ಉತ್ತರ ಪ್ರದೇಶ ನಕಲಿ ವಿವಿಗಳ ಸ್ವರ್ಗ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್

Update: 2021-08-03 04:12 GMT

ಹೊಸದಿಲ್ಲಿ : ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ದೇಶದ ಒಟ್ಟು 24 ವಿಶ್ವವಿದ್ಯಾನಿಲಯಗಳನ್ನು ನಕಲಿ ವಿವಿಗಳು ಎಂದು ಘೋಷಿಸಿದ್ದು, ಇತರ ಎರಡು ವಿವಿಗಳು ನಿಯಮಗಳನ್ನು ಉಲ್ಲಂಘಿಸಿವೆ. ಈ ಪೈಕಿ ಉತ್ತರ ಪ್ರದೇಶ ಸಿಂಹಪಾಲು ಪಡೆದಿದ್ದು, ನಕಲಿ ವಿವಿಗಳ ಸ್ವರ್ಗ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಸೋಮವಾರ ಈ ಸಂಬಂಧ ಕೇಳಲಾದ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಅವರು, "ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಮತ್ತು ಎಲೆಕ್ಟ್ರಾನಿಕ್ ಹಾಗೂ ಮುದ್ರಣ ಮಾಧ್ಯಮದಿಂದ ಸ್ವೀಕರಿಸಿದ ದೂರಿನ ಮೇರೆಗೆ ಯುಜಿಸಿ 24 ಸ್ವಯಂಘೋಷಿತ ಸಂಸ್ಥೆಗಳನ್ನು ನಕಲಿ ವಿವಿಗಳೆಂದು ಘೋಷಿಸಿದೆ" ಎಂದು ಹೇಳಿದರು.

ಇದರ ಜತೆಗೆ ಲಕ್ನೋದ ಭಾರತೀಯ ಶಿಕ್ಷಾ ಪರಿಷತ್ ಹಾಗೂ ಹೊಸದಿಲ್ಲಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪ್ಲ್ಯಾನಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್ ಕೂಡಾ ಯುಜಿಸಿ ಕಾಯ್ದೆ-1956ನ್ನು ಉಲ್ಲಂಘಿಸಿ ಕಾರ್ಯಾ ನಿರ್ವಹಿಸುತ್ತಿವೆ. ಈ ಸಂಬಂಧದ ಪ್ರಕರಣಗಳು ಕೋರ್ಟ್‌ನಲ್ಲಿ ಬಾಕಿ ಇವೆ" ಎಂದು ವಿವರಿಸಿದರು.

ಉತ್ತರ ಪ್ರದೇಶದಲ್ಲಿ ಅತ್ಯಧಿಕ ಎಂದರೆ ಎಂಟು ನಕಲಿ ವಿವಿಗಳಿವೆ. ಅವುಗಳೆಂದರೆ ವಾರಣಾಸಿಯ ವಾರಣಾಸೇಯ ಸಂಸ್ಕೃತ ವಿಶ್ವವಿದ್ಯಾನಿಲಯ, ಅಲಹಾಬಾದ್‌ನ ಮಹಿಳಾ ಗ್ರಾಮ ವಿದ್ಯಾಪೀಠ, ಗಾಂಧಿ ಹಿಂದಿ ವಿದ್ಯಾಪೀಠ, ಕಾನ್ಪುರದಲ್ಲಿರುವ ನ್ಯಾಷನಲ್ ಯುನಿವರ್ಸಿಟಿ ಆಫ್ ಎಲೆಕ್ಟ್ರೋ ಕಾಂಪ್ಲೆಕ್ಸ್ ಹೋಮಿಯೋಪಥಿ, ಅಲೀಗಢದ ನೇತಾಜಿ ಸುಭಾಸ್‌ಚಂದ್ರ ಬೋಸ್ ಮುಕ್ತ ವಿವಿ, ಮಥುರಾದ ಉತ್ತರ ಪ್ರದೇಶ ವಿಶ್ವವಿದ್ಯಾಲಯ, ಪ್ರತಾಪ್‌ ಗಢದ ಮಹಾರಾಣ ಪ್ರತಾಪ್ ಶಿಕ್ಷಾ ನಿಕೇತನ ವಿವಿ ಮತ್ತು ನೋಯ್ಡಾದ ಇಂದ್ರಪ್ರಸ್ಥ ಶಿಕ್ಷಾ ಪರಿಷತ್.

ಉಳಿದಂತೆ ದೆಹಲಿಯಲ್ಲಿ ಏಳು, ಒಡಿಶಾ ಹಾಗೂ ಬಂಗಾಳದಲ್ಲಿ ತಲಾ ಎರಡು ನಕಲಿ ವಿವಿಗಳಿವೆ. ಕರ್ನಾಟಕ ಕೇರಳ, ಮಹಾರಾಷ್ಟ್ರ, ಪುದುಚೇರಿ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ನಕಲಿ ವಿವಿಗಳಿವೆ. ಬಡಗನ್ವಿ ಸರ್ಕಾರ್ ವರ್ಲ್ಡ್ ಓಪನ್ ಯುನಿವರ್ಸಿಟಿ ಎಜ್ಯುಕೇಶನ್ ಸೊಸೈಟಿ ಕರ್ನಾಟಕದ ನಕಲಿ ವಿವಿ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News