ರಚನಾತ್ಮಕವಾಗಿ ಮುಕ್ತಾಯಗೊಂಡ ಭಾರತ-ಚೀನಾ 12ನೇ ಕಾರ್ಪ್ ಕಮಾಂಡರ್ ಸಭೆ

Update: 2021-08-02 17:11 GMT

ಹೊಸದಿಲ್ಲಿ, ಆ. 2: ಭಾರತದ ಭಾಗದಲ್ಲಿರುವ ಛುಸುಲ್-ಮೋಲ್ಡೋ ಗಡಿ ಕೇಂದ್ರದಲ್ಲಿ ನಡೆಸಲಾದ ಭಾರತ-ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ 12 ಸುತ್ತಿನ ಸಭೆ ರಚನಾತ್ಮಕವಾಗಿತ್ತು ಎಂದು ಅಧಿಕೃತ ಪತ್ರಿಕಾ ಹೇಳಿಕೆ ತಿಳಿಸಿದೆ. ದುಶಾಂಬೆಯಲ್ಲಿ ಜುಲೈ 14ರಂದು ನಡೆದ ಭಾರತ -ಚೀನಾ ವಿದೇಶಾಂಗ ವ್ಯವಹಾರಗಳ ಸಚಿವರ ಸಭೆ, ಜೂನ್ 25ರಂದು ನಡೆದ ಭಾರತ-ಚೀನಾ ಗಡಿ ವ್ಯವಹಾರಗಳ ಕುರಿತ ಸಮಾಲೋಚನೆ ಹಾಗೂ ಸಹಕಾರಕ್ಕೆ ಕಾರ್ಯತಂತ್ರ (ಡಬ್ಯುಎಂಸಿಸಿ)ದ 22ನೇ ಸಭೆಯ ಹಿನ್ನೆಲೆಯಲ್ಲಿ ಈ ಸುತ್ತಿನ ಮಾತುಕತೆ ನಡೆಸಲಾಗಿದೆ.

ಸಭೆಯಲ್ಲಿ ನಡೆದಿರುವ ಚರ್ಚೆ ಹಾಗೂ ಮಾಡಿಕೊಳ್ಳಲಾದ ಒಪ್ಪಂದದ ಬಗ್ಗೆ ಮುಂದಿನ ಎರಡು ದಿನಗಳಲ್ಲಿ ವಿವರ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಭಾರತ-ಚೀನಾ ಗಡಿ ಪ್ರದೇಶದ ಪಶ್ಚಿಮ ವಲಯದಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆ ಹಿಂದೆಗೆತಕ್ಕೆ ಸಂಬಂಧಿಸಿದ ಉಳಿದ ಪ್ರದೇಶಗಳ ಕುರಿತ ನಿರ್ಧಾರಗಳ ಹಿನ್ನೆಲೆಯಲ್ಲಿ ಉಭಯ ದೇಶಗಳು ತಮ್ಮ ನಿಲುವುಗಳನ್ನು ಮಕ್ತವಾಗಿ ವಿನಿಯಮ ಮಾಡಿಕೊಂಡಿವೆ ಎಂದು ಹೇಳಿಕೆ ತಿಳಿಸಿದೆ. ಈ ಸುತ್ತಿನ ಸಭೆ ರಚನಾತ್ಮಕವಾಗಿ ನಡೆದಿದೆ. ಇದು ಪರಸ್ಪರ ತಿಳುವಳಿಕೆ ಮೂಲಕ ಇನ್ನಷ್ಟು ರಚನಾತ್ಮಕವಾಗಲಿದೆ ಎಂದು ಭಾರತ ಹಾಗೂ ಚೀನ ಅಭಿಪ್ರಾಯಿಸಿದೆ. ಉಳಿದ ವಿವಾದಗಳನ್ನು ಅಸ್ತಿತ್ವದಲ್ಲಿರುವ ಒಪ್ಪಂದ, ಶಿಷ್ಟಾಚಾರಕ್ಕೆ ಅನುಗುಣವಾಗಿ ತ್ವರಿತ ವಿಧಾನದಲ್ಲಿ ಪರಿಹರಿಸಲು ಹಾಗೂ ಮಾತುಕತೆ, ಸಂಧಾನದ ತೀವ್ರತೆ ಕಾಯ್ದುಕೊಳ್ಳಲು ಉಭಯ ದೇಶಗಳು ಒಪ್ಪಿಕೊಂಡಿವೆ ಎಂದು ಹೇಳಿಕೆ ತಿಳಿಸಿದೆ. ತಾವು ಪಶ್ಚಿಮ ವಲಯದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಸ್ಥಿರತೆಯ ಖಾತರಿಗೆ ಪರಿಣಾಮಕಾರಿ ಪ್ರಯತ್ನಗಳನ್ನು ಮುಂದುವರಿಸಲು ಹಾಗೂ ಶಾಂತಿ, ಸೌಹಾರ್ದತೆಯನ್ನು ಜಂಟಿಯಾಗಿ ಕಾಯ್ದುಕೊಳ್ಳಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News