ಕಳೆದ ಆರು ವರ್ಷಗಳಲ್ಲಿ ಅರೆಸೇನಾ ಪಡೆಗಳ 680 ಸಿಬ್ಬಂದಿಗಳ ಆತ್ಮಹತ್ಯೆ: ಗೃಹ ಸಚಿವಾಲಯ

Update: 2021-08-04 15:10 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಆ.4: ಕಳೆದ ಆರು ವರ್ಷಗಳಲ್ಲಿ ಅರೆಸೇನಾ ಪಡೆಗಳ 680 ಸಿಬ್ಬಂದಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು ಬುಧವಾರ ರಾಜ್ಯಸಭೆಯಲ್ಲಿ ತಿಳಿಸಿದರು. ಇದೇ ಅವಧಿಯಲ್ಲಿ ಅಪಘಾತಗಳಲ್ಲಿ 1,764 ಮತ್ತು ಎನ್ಕೌಂಟರ್ಗಳಲ್ಲಿ 323 ಸಿಬ್ಬಂದಿಗಳು ಮೃತಪಟ್ಟಿದ್ದಾರೆ.

ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಅವರ ಪ್ರಶ್ನೆಗೆ ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯವನ್ನು ತಿಳಿಸಿದ ರಾಯ್, ಕೌಟುಂಬಿಕ ಸಮಸ್ಯೆ, ಅನಾರೋಗ್ಯ ಮತ್ತು ಹಣಕಾಸು ಸಮಸ್ಯೆ ಇತ್ಯಾದಿಗಳು ಸಿಬ್ಬಂದಿಗಳ ಆತ್ಮಹತ್ಯೆಗೆ ಕಾರಣಗಳಾಗಿರಬಹುದು ಎಂದು ಹೇಳಿದರು.

ಸರಕಾರವು ಇತರ ವೃತ್ತಿಪರ ಏಜೆನ್ಸಿಗಳ ಜೊತೆ ಸಮಾಲೋಚನೆಯೊಂದಿಗೆ ಈ ವಿಷಯವನ್ನು ಆಗಾಗ್ಗೆ ಪುನರ್ಪರಿಶೀಲಿಸುತ್ತದೆ ಎಂದು ಹೇಳಿದ ಅವರು,ಸಿಬ್ಬಂದಿಗಳಿಗೆ ಒತ್ತಡವನ್ನುಂಟು ಮಾಡುವ ಅಂಶಗಳ ಬಗ್ಗೆ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವು 2004ರಲ್ಲಿ ಅಧ್ಯಯನವೊಂದನ್ನು ನಡೆಸಿದ್ದು,2012ರಲ್ಲಿ ಬಿಎಸ್ಎಫ್ ಮತ್ತು ಸಿಆರ್ಪಿಎಫ್ಗಾಗಿ ಐಐಎಂ-ಅಲಹಾಬಾದ್ ಇಂತಹುದೇ ಅಧ್ಯಯನವನ್ನು ಕೈಗೊಂಡಿತ್ತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News