ದೇಶದಲ್ಲೇ ಅತ್ಯಧಿಕ ಕೋವಿಡ್-19 ಪರೀಕ್ಷೆ ನಡೆಸಿದ ಹೆಗ್ಗಳಿಕೆಗೆ ಪಾತ್ರವಾದ ಕೇರಳ

Update: 2021-08-03 06:12 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಮತ್ತೆ ಏರುಗತಿಯಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯಗಳು ಸಕಾಲದಲ್ಲಿ ಸಾಕಷ್ಟು ಕೋವಿಡ್ ಟೆಸ್ಟ್‌ಗಳನ್ನು ನಡೆಸಿವೆಯೇ ಎಂಬ ಬಗ್ಗೆ ಎಲ್ಲರ ಗಮನ ಹರಿದಿದೆ. ಅಂಕಿ ಅಂಶಗಳಿಂದ ತಿಳಿದು ಬರುವಂತೆ ಇಡೀ ದೇಶದಲ್ಲೇ ಕೇರಳದಲ್ಲಿ ಅತ್ಯಧಿಕ ಸಂಖ್ಯೆಯ ಕೋವಿಡ್-19 ಪರೀಕ್ಷೆಗಳು ನಡೆದಿವೆ.

ಕೇರಳ ಏಳು ದಿನಗಳಲ್ಲಿ ಸರಾಸರಿ ಪ್ರತಿ 10 ಲಕ್ಷ ಮಂದಿಯ ಪೈಕಿ 4578 ಮಂದಿಗೆ ಪರೀಕ್ಷೆ ನಡೆಸಿದೆ. ಇನ್ನೊಂದೆಡೆ ರಾಜಸ್ಥಾನ ಕನಿಷ್ಠ ಅಂದರೆ 10 ಲಕ್ಷ ಮಂದಿಯ ಪೈಕಿ 378 ಮಂದಿಗೆ ಮಾತ್ರ ಪರೀಕ್ಷೆ ನಡೆಸಿದೆ. ಪಶ್ಚಿಮ ಬಂಗಾಳ, ಹರ್ಯಾಣ, ಮಧ್ಯಪ್ರದೇಶ ಮತ್ತು ಗುಜರಾತ್ ಪ್ರತಿ 10 ಲಕ್ಷಕ್ಕೆ 1000ಕ್ಕಿಂತ ಕಡಿಮೆ ಮಂದಿಯ ಪರೀಕ್ಷೆ ನಡೆಸಿವೆ.

ಬಹುತೇಕ ದೊಡ್ಡ ರಾಜ್ಯಗಳಲ್ಲಿ ಸರಾಸರಿ 3000ಕ್ಕಿಂತ ಕಡಿಮೆ ಪರೀಕ್ಷೆ ನಡೆದಿದೆ. ಅಸ್ಸಾಂ ಹಾಗೂ ದೆಹಲಿಯಲ್ಲಿ ಮಾತ್ರ ಕ್ರಮವಾಗಿ 3563 ಮತ್ತು 3336 ಪರೀಕ್ಷೆಗಳು ನಡೆದಿವೆ. ಚಿಕ್ಕ ರಾಜ್ಯಗಳ ಪೈಕಿ ಮಿಝೋರಾಂನಲ್ಲಿ ಕೇರಳಕ್ಕಿಂತ ಅಧಿಕ ಅಂದರೆ ಪ್ರತಿ 10 ಲಕ್ಷ ಮಂದಿಯ ಪೈಕಿ 4916 ಮಂದಿಯನ್ನು ಪರೀಕ್ಷೆಗೆ ಗುರಿಪಡಿಸಲಾಗಿದೆ.

ಈ ಹಿಂದೆ ಸಾಧಿಸಿದ ಅತ್ಯಧಿಕ ಪ್ರಮಾಣದ ಪರೀಕ್ಷೆಗೆ ಹೋಲಿಸಿದರೆ ಈಗ ರಾಜ್ಯಗಳಲ್ಲಿ ನಡೆಯುತ್ತಿರುವ ಕೋವಿಡ್ ಪರೀಕ್ಷೆ ಕಡಿಮೆ ಎನ್ನುವ ಅಂಶವೂ ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದುಬರುತ್ತದೆ. ಕೇರಳದಲ್ಲಿ ಅತ್ಯಧಿಕ ಪರೀಕ್ಷೆಗಳು ನಡೆದಿದ್ದರೂ, ಈ ಪ್ರಮಾಣ ಗರಿಷ್ಠ ಮಟ್ಟದ ಸನಿಹದಲ್ಲಿದೆ. ಜೂನ್ ಮೊದಲ ವಾರದ ಬಳಿಕ ಬಹುತೇಕ ರಾಜ್ಯಗಳಲ್ಲಿ ಕೋವಿಡ್ ಪರೀಕ್ಷೆ ಕಡಿಮೆಯಾಗಿದ್ದು, ಎರಡನೇ ಅಲೆ ಆರಂಭವಾಗುವ ಪೂರ್ವದಲ್ಲಿ ನಡೆಸುತ್ತಿದ್ದ ಪರೀಕ್ಷೆಗಿಂತಲೂ ಕಡಿಮೆ ಪರೀಕ್ಷೆಗಳು ಇದೀಗ ನಡೆಯುತ್ತಿವೆ.

14 ದೊಡ್ಡ ರಾಜ್ಯಗಳಲ್ಲಿ ಪ್ರತಿ 10 ಲಕ್ಷ ಮಂದಿಯ ಪೈಕಿ 2000ಕ್ಕಿಂತಲೂ ಕಡಿಮೆ ಮಂದಿಗೆ ಕೋವಿಡ್ ಪರೀಕ್ಷೆ ನಡೆದಿದೆ. ಅಂದರೆ ಕೇರಳ ಹಾಗೂ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಪರೀಕ್ಷೆಯ ಅರ್ಧಕ್ಕಿಂತಲೂ ಕಡಿಮೆ. ಇತರ ಐದು ರಾಜ್ಯಗಳಲ್ಲಿ ಈ ಪ್ರಮಾಣ 1000ಕ್ಕಿಂತಲೂ ಕಡಿಮೆ ಇದೆ. ಉತ್ತರ ಪ್ರದೇಶ ಹಾಗೂ ಬಿಹಾರದಂಥ ದೊಡ್ಡ ರಾಜ್ಯಗಳಲ್ಲಿ ಇದು ಕ್ರಮವಾಗಿ 1052 ಹಾಗೂ 1196 ಮಾತ್ರ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News