇಳಿಕೆಗಳಿಗೆ ಐಪಿಸಿ ಸೆಕ್ಷನ್ 505 ಅನ್ವಯ  ಕ್ರಮ ಕೈಗೊಳ್ಳಲಾಗುವುದು ಎಂದೂ ಪತ್ರದಲ್ಲಿ ಎಚ್ಚರಿಸಲಾಗಿದೆಯೆನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News