ಸಲ್ಮಾ ಅಣೆಕಟ್ಟು ಮೇಲೆ ತಾಲಿಬಾನ್ ನಡೆಸಿದ ದಾಳಿಯನ್ನು ಹಿಮ್ಮೆಟ್ಟಿಸಿದ ಸೈನಿಕರು

Update: 2021-08-04 15:26 GMT

ಕಾಬೂಲ್ (ಅಫ್ಘಾನಿಸ್ತಾನ), ಆ. 4: ಹೆರಾತ್ ಪ್ರಾಂತದಲ್ಲಿ ಭಾರತ ನಿರ್ಮಿಸಿರುವ ಸಲ್ಮಾ ಅಣೆಕಟ್ಟಿನ ಮೇಲೆ ತಾಲಿಬಾನ್ ಉಗ್ರರು ನಡೆಸಿರುವ ದಾಳಿಯನ್ನು ಅಫ್ಘಾನಿಸ್ತಾನದ ಸರಕಾರಿ ಪಡೆಗಳು ಹಿಮ್ಮೆಟ್ಟಿಸಿವೆ ಎಂದು ಅಫ್ಘಾನಿಸ್ತಾನ ಸರಕಾರ ಹೇಳಿದೆ. ಈ ಕಾಳಗದಲ್ಲಿ ಭಯೋತ್ಪಾದಕ ಗುಂಪು ಭಾರೀ ಪ್ರಮಾಣದಲ್ಲಿ ಸಾವು-ನೋವು ಅನುಭವಿಸಿದೆ ಹಾಗೂ ಸ್ಥಳದಿಂದ ಪರಾರಿಯಾಗಿದೆ ಎಂಬುದಾಗಿಯೂ ಸರಕಾರ ತಿಳಿಸಿದೆ.

ಭಾರತ-ಅಫ್ಘಾನಿಸ್ತಾನ ದೋಸ್ತಿ ಅಣೆಕಟ್ಟು ಎಂಬುದಾಗಿ ಜನಪ್ರಿಯವಾಗಿರುವ ಸಲ್ಮಾ ಅಣೆಕಟ್ಟಿನ ಮೇಲೆ ತಾಲಿಬಾನ್ ಭಯೊತ್ಪಾದಕರು ಮಂಗಳವಾರ ರಾತ್ರಿ ದಾಳಿ ನಡೆಸಿದರು ಎಂಬುದಾಗಿ ಅಫ್ಘಾನ್ ರಕ್ಷಣಾ ಸಚಿವಾಲಯದ ವಕ್ತಾರ ಫಾವದ್ ಅಮಾನ್ ಟ್ವೀಟ್ ಮಾಡಿದ್ದಾರೆ.

‘‘ಸಲ್ಮಾ ಅಣೆಕಟ್ಟಿನ ಮೇಲೆ ತಾಲಿಬಾನ್ ನಡೆಸಿದ ದಾಳಿ ವಿಫಲವಾಗಿದೆ! ಹೆರಾತ್ ಪ್ರಾಂತದಲ್ಲಿರುವ ಸಲ್ಮಾ ಅಣೆಕಟ್ಟನ್ನು ಧ್ವಂಸಗೊಳಿಸುವುದಕ್ಕಾಗಿ ಭಯೋತ್ಪಾದಕ ತಾಲಿಬಾನ್ ನಿನ್ನೆ ರಾತ್ರಿ ದಾಳಿ ನಡೆಸಿತು. ಆದರೆ, ಅದೃಷ್ಟವಶಾತ್ ಅವರು ಭಾರೀ ಸಾವು-ನೋವು ಅನುಭವಿಸಿದರು ಹಾಗೂ ಸರಕಾರಿ ಪಡೆಗಳ ಪ್ರತಿ ದಾಳಿಗೆ ಬೆದರಿ ಪರಾರಿಯಾದರು’’ ಎಂಬುದಾಗಿ ಫಾವದ್ ಅಮಾನ್ ಟ್ವೀಟ್ ಮಾಡಿದ್ದಾರೆ.

ಹೆರಾತ್ ಪ್ರಾಂತದ ಚೆಶ್ಟಿ ಶರೀಫ್ ಜಿಲ್ಲೆಯಲ್ಲಿರುವ ಸಲ್ಮಾ ಅಣೆಕಟ್ಟು ಅಫ್ಘಾನಿಸ್ತಾನದ ಬೃಹತ್ ಅಣೆಕಟ್ಟುಗಳ ಪೈಕಿ ಒಂದಾಗಿದೆ. ಅದು ಪ್ರಾಂತದ ಸಾವಿರಾರು ಕುಟುಂಬಗಳಿಗೆ ಕೃಷಿ ನೀರು ಮತ್ತು ವಿದ್ಯುತ್ ಒದಗಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News