ದಬಾಯಿಸಲು ಧೈರ್ಯ ಕೊಟ್ಟಿದ್ದೇ ರವಿ ಸರ್!: ಪ್ರಮೋದ್ ಶೆಟ್ಟಿ

Update: 2021-07-31 19:30 GMT

ರವಿಚಂದ್ರನ್ ಸಿನೆಮಾಗಳೆಂದರೆ ಯುವ ತಲೆಮಾರಿನವರಿಗೆ ಮಾತ್ರ ಇಷ್ಟ ಎನ್ನುವ ಕಾಲವಿತ್ತು. ಆದರೆ ಅವರ ಚಿತ್ರಗಳಲ್ಲಿನ ತಾಯಿ ಸೆಂಟಿಮೆಂಟ್ಸ್ ಅಂಶ ಕುಟುಂಬ ಪ್ರೇಕ್ಷಕರನ್ನು ಕೂಡ ಚಿತ್ರಮಂದಿರದತ್ತ ಸೆಳೆದಿತ್ತು. ಆದರೆ ‘ದೃಶ್ಯ’ ಸಿನೆಮಾ ಬಂದ ಬಳಿಕ ಸಸ್ಪೆನ್ಸ್ ಥ್ರಿಲ್ಲರ್ ಅಭಿಮಾನಿಗಳು ಕೂಡ ರವಿಚಂದ್ರನ್ ನಟನೆಗೆ ಅಭಿಮಾನಿಗಳಾಗಿದ್ದಾರೆ. ಅದರಲ್ಲಿಯೂ ದೃಶ್ಯ ಸಿನೆಮಾದ ಎರಡನೇ ಭಾಗ ಬರಲಿದೆ ಎನ್ನುವ ಕಾರಣದಿಂದ ಕಾಯುತ್ತಿರುವವರಿಗೆ ಚಿತ್ರೀಕರಣದಲ್ಲಿ ಭಾಗಿಯಾದ ನಟ ಪ್ರಮೋದ್ ಶೆಟ್ಟಿಯವರು ರವಿಚಂದ್ರನ್ ಸೇರಿದಂತೆ ಪ್ರಮುಖ ಕಲಾವಿದರ ಜೊತೆಗೆ ನಟಿಸಿದ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.


ಮೊದಲ ಬಾರಿ ರವಿಚಂದ್ರನ್ ಅವರೊಂದಿಗೆ ನಟಿಸಿದ ಅನುಭವ ಹೇಗಿತ್ತು? 

 ಸೀನಿಯರ್ಸ್ ಜೊತೆಗೆ ನಟಿಸುವಾಗ ನಮಗೊಂದು ಭಯ ಇರುತ್ತೆ. ಯಾವುದನ್ನು ಯಾವಾಗ ತಪ್ಪಾಗಿ ತಿಳಿದುಕೊಳ್ಳುತ್ತಾರೋ ಎನ್ನುವ ಅಂಜಿಕೆ ಇದ್ದೇ ಇರುತ್ತದೆ. ಚಿತ್ರದಲ್ಲಿ ನಾನು ರವಿ ಸರ್‌ಗೆ ದಬಾಯಿಸುವ ದೃಶ್ಯಗಳಿದ್ದವು. ಆಗ ನಾನು ತುಂಬಾ ಮುಜುಗರಗೊಂಡಿದ್ದೆ. ನಮ್ಮ ಇಂಡಸ್ಟ್ರಿಯ ದೊಡ್ಡ ಸ್ಟಾರ್ ಅವರು. ನಾವೆಲ್ಲಾ ಅವರ ಚಿತ್ರ ನೋಡಿ ಬೆಳೆದವರು. ಅಲ್ಲದೆ ಮೊದಲ ಬಾರಿ ಅವರ ಎದುರು ನಟಿಸಲು ನಿಂತಿದ್ದೆ. ಹಾಗಾಗಿ ಮಾನಿಟರ್ ಮಾಡುವಾಗ ನಾನು ‘‘ಹೀಗೆ ಮಾಡಬಹುದಲ್ಲ’’ ಎಂದು ಡೌಟಲ್ಲೇ ಕೇಳಿದೆ. ‘‘ಹೇ.. ಆರ್ಟಿಸ್ಟ್ ನೀನು, ಪಾತ್ರಕ್ಕೇನು ಬೇಕೋ ಅದನ್ನೆಲ್ಲ ಮಾಡಬಹುದು, ಮಾಡಲೇಬೇಕು. ಧೈರ್ಯವಾಗಿ ಮಾಡು!’’ ಎಂದು ಶಕ್ತಿ ಕೊಟ್ಟರು. ಹಾಗಾಗಿ ಅನುಭವ ಚೆನ್ನಾಗಿಯೇ ಇತ್ತು.


ನಿರ್ದೇಶಕ ಪಿ. ವಾಸು ಅವರೊಂದಿಗೂ ಇದು ನಿಮ್ಮ ಪ್ರಥಮ ಚಿತ್ರವಲ್ಲವೇ?
ಹೌದು. ಆದರೆ ಅವರಿಗೆ ಇದು 67ನೇ ಚಿತ್ರ! ಅಷ್ಟೊಂದು ಸೀನಿಯರ್ ಆಗಿರುವ ಯಾವ ನಿರ್ದೇಶಕರ ಜೊತೆಗೂ ನಾನು ಕೆಲಸ ಮಾಡಿರಲಿಲ್ಲ. ವಿಷ್ಣುವರ್ಧನ್, ಶಿವರಾಜ್‌ಕುಮಾರ್ ಮೊದಲಾದವರನ್ನು ನಿರ್ದೇಶಿಸಿರುವ ವಾಸು ಅವರ ವರ್ತನೆ ಹೇಗಿರಬಹುದು ಎನ್ನುವ ಆತಂಕ ನನ್ನಲ್ಲಿತ್ತು. ನನ್ನ ಪಾತ್ರದ ಚಿತ್ರೀಕರಣ ಕೊನೆಯಾದ ದಿನ ನಾನು ಈ ಬಗ್ಗೆ ಅವರಲ್ಲೇ ಹೇಳಿದ್ದೆ. ಯಾಕೆಂದರೆ ಅವರು ನನ್ನ ಪ್ರೊಫೈಲ್ ನೋಡಿ ಆಯ್ಕೆ ಮಾಡಿದ್ದು ಬಿಟ್ಟರೆ ನಮಗೆ ನೇರ ಪರಿಚಯವೇ ಇರಲಿಲ್ಲ. ನನ್ನ ಹಾವಭಾವಗಳನ್ನೇ ಪಾಸಿಟಿವ್ ಮಾಡಿಕೊಂಡು ಅದಕ್ಕೆ ಅವರದೇ ಶೈಲಿಯನ್ನು ಸೇರಿಸುತ್ತಾ ತುಂಬಾ ಎನರ್ಜೆಟಿಕ್, ಕೊ ಆಪರೇಟಿವ್ ಆಗಿ ಚಿತ್ರೀಕರಣ ಮುಗಿಸಿದರು. ಹನ್ನೆರಡು ದಿನಗಳ ಚಿತ್ರೀಕರಣ ಎಷ್ಟು ಚೆನ್ನಾಗಿ ನಡೆಯಿತು ಅಂದರೆ ಅದನ್ನು ವಿವರಿಸಲು ಸಾಧ್ಯವಿಲ್ಲ. ಮೈನ್ಯೂಟ್ ಮಿಸ್ಟೇಕ್‌ಗಳನ್ನು ಕೂಡ ಗುರುತಿಸಿ ಸರಿಪಡಿಸುತ್ತಾ ಹೋದರು. ಎಲ್ಲಿಯೂ ಹಾರ್ಶ್ ಆಗಿ ನಡೆದುಕೊಂಡಿದ್ದೇ ಇಲ್ಲ.


ತಮಿಳು ನಟ ಪ್ರಭು ಅವರೊಡನೆ ಕಾಂಬಿನೇಶನ್ ಸಂದರ್ಭ ಯಾವ ರೀತಿ ಇತ್ತು?
ಪ್ರಭು ಅವರಂತಹ ಅನುಭವಿ ನಟ ನನ್ನನ್ನು ಆತ್ಮೀಯ ಸ್ನೇಹಿತನಂತೆ ನಡೆಸಿಕೊಂಡರು. ಚಿತ್ರೀಕರಣದ ವೇಳೆ ಜೊತೆಗೆ ನಟಿಸುವಾಗ ನನ್ನ ಮೀಸೆಯ ಒಂದು ಭಾಗ ಮೇಲೆ ಮತ್ತೊಂದು ಭಾಗ ಚೂರು ಕೆಳಗಾಗಿರುವುದನ್ನು ಕಂಡಾಗ ಅವರೇ ಬಂದು ಸರಿ ಮಾಡಿಕೊಡುವಷ್ಟು ಸರಳತನ ತೋರಿಸಿದಂತಹ ವ್ಯಕ್ತಿ. ನನ್ನದು ಪೊಲೀಸ್ ಅಧಿಕಾರಿಯ ಪಾತ್ರ. ಇನ್‌ಶರ್ಟ್ ಎಲ್ಲೋ ಸ್ವಲ್ಪಕೆಟ್ಟು ಹೋದಂತೆ ಕಾಣಿಸಿದರೆ ಅವರೇ ಬಂದು ಸರಿ ಮಾಡುತ್ತಿದ್ದರು. ಅಷ್ಟು ದೊಡ್ಡ ತಾರೆಯಾಗಿದ್ದುಕೊಂಡು ಅಷ್ಟೊಂದು ಡೌನ್ ಟು ಅರ್ಥ್ ಆಗಿರುವ ಕಲಾವಿದರು ಅಪರೂಪ ಎಂದೇ ಹೇಳಬಹುದು.


ಚಿತ್ರದಲ್ಲಿ ಬೇರೆ ಯಾರೊಂದಿಗೆಲ್ಲ ಕಾಣಿಸಿಕೊಳ್ಳಲಿದ್ದೀರಿ?
ಮುಖ್ಯವಾಗಿ ಅನಂತನಾಗ್ ಇದ್ದಾರೆ. ಅವರೊಂದಿಗೆ ನನಗೆ ಇದು ಮೂರನೇ ಚಿತ್ರ. ಮಾತ್ರವಲ್ಲ, ಅವರು ಆರಂಭದಿಂದಲೂ ಆತ್ಮೀಯತೆ ತೋರಿಸಿರುವ ಕಾರಣ ಹೊಸದಾಗಿ ಹೇಳಿಕೊಳ್ಳುವಂತಹ ಅನುಭವಗಳೇನೂ ಇಲ್ಲ. ಆದರೆ ಪ್ರಭು ಸರ್ ಅವರ ಜೋಡಿಯಾಗಿ ನಟಿಸಿರುವ ಆಶಾ ಶರತ್ ಅವರ ಬಗ್ಗೆ ಹೇಳಲೇಬೇಕು. ಕೇರಳದವರಾದ ಆಶಾ ಶರತ್ ಅವರಿಗೆ ಕನ್ನಡ ಭಾಷೆ ಗೊತ್ತೇ ಇಲ್ಲ. ಅವರು ಸಂಭಾಷಣೆಯನ್ನು ಕಷ್ಟಪಟ್ಟು ಕಲಿಯುತ್ತಿದ್ದರು. ಅದರ ಉಚ್ಚಾರಣೆಯ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು. ಮಲಯಾಳಂನ ‘ದೃಶ್ಯಂ’ನಲ್ಲಿ ಇದೇ ಪಾತ್ರವನ್ನೇ ನಿರ್ವಹಿಸಿದ್ದ ಅವರಿಗೆ ಆ ಬಳಿಕ ಸಾಕಷ್ಟು ಪೊಲೀಸ್ ಪಾತ್ರಗಳಿಗಾಗಿಯೇ ಕರೆ ಬರುತ್ತಿರುವುದಾಗಿ ಹೇಳಿ ನಕ್ಕರು. ಕನ್ನಡದಲ್ಲಿ ರೀಮೇಕ್ ಮಾಡಿದರೂ ಚಿತ್ರೀಕರಣದ ವೇಳೆ ತಮಗೆ ಹೊಸ ಅನುಭವ ದೊರಕಿದೆ ಎಂದರು. ಯಾಕೆಂದರೆ ಕನ್ನಡದವರು ಮಲಯಾಳಂ ಸಿನೆಮಾಗಳ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದಾರೆ, ಇಷ್ಟಪಡುತ್ತಾರೆ ಎಂದು ಗೊತ್ತಾಗಿದ್ದೇ ಇಲ್ಲಿಗೆ ಬಂದ ಬಳಿಕ ಎಂದರು.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News