ಭಾರತದಲ್ಲಿ ಬೆಲೆ ಏರಿಕೆಗೆ ನೆಹರೂರ 1947ರ ಸ್ವಾತಂತ್ರ್ಯ ದಿನದ ಭಾಷಣವೇ ಕಾರಣ: ಮಧ್ಯ ಪ್ರದೇಶ ಸಚಿವ ಸಾರಂಗ್

Update: 2021-08-01 13:47 GMT
Photo: Twitter

ಹೊಸದಿಲ್ಲಿ,ಆ.1: ದೇಶದಲ್ಲಿ ಆರ್ಥಿಕ ಸ್ಥಿತಿ ಹದಗೆಡಲು ಮತ್ತು ಬೆಲೆ ಏರಿಕೆಗೆ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು 1947,ಆ.15ರಂದು ಮಾಡಿದ್ದ ‘ತಪ್ಪು’ ಭಾಷಣವೇ ಕಾರಣ ಎಂದು ಹೇಳುವ ಮೂಲಕ ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಅವರು ಕಾಂಗ್ರೆಸ್ ನ ತೀವ್ರ ದಾಳಿಗೆ ಗುರಿಯಾಗಿದ್ದಾರೆ.

ಸಚಿವರ ಹೇಳಿಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು,‌ ವ್ಯಂಗ್ಯಭರಿತ ಪ್ರತಿಕ್ರಿಯೆಗಳು ತುಂಬಿಹೋಗಿವೆ.

ಸರಕಾರದ ವಕ್ತಾರರೂ ಆಗಿರುವ ಸಾರಂಗ್ ಭೋಪಾಲದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸಂದರ್ಭ,"ಕೆಲವೇ ದಿನಗಳಲ್ಲಿ ಬೆಲೆಗಳು ಏರಿಕೆಯಾಗಿದ್ದಲ್ಲ ಅಥವಾ ಆರ್ಥಿಕತೆಯ ಬುನಾದಿ ನಿರ್ಮಾಣಗೊಂಡಿದ್ದಲ್ಲ. ದೇಶದ ಮೊದಲ ಸ್ವಾತಂತ್ರ ದಿನದಂದು ನೆಹರೂ ಅವರು ಕೆಂಪುಕೋಟೆಯ ಮೇಲಿನಿಂದ ಮಾಡಿದ್ದ ತಪ್ಪು ಭಾಷಣ ಆರ್ಥಿಕತೆಯು ಹಳಿತಪ್ಪಲು ಕಾರಣವಾಗಿತ್ತು" ಎಂದು ಹೇಳಿದ್ದರು.

ಬೆಲೆ ಏರಿಕೆಯ ಹೆಗ್ಗಳಿಕೆಯು ಸ್ವಾತಂತ್ರಾನಂತರ ದೇಶದ ಆರ್ಥಿಕತೆಯ ಮೇಲೆ ದಾಳಿ ನಡೆಸಿದ್ದ ನೆಹರೂ ಕುಟುಂಬಕ್ಕೆ ಸಲ್ಲುತ್ತದೆಯಾದ್ದರಿಂದ ದಿಲ್ಲಿಯಲ್ಲಿನ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿವಾಸದ ಎದುರು ಪ್ರತಿಭಟನೆ ನಡೆಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿದ್ದ ಸಾರಂಗ್,ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಆರೇಳು ವರ್ಷಗಳಲ್ಲಿ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಶ್ರಮಿಸಿದ್ದಾರೆ ಎಂದು ಹೇಳಿದ್ದರು.

ಸಾರಂಗ್ ಹೇಳಿಕೆಯ ವೀಡಿಯೊ ವೈರಲ್ ಆದ ಬಳಿಕ ಹಲವಾರು ಕಾಂಗ್ರೆಸ್ ನಾಯಕರು ಟ್ವಿಟರ್ನಲ್ಲಿ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
 
‘ಕೊನೆಗೂ ಅದನ್ನು ಹೇಳಲಾಗಿದೆ. ಬೆಲೆಏರಿಕೆಗೆ ನೆಹರು ಕಾರಣರಾಗಿದ್ದಾರೆ. ಅಷ್ಟಕ್ಕೂ ಬಡಪಾಯಿ ಮೋದಿಜಿ ಏನನ್ನು ಮಾಡಲು ಸಾಧ್ಯ? ಅವರು ಈ ದೇಶದ ಪ್ರಧಾನಿಯಾಗಿದ್ದರೆ ಏನನ್ನಾದರೂ ಮಾಡುತ್ತಿದ್ದರು. ನೆಹರೂಜಿ,ತಕ್ಷಣ ರಾಜೀನಾಮೆ ನೀಡಿ ’ಎಂದು ಮಾಜಿ ಸಚಿವ ಜೈವರ್ಧನ ಸಿಂಗ್ ಟ್ವೀಟಿಸಿದ್ದಾರೆ.

‘ಅವರು (ಸಾರಂಗ್) ಯಾವ ಬಗೆಯ ಮಾದಕ ದ್ರವ್ಯವನ್ನು ಬಳಸುತ್ತಾರೆ ಎನ್ನುವುದು ಗೊತ್ತಾಗಿಲ್ಲ ’ಎಂದು ಇನ್ನೋರ್ವ ಮಾಜಿ ಸಚಿವ ಪಿ.ಸಿ.ಶರ್ಮಾ ಟ್ವಿಟರ್ ನಲ್ಲಿ ಕುಟುಕಿದ್ದರೆ,ಕಾಂಗ್ರೆಸ್ ಐಟಿ ಘಟಕದ ಮುಖ್ಯಸ್ಥ ಅಭಯ ತಿವಾರಿ ಅವರು,‘ವ್ಯಸನ ಮುಕ್ತಗೊಳಿಸುವ ಅಭಿಯಾನ ಮಧ್ಯಪ್ರದೇಶದಲ್ಲಿ ತುರ್ತಾಗಿ ನಡೆಯುವ ಅಗತ್ಯವಿದೆ ’ ಎಂದು ಹೇಳಿದ್ದಾರೆ.

‘ಸಾರಂಗ್ ಶಿವರಾಜ ಸಿಂಗ್ ಚೌಹಾಣ ಸಂಪುಟದ ಇನ್ನೋರ್ವ ಭರವಸೆದಾಯಕ ಸಚಿವರಾಗಿದ್ದಾರೆ ’ಎಂದು ಕಾಂಗ್ರೆಸ್ ವಕ್ತಾರ ನರೇಂದ್ರ ಸಲೂಜಾ ಟೀಕಿಸಿದ್ದಾರೆ.
 ‘ಶಿವರಾಜ ಸರ್ಕಸ್ ಕಂಪನಿಯ ಅರ್ಹ ಸಚಿವ ಸಾರಂಗ್ ಬೆಲೆಏರಿಕೆಗಾಗಿ ತಾನಿನ್ನೂ ಹುಟ್ಟಿಯೇ ಇರದಿದ್ದ 1947ರ ನೆಹರೂ ಭಾಷಣವನ್ನು ದೂರಿದ್ದಾರೆ. 

ಇಲಾಖೆಯ ಸಚಿವರಾಗಿ ಅವರು ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಆಸ್ಪತ್ರೆ ಹಾಸಿಗೆಗಳು,ಆಮ್ಲಜನಕ ಮತ್ತು ರೆಮ್ಡೆಸಿವಿರ್ ಕೊರತೆಯಿಂದಾಗಿ ಮಧ್ಯಪ್ರದೇಶದಲ್ಲಿ ಸಂಭವಿಸಿದ್ದ ಸಾವಿರಾರು ಸಾವುಗಳಿಗೂ ನೆಹರೂ ಕಾರಣರಾಗಿದ್ದರೇ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಕಾಂಗ್ರೆಸ್ ಮಾಧ್ಯಮ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಕೆ.ಮಿಶ್ರಾ ಹೇಳಿದ್ದರೆ,‘ಮಧ್ಯಪ್ರದೇಶ ಸಚಿವರ ಮಾತನ್ನು ಆಲಿಸಿ. 1947,ಆ.15ರಂದು ನೆಹರೂ ಮಾಡಿದ್ದ ಭಾಷಣ ಬೆಲೆಏರಿಕೆಗೆ ಕಾರಣವಾಗಿದೆ. ನಗಬೇಡಿ. ಸಾರ್ವಜನಿಕರನ್ನು ಮೂರ್ಖರೆಂದು ಪರಿಗಣಿಸಲು ಮತ್ತು ಅವರನ್ನು ಮೂರ್ಖರನ್ನಾಗಿಸಲು ಈ ಜನರು ಪ್ರತಿದಿನವೂ ಲಕ್ಷಣರೇಖೆಯನ್ನು ದಾಟುತ್ತಿರುತ್ತಾರೆ ’ಎಂದು ಮಧ್ಯಪ್ರದೇಶ ಕಾಂಗ್ರೆಸ್ ಟ್ವೀಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News