ಕಾನೂನು ಮತ್ತು ಸುವ್ಯವಸ್ಥೆಯ ಸಂಭಾವ್ಯ ಉಲ್ಲಂಘನೆಯು ಮುನ್ನೆಚ್ಚರಿಕೆ ಬಂಧನಕ್ಕೆ ಕಾರಣವಲ್ಲ: ಸುಪ್ರೀಂ ಕೋರ್ಟ್

Update: 2021-08-03 17:12 GMT

ಹೊಸದಿಲ್ಲಿ,ಆ.3: ಕಾನೂನು ಮತ್ತು ಸುವ್ಯವಸ್ಥೆ,ಸಾರ್ವಜನಿಕ ಸುವ್ಯವಸ್ಥೆ ಮತ್ತು ರಾಜ್ಯದ ಭದ್ರತೆ ಎಂಬ ಅಭಿವ್ಯಕ್ತಿಗಳು ವಿಭಿನ್ನ ವಿಷಯಗಳನ್ನು ಅರ್ಥೈಸುತ್ತವೆ ಎಂದು ಹೇಳಿರುವ ಸರ್ವೋಚ್ಚ ನ್ಯಾಯಾಲಯವು,ಕಾನೂನು ಮತ್ತು ಸುವ್ಯವಸ್ಥೆಯ ಸಂಭಾವ್ಯ ಉಲ್ಲಂಘನೆಯು ನಾಗರಿಕರ ಮುನ್ನೆಚ್ಚರಿಕೆ ಬಂಧನಗಳಿಗೆ ಕಾರಣವನ್ನು ಒದಗಿಸುವುದಿಲ್ಲ ಎಂದು ಹೇಳಿದೆ.

ವಂಚನೆ ಅಥವಾ ಅಪರಾಧಿಕ ನಂಬಿಕೆ ದ್ರೋಹದಿಂದ ಕಾನೂನಿನ ಉಲ್ಲಂಘನೆಯು ‘ಕಾನೂನು ಮತ್ತು ಸುವ್ಯವಸ್ಥೆ’ಯನ್ನು ಬಾಧಿಸಬಹುದು,ಆದರೆ ಅದು ‘ಸಾರ್ವಜನಿಕ ಸುವ್ಯವಸ್ಥೆ’ಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿದೆ ಎಂದು ಹೇಳುವಂತಿಲ್ಲ. ಸಾರ್ವಜನಿಕ ಸುವ್ಯವಸ್ಥೆಯು ಹದಗೆಡಲು ಸಮುದಾಯ ಅಥವಾ ಸಾರ್ವಜನಿರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವ ‘ಸಾರ್ವಜನಿಕ ಅವ್ಯವಸ್ಥೆ ’ಯು ಅತ್ಯಗತ್ಯವಾಗಿದೆ ಎಂದು ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ಹೃಷಿಕೇಶ ರಾಯ್ ಅವರ ಪೀಠವು ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಐದು ಕ್ರಿಮಿನಲ್ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡಿದ್ದ ಬಾಂಕಾ ರವಿಕಾಂತ ಎಂಬಾತನನ್ನು 2020 ಸೆಪ್ಟೆಂಬರ್ನಲ್ಲಿ ಸೈಬರಾಬಾದ್ ಪೊಲೀಸ್ ಆಯುಕ್ತರ ಆದೇಶದಂತೆ ತೆಲಂಗಾಣ ಅಪಾಯಕಾರಿ ಚಟುವಟಿಕೆಗಳ ತಡೆ ಕಾಯ್ದೆ 1986ರಡಿ ಬಂಧಿಸಿರುವುದನ್ನು ಪ್ರಶ್ನಿಸಿ ಆತನ ಪತ್ನಿ ಬಾಂಕಾ ಸ್ನೇಹಶೀಲಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಕೈಗೆತ್ತಿಕೊಂಡಿತ್ತು.
ರವಿಕಾಂತ ಬಂಧನ ದೋಷಯುಕ್ತವಾಗಿದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು ಆತನ ಬಂಧನದ ಆದೇಶವನ್ನು ಎತ್ತಿಹಿಡಿದಿದ್ದ ತೆಲಂಗಾಣ ಉಚ್ಚ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಿ,ಆತನನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಆದೇಶಿಸಿತು. ತೆಲಂಗಾಣ ನಿವಾಸಿ ರವಿಕಾಂತ (34) ಕಳೆದ 10 ತಿಂಗಳುಗಳಿಂದಲೂ ಜೈಲಿನಲ್ಲಿದ್ದಾನೆ. ತನ್ನ ಪತಿ ಆರೋಪಿಯಾಗಿರುವ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಪಡೆದುಕೊಂಡ ಬಳಿ ಸದ್ರಿ ಕಾಯೆಯಡಿ ಆತನ ಬಂಧನಕ್ಕೆ ಆದೇಶಿಸಲಾಗಿತ್ತು ಎಂದು ಸ್ನೇಹಶೀಲಾ ತನ್ನ ಅರ್ಜಿಯಲ್ಲಿ ತಿಳಿಸಿದ್ದರು.
ರವಿಕಾಂತನ ಚಟುವಟಿಕೆಗಳು ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡಿದ್ದರೆ ಅಥವಾ ಅಂತಹ ಸಾಧ್ಯತೆಯಿದ್ದರೆ ಮಾತ್ರ ಮುನ್ನೆಚ್ಚರಿಕೆ ಬಂಧನ ಆದೇಶವನ್ನು ಹೊರಡಿಸಬಹುದು ಎಂದು ಸ್ಪಷ್ಟಪಡಿಸಿದ ಪೀಠವು,ಈ ಸಂಬಂಧ ತೆಲಂಗಾಣ ಪೊಲೀಸರು ಮುಂದಿರಿಸಿದ್ದ ವಾದಗಳನ್ನು ತಿರಸ್ಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News