ಪೆಗಾಸಸ್ ಗೂಢಚರ್ಯೆ ಪ್ರಕರಣ:ತನಿಖೆಗೆ ಒತ್ತಾಯಿಸಿದ ಬಿಹಾರ ಸಿಎಂ ನಿತೀಶ್ ಕುಮಾರ್

Update: 2021-08-02 11:44 GMT

ಪಾಟ್ನಾ: ರಾಜಕಾರಣಿಗಳು, ಪತ್ರಕರ್ತರು, ನ್ಯಾಯಾಧೀಶರು ಹಾಗೂ ಇತರರು ಇಸ್ರೇಲಿ ಗೂಢಚರ್ಯೆಗೆ ಗುರಿಯಾಗಿದ್ದಾರೆ ಎಂಬ ಆರೋಪಗಳನ್ನು ಒಳಗೊಂಡ ಪೆಗಾಸಸ್ ಪ್ರಕರಣದ ತನಿಖೆಗೆ ಬಿಹಾರ ಮುಖ್ಯಮಂತ್ರಿ ಹಾಗೂ  ಬಿಜೆಪಿ ಮಿತ್ರ ಪಕ್ಷ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರು ಒತ್ತಾಯಿಸುವ ಮೂಲಕ ಪ್ರತಿಪಕ್ಷಗಳ ಬೇಡಿಕೆಗೆ ಧ್ವನಿಗೂಡಿಸಿದ್ದಾರೆ.

"ಜನರನ್ನು ತೊಂದರೆಗೊಳಿಸಲು ಹಾಗೂ  ಕಿರುಕುಳ ನೀಡಲು ಇಂತಹ ಕೆಲಸಗಳನ್ನು ಮಾಡಬಾರದು ... ಇಡೀ ವಿಷಯವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು" ಎಂದು ಅವರು ಹೇಳಿದ್ದಾರೆ. ಕುಮಾರ್ ಅವರ  ಈ ಹೇಳಿಕೆಯು ಬಿಜೆಪಿಯ ಅಸಮಾಧಾನವನ್ನು ಹೆಚ್ಚಿಸುವ ನಿರೀಕ್ಷೆ ಇದೆ.

ಪೆಗಾಸಸ್ ಪ್ರಕರಣವನ್ನು  ತನಿಖೆ ಮಾಡಬೇಕೇ ಎಂದು ಕೇಳಿದಾಗ, "ಖಂಡಿತವಾಗಿಯೂ ಇದು ತನಿಖೆ ಆಗಬೇಕು" ಎಂದು  ಕುಮಾರ್ ಅವರು ಹೇಳಿದರು.

"ತುಂಬಾ ದಿನದಿಂದ  ದೂರವಾಣಿ ಕದ್ದಾಲಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ ... ಸಂಸತ್ತಿನಲ್ಲಿ ಈ ವಿಷಯ ಪ್ರಸ್ತಾಪವಾಗುತ್ತಿದೆ ಹಾಗೂ  ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ  ... ಹಾಗಾಗಿ ಖಂಡಿತವಾಗಿಯೂ ಇದನ್ನು ಚರ್ಚಿಸಬೇಕು ಹಾಗೂ ಅದರತ್ತ ಗಮನ ನೀಡಬೇಕು. ... ಎಲ್ಲವನ್ನೂ ಬಹಿರಂಗಪಡಿಸಬೇಕು’’ಎಂದು ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದರು.

ಸಂಸತ್ತಿನಲ್ಲಿ ಹೇಳಿಕೆಯನ್ನು ನೀಡಿದ್ದ ಸರಕಾರವು ಯಾವುದೇ ಅಕ್ರಮ  ನಡೆಸಿಲ್ಲ ಎಂದು ಹೇಳಿತ್ತು. ಆದರೆ ಎರಡೂ ಸದನಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News