ಪೊಲೀಸರು ಮತಾಂತರದ ಆರೋಪ ಹೊರಿಸಿದ ಬಳಿಕ ಬಹಿಷ್ಕೃತ ಉ.ಪ್ರದೇಶ ವ್ಯಕ್ತಿಯಿಂದ ದಿಲ್ಲಿಗೆ ಪಾದಯಾತ್ರೆ

Update: 2021-08-01 17:25 GMT
photo: timesofindia.indiatimes.com

ಹೊಸದಿಲ್ಲಿ,ಆ.1: ತಾನು ಇಸ್ಲಾಮ್ ಗೆ ಮತಾಂತರಗೊಂಡಿದ್ದೇನೆ ಎಂದು ಉತ್ತರ ಪ್ರದೇಶ ಪೊಲೀಸರು ತನಗೆ ತಪ್ಪು ಹಣೆಪಟ್ಟಿಯನ್ನು ಅಂಟಿಸಿದ ಬಳಿಕ ಗ್ರಾಮಸ್ಥರಿಂದ ಬಹಿಷ್ಕಾರಕ್ಕೊಳಗಾಗಿರುವ ಸಹಾರನಪುರದ ಸ್ವಯಂಘೋಷಿತ ಹಿಂದು ರಾಷ್ಟ್ರವಾದಿಯೋರ್ವ ತನ್ನ ‘ಗೌರವವನ್ನು ಮರಳಿ ಪಡೆಯಲು ’200 ಕಿ.ಮೀ.ದೂರದ ದಿಲ್ಲಿಯ ಸರ್ವೋಚ್ಚ ನ್ಯಾಯಾಲಯಕ್ಕೆ ‘ಸಾಮಾಜಿಕ ನ್ಯಾಯ ಪಾದಯಾತ್ರೆ’ಯನ್ನು ಆರಂಭಿಸಿದ್ದಾನೆ.

ಕಬ್ಬಿನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಪಿಎಚ್ಡಿ ವಿದ್ಯಾರ್ಥಿ ಪ್ರವೀಣ್ ಕುಮಾರ್ ಅವರ ಶಿತ್ಲಾ ಖೇಡಾ ಗ್ರಾಮದ ನಿವಾಸಕ್ಕೆ ಅಬ್ದುಲ್ ಸಮದ್ ಎಂಬಾತನನ್ನು ಹುಡುಕಿಕೊಂಡು ಉ.ಪ್ರದೇಶ ಪೊಲೀಸ್ ನ ಭಯೋತ್ಪಾದನೆ ನಿಗ್ರಹ ದಳದ ಅಧಿಕಾರಿಗಳು ಜೂ.23ರಂದು ಭೇಟಿ ನೀಡಿದ್ದರು. ಇಸ್ಲಾಮಿಗೆ ಮತಾಂತರಗೊಂಡವರ ಸೋರಿಕೆಯಾಗಿತ್ತೆನ್ನಲಾದ ಪಟ್ಟಿಯಲ್ಲಿ ಸಮದ್ ಹೆಸರಿನ ಜೊತೆಗೆ ಕುಮಾರ್ ಹೆಸರು ಮತ್ತು ಸಂಪರ್ಕ ವಿವರಗಳಿದ್ದವು.

ಮತಾಂತರ ನಡೆಸುತ್ತಿದ್ದರು ಎಂಬ ಆರೋಪದಲ್ಲಿ ಬಂಧಿತರಾಗಿರುವ ದಿಲ್ಲಿಯ ಇಸ್ಲಾಮಿಕ್ ದಾವಾ ಸೆಂಟರ್‌ ಅಧ್ಯಕ್ಷ ಮುಹಮ್ಮದ್ ಉಮರ್ ಗೌತಮ್ ಮತ್ತು ಮುಫ್ತಿ ಕಾಝಿ ಜಹಾಂಗೀರ್ ಕಾಸ್ಮಿ ಅವರ ಪ್ರಕರಣಕ್ಕೆ ಈ ಸೋರಿಕೆಯು ಸಂಬಂಧಿಸಿದೆ.

ದಾಸ್ನಾ ದೇವಿ ಮಂದಿರದ ಮಹಂತ ಯತಿ ನರಸಿಂಹಾನಂದ ಸರಸ್ವತಿಯ ಹತ್ಯೆ ಸಂಚು ಪ್ರಕರಣದ ತನಿಖೆಯ ಸಂದರ್ಭ ತಮಗೆ ಅವರ ಹೆಸರುಗಳ ಮಾಹಿತಿ ಲಭಿಸಿತ್ತು ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
 
ಪೊಲೀಸರು ಮತಾಂತರಗೊಂಡ ಆರೋಪದಿಂದ ಕುಮಾರರನ್ನು ಮುಕ್ತಗೊಳಿಸಿದ್ದಾರಾದರೂ ಗ್ರಾಮಸ್ಥರು ಅವರು ಇಸ್ಲಾಮಿಗೆ ಮತಾಂತರಗೊಂಡಿದ್ದಾರೆಂದು ಭಾವಿಸಿ ಸಾಮಾಜಿಕ ಬಹಿಷ್ಕಾರವನ್ನು ಹೇರಿದ್ದಾರೆ.

ತನ್ನ ಮನೆಯ ಬಾಗಿಲಿನ ಮೇಲೆ ಯಾರೋ ‘ಪಾಕಿಸ್ತಾನಕ್ಕೆ ಹೋಗು’ ಎಂದು ಬರೆದಿದ್ದರು ಎಂದು ತಿಳಿಸಿದ ಕುಮಾರ,ತನ್ನ ನೋವು ದೇಶಕ್ಕೆ ಅರ್ಥವಾಗಲೆಂದು ಕಳೆದ ಮಂಗಳವಾರ ಗ್ರಾಮದಿಂದ ದಿಲ್ಲಿಗೆ ಪಾದಯಾತ್ರೆಯನ್ನು ಆರಂಭಿಸಿದ್ದೇನೆ ಎಂದರು.
ಪ್ರತಿ ದಿನ 30 ಕಿ.ಮೀ.ದೂರವನ್ನು ಕ್ರಮಿಸುತ್ತಿರುವ ಕುಮಾರ್ ಮೇಲೆ ಉತ್ತರ ಪ್ರದೇಶ ಪೊಲೀಸರು ನಿಗಾಯಿರಿಸಿದ್ದು,ಗ್ರಾಮಕ್ಕೆ ವಾಪಸಾಗುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.

‘ನನ್ನ ಮೇಲೆ ಅನ್ಯಾಯವಾಗಿ ಹೊರಿಸಲಾಗಿರುವ ಕಳಂಕವನ್ನು ತೊಡೆದುಕೊಳ್ಳಲು ನಾನು ಬಯಸಿದ್ದೇನೆ. ಸರ್ವೋಚ್ಚ ನ್ಯಾಯಾಲಯವು ಮಾತ್ರ ನನಗೆ ನೆರವಾಗಬಲ್ಲದು ’ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಉ.ಪ್ರ.ಮುಖ್ಯಮಂತ್ರಿ ಆದಿತ್ಯನಾಥ ಕುರಿತು ಪುಸ್ತಕಗಳನ್ನೂ ಬರೆದಿರುವ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News