ಅಫ್ಘಾನ್ ರಕ್ಷಣಾ ಸಚಿವರ ನಿವಾಸದ ಮೇಲೆ ದಾಳಿ: ಹೊಣೆ ಹೊತ್ತುಕೊಂಡ ತಾಲಿಬಾನ್

Update: 2021-08-04 15:16 GMT
ಸಾಂದರ್ಭಿಕ ಚಿತ್ರ

ಕಾಬೂಲ್, ಆ. 4: ಅಫ್ಘಾನಿಸ್ತಾನದ ಉಸ್ತುವಾರಿ ರಕ್ಷಣಾ ಸಚಿವರ ನಿವಾಸದ ಮೇಲೆ ನಡೆದ ದಾಳಿಯ ಹೊಣೆಯನ್ನು ತಾಲಿಬಾನ್ ಬುಧವಾರ ವಹಿಸಿಕೊಂಡಿದೆ. ಈ ದಾಳಿಯ ಕೆಲವೇ ಗಂಟೆಗಳ ಬಳಿಕ ಕಾಬೂಲ್ನಲ್ಲಿರುವ ಪ್ರಮುಖ ಭದ್ರತಾ ಸಂಸ್ಥೆಯೊಂದರ ಸಮೀಪ ನಡೆದ ಸ್ಫೋಟದಲ್ಲಿ ಮೂವರು ಗಾಯಗೊಂಡಿದ್ದಾರೆ.

ಸಚಿವರ ನಿವಾಸದ ಮೇಲೆ ಮಂಗಳವಾರ ರಾತ್ರಿ ದಾಳಿ ನಡೆಸಿರುವುದಾಗಿ ತಾಲಿಬಾನ್ ವಕ್ತಾರ ಝಬೀಯುಲ್ಲಾ ಮುಜಾಹಿದ್ ಹೇಳಿದ್ದಾನೆ. ದಾಳಿ ನಡೆದ ಸಂದರ್ಭದಲ್ಲಿ ಸಚಿವರ ನಿವಾಸದಲ್ಲಿ ಪ್ರಮುಖ ಸಭೆಯೊಂದು ನಡೆಯುತ್ತಿತ್ತು ಎಂದಿದ್ದಾನೆ.

ದಾಳಿಯಲ್ಲಿ ರಕ್ಷಣಾ ಸಚಿವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ಈ ದಾಳಿಯು ದೇಶದಲ್ಲಿ ಹದಗೆಡುತ್ತಿರುವ ಭದ್ರತ ಪರಿಸ್ಥಿತಿಯನ್ನು ಸೂಚಿಸುತ್ತದೆ. ತಾಲಿಬಾನಿಗಳು ದೇಶಾದ್ಯಂತ ಒಂದೇ ಸಮನೆ ಮುನ್ನಗ್ಗುತ್ತಿದ್ದು ರಾಜಧಾನಿ ಯಾರಿಗೂ ಸುರಕ್ಷಿತವಲ್ಲ ಎಂಬ ಸಂದೇಶವನ್ನು ಇದು ರವಾನಿಸಿದೆ.

ರಾಜಧಾನಿಯ ಅತ್ಯಂತ ಭದ್ರತಾ ವಲಯದಲ್ಲಿ ಸ್ಫೋಟ ಸಂಭವಿಸಿರುವುದು ಸರಕಾರದ ಚಿಂತೆಗೆ ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ದೇಶದ ಇತರ ಭಾಗಗಳಲ್ಲಿ ಹಿಂಸೆ ತಾಂಡವವಾಡುತ್ತಿದ್ದರೂ ರಾಜಧಾನಿಯಲ್ಲಿ ಶಾಂತಿ ನೆಲೆಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News