ಕಾಂಗ್ರೆಸ್ ಪಕ್ಷ ಸೇರುವ ಅಂಚಿನಲ್ಲಿರುವ ಪ್ರಶಾಂತ್ ಕಿಶೋರ್: ರಾಷ್ಟ್ರಮಟ್ಟದ ಹುದ್ದೆಗೆ ಬೇಡಿಕೆ?

Update: 2021-08-04 09:27 GMT

ಹೊಸದಿಲ್ಲಿ:  ಖ್ಯಾತ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಕಾಂಗ್ರೆಸ್ ಪಕ್ಷ ಸೇರುವ ನಿರ್ಧಾರಕ್ಕೆ ಇನ್ನಷ್ಟು ಹತ್ತಿರವಾಗಿದ್ದಾರೆನ್ನಲಾಗಿದ್ದು ಅವರು ಪಕ್ಷದಲ್ಲಿ ರಾಷ್ಟ್ರ ಮಟ್ಟದ  ಹುದ್ದೆ ಹಾಗೂ ಪಕ್ಷದ ನಿರ್ಧಾರ ಕೈಗೊಳ್ಳುವಿಕೆಯಲ್ಲಿ ತಮ್ಮನ್ನು ಭಾಗವಾಗಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆಂದು ತಿಳಿದು ಬಂದಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಪಕ್ಷ ಒಂದು ವಿಶೇಷ ಸಲಹಾ ಸಮಿತಿಯನ್ನು  ರಚಿಸಬೇಕು ಈ ಸಮಿತಿಯೇ ರಾಜಕೀಯ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ ಎಂದು ಪ್ರಶಾಂತ್ ಕಿಶೋರ್ ಶಿಫಾರಸು ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.

ಮೈತ್ರಿಗಳಿಂದ ಹಿಡಿದು ಚುನಾವಣಾ ಪ್ರಚಾರೋಂದಲನಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಅಧಿಕಾರ ಹೊಂದಲಿರುವ ಈ ಸಮಿತಿ ಕಡಿಮೆ ಸದಸ್ಯರನ್ನೊಳಗೊಂಡಿರಬೇಕೆಂಬ ಸಲಹೆಯೂ ಅವರಿಂದ ಬಂದಿದೆಯೆನ್ನಲಾಗಿದೆ. ಪ್ರಶಾಂತ್ ಕಿಶೋರ್ ಹೊರತಾಗಿ ಕೆಲ ಆಯ್ದ ಪಕ್ಷ ನಾಯಕರು ಈ ಸಮಿತಿಯಲ್ಲಿರಬೇಕು ಹಾಗೂ ಸಮಿತಿಯ ತೀರ್ಮಾನಗಳನ್ನು ಪಕ್ಷದ ಕಾರ್ಯಕಾರಿ ಸಮಿತಿಯ ಮುಂದಿಡಬೇಕೆಂಬ ಸಲಹೆಯಿದೆ.

ಪ್ರಶಾಂತ್ ಕಿಶೋರ್ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿಯ ಹುದ್ದೆ ದೊರೆಯುವ ಸಾಧ್ಯತೆಯೂ ಇದೆ, ಯಾವುದೇ ಸಮಯದಲ್ಲಿ ಪಕ್ಷ ಅಂತಿಮ ನಿರ್ಧಾರ ಕೈಗೊಳ್ಳಬಹುದು, ಕಳೆದ ಒಂದೂವರೆ ತಿಂಗಳುಗಳಿಂದಲೂ ಹೆಚ್ಚು ಸಮಯದಿಂದ ಚರ್ಚೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News