ಗುಣಮಟ್ಟ ಸಮಸ್ಯೆ ಕೊವ್ಯಾಕ್ಸಿನ್ ಕೊರತೆಗೆ ಕಾರಣ: ಎನ್.ಕೆ.ಅರೋರಾ

Update: 2021-08-03 05:11 GMT

ಹೊಸದಿಲ್ಲಿ : ವರ್ಷಾಂತ್ಯದ ಒಳಗಾಗಿ ದೇಶದ ಎಲ್ಲ ವಯಸ್ಕರಿಗೆ ಕೋವಿಡ್-19 ಲಸಿಕೆ ನೀಡುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಲಸಿಕೆ ಕೊರತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕೊವ್ಯಾಕ್ಸಿನ್ ಸರಬರಾಜಿನಲ್ಲಿ ಕೊರತೆ ಕಂಡುಬಂದಿದೆ. ಹೊಸದಾಗಿ ಆರಂಭವಾಗಿರುವ ಭಾರತ್ ಬಯೋಟೆಕ್‌ನ ಬೆಂಗಳೂರು ಘಟಕದಲ್ಲಿ ಉತ್ಪಾದನೆಯಾಗುತ್ತಿರುವ ಕೊವ್ಯಾಕ್ಸಿನ್ ಲಸಿಕೆಯ ಗುಣಮಟ್ಟ ಸಮಸ್ಯೆ ಇದಕ್ಕೆ ಮುಖ್ಯ ಕಾರಣ ಎಂದು ಉನ್ನತ ಸರ್ಕಾರಿ ಸಲಹೆಗಾರರೊಬ್ಬರು ಬಹಿರಂಗಪಡಿಸಿದ್ದಾರೆ.

ಕೊವ್ಯಾಕ್ಸಿನ್ ಉತ್ಪಾದನೆಯ ವೇಗ ಹೆಚ್ಚಿಸಲು ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಆದರೆ ಹಿನ್ನಡೆಯಾಗಿರುವುದು ಜಗತ್ತಿನಲ್ಲೇ ಕಂಪೆನಿಯ ಅತಿದೊಡ್ಡ ಘಟಕ ಎನಿಸಿದ ಬೆಂಗಳೂರು ಘಟಕದಲ್ಲಿ ಉತ್ಪಾದನೆಯಾದ ಲಸಿಕೆಗಳ ಗುಣಮಟ್ಟದ ಕಾರಣದಿಂದ ಎಂದು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕೋವಿಡ್ ಕಾರ್ಯಪಡೆ ಸದಸ್ಯ ಎನ್.ಕೆ.ಅರೋರಾ ತಿಳಿಸಿದ್ದಾರೆ.

"ಲಸಿಕೆ ಉತ್ಪಾದನೆ ರಾಕೆಟ್ ವಿಜ್ಞಾನದಂತೆ ಕೊವ್ಯಾಕ್ಸಿನ್ ಉತ್ಪಾದನೆಯಲ್ಲಿ ತೀವ್ರ ಹೆಚ್ಚಳವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ಅವರು ಹೊಸ ಘಟಕ ಆರಂಭಿಸಿದ್ದಾರೆ. ಒಟ್ಟು ಉತ್ಪಾದನೆ ಸಮನ್ವಯಗೊಳಿಸಲು ಮೂರು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಕೂಡಾ ಶ್ರಮಿಸುತ್ತಿವೆ. ಅಂತಿಮವಾಗಿ ನಾವು ಭಾರತ್ ಬಯೋಟೆಕ್‌ನಿಂದ 10-12 ಕೋಟಿ ಡೋಸ್ ನಿರೀಕ್ಷಿಸುತ್ತಿದ್ದೇವೆ ಎಂದು ಕೋವಿಡ್ ಕಾರ್ಯಪಡೆಯ ಮುಖ್ಯಸ್ಥರೂ ಆಗಿರುವ ಅವರು ವಿವರಿಸಿದರು.

"ಬೆಂಗಳೂರು ಘಟಕದ ವಿಶ್ವದಲ್ಲೇ ಅತಿದೊಡ್ಡ ಲಸಿಕೆ ಉತ್ಪಾದನಾ ಕೇಂದ್ರಗಳಲ್ಲೊಂದು. ಆದರೆ ಇಲ್ಲಿ ಉತ್ಪಾದನೆಯಾದ ಮೊದಲ ಕೆಲ ಬ್ಯಾಚ್‌ಗಳ ಗುಣಮಟ್ಟ ಸಮರ್ಪಕವಾಗಿಲ್ಲ. ಅದು ಸೂಕ್ತ ಗುಣಮಟ್ಟದ್ದಾಗಿಲ್ಲ. ಆದರೆ ಹೊಸದಾಗಿ ಉತ್ಪಾದನೆಯಾಗಿರುವ 3 ಹಾಗೂ 4ನೇ ಬ್ಯಾಚ್‌ನ ಗುಣಮಟ್ಟ ಸುಧಾರಿಸಿದೆ. ಮುಂದಿನ ನಾಲ್ಕರಿಂದ ಆರು ವಾರಗಳಲ್ಲಿ ಲಸಿಕೆ ಉತ್ಪಾದನೆ ವೇಗ ಪಡೆಯಲಿದೆ" ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News