ಕೋವಿಡ್ ಲಸಿಕೆ ಪಡೆದವರೂ ಅದನ್ನು ಪಡೆಯದವರಷ್ಟೇ ವೈರಸ್ ಹರಡುತ್ತಾರೆ: ಸಿಡಿಸಿಯ ಎಚ್ಚರಿಕೆ ಗಂಟೆ

Update: 2021-07-31 17:02 GMT

ನ್ಯೂಯಾರ್ಕ್, ಜು.31: ಅಮೆರಿಕದ ಆರೋಗ್ಯ ಅಧಿಕಾರಿಗಳು ಶುಕ್ರವಾರ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿರುವ ಹೊಸ ಅಧ್ಯಯನ ವರದಿಯನ್ನು ಬಿಡುಗಡೆಗೊಳಿಸಿದ್ದು,ಇದು ಸಮಾಜದಲ್ಲಿ ಕೊರೋನವೈರಸ್ ಹೇಗೆ ಹರಡುತ್ತದೆ ಎನ್ನುವುದರ ಕುರಿತು ಸದ್ಯದ ಚಿಂತನೆಯನ್ನು ಗೊಂದಲದಲ್ಲಿ ಕೆಡವಬಹುದು.

ಕೋವಿಡ್ ಸೋಂಕಿಗೆ ತುತ್ತಾದ ಲಸಿಕೆ ಹಾಕಿಸಿಕೊಂಡವರೂ ತಮ್ಮ ಶರೀರದಲ್ಲಿ ಲಸಿಕೆ ಪಡೆಯದವರಲ್ಲಿ ಇರುವಷ್ಟೇ ಪ್ರಮಾಣದಲ್ಲಿ ವೈರಸ್ನ ವಾಹಕರಾಗಿರುತ್ತಾರೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಶನ್(ಸಿಡಿಸಿ) ಇತ್ತೀಚಿಗೆ ನಡೆಸಿದ ಅಧ್ಯಯನವು ತೋರಿಸಿದೆ.

ಸಿಡಿಸಿಯ ಮುಂಚೂಣಿಯ ಸಾಪ್ತಾಹಿಕ ವರದಿಯಲ್ಲಿ ಪ್ರಕಟಗೊಂಡಿರುವ ಅಧ್ಯಯನವು ಲಸಿಕೆ ಪಡೆದಿರುವ ಜನರು ಈಗ ಡೆಲ್ಟಾ ವೈರಸ್ನಿಂದಾಗಿ ಹೆಚ್ಚಿನ ಹರಡುವಿಕೆ ದರಗಳಿರುವ ಸ್ಥಳಗಳಲ್ಲಿ ಒಳಾಂಗಣಗಳಲ್ಲಿಯೂ ಮಾಸ್ಕ್ ಧರಿಸಬೇಕು ಎಂಬ ಇತ್ತೀಚಿನ ಶಿಫಾರಸಿಗೆ ಆಧಾರವಾಗಿದೆ.

ಜನರು ಲಸಿಕೆ ಪಡೆದಿರಲಿ ಇಲ್ಲದಿರಲಿ,ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವಿಕೆಯನ್ನು ಸಿಡಿಸಿಯ ನೂತನ ಮಾರ್ಗಸೂಚಿಗಳು ಒಳಗೊಂಡಿರಬೇಕು ಎಂದು ವರದಿಯ ಲೇಖಕರು ಸೂಚಿಸಿದ್ದಾರೆ.

ಮಸಾಚುಸೆಟ್ಸ್ ನ ಕೇಪ್ ಕಾಡ್ ನಲ್ಲಿಯ ಜನಪ್ರಿಯ ಪ್ರವಾಸಿ ತಾಣ ಪ್ರಾವಿನ್ಸ್ಟೌನ್ನಲ್ಲಿ ಹಲವಾರು ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳ ಬಳಿಕ ಜು.3 ಮತ್ತು ಜು.17ರ ನಡುವೆ ಅಲ್ಲಿಗೆ ಭೇಟಿ ನೀಡಿದ್ದ ಮಸಾಚುಸೆಟ್ಸ್ ನಿವಾಸಿಗಳಲ್ಲಿ 469 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದವು. ಈ ಪೈಕಿ ಶೇ.74ರಷ್ಟು ರೋಗಿಗಳು ಸಂಪೂರ್ಣವಾಗಿ ಲಸಿಕೆಯನ್ನು ಪಡೆದುಕೊಂಡವರಾಗಿದ್ದರು.

133 ರೋಗಿಗಳಿಂದ ಪಡೆಯಲಾಗಿದ್ದ ಶೇ.90ರಷ್ಟು ಮಾದರಿಗಳಲ್ಲಿ ಡೆಲ್ಟಾ ಪ್ರಭೇದ ಪತ್ತೆಯಾಗಿತ್ತು. ಲಸಿಕೆ ಪಡೆದವರಲ್ಲಿ ಮತ್ತು ಪಡೆಯದವರಲ್ಲಿ ವೈರಸ್ ಪ್ರಮಾಣ ಒಂದೇ ರೀತಿಯಲ್ಲಿತ್ತು ಎನ್ನುವುದನ್ನು ಹೆಚ್ಚಿನ ವಿಶ್ಲೇಷಣೆಯು ತೋರಿಸಿದೆ ಎಂದು ಅಧ್ಯಯನ ವರದಿಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News