ಪೆಗಾಸಸ್ ಹಗರಣ: ಸಂಸತ್ ನಲ್ಲಿ ಕೇಂದ್ರದ ಉದ್ದಟತನ, ಪ್ರತಿಪಕ್ಷಗಳ ಜಂಟಿ ಹೇಳಿಕೆಯಲ್ಲಿ ಆಕ್ರೋಶ

Update: 2021-08-05 08:20 GMT
Photo: ndtv.com

ಹೊಸದಿಲ್ಲಿ : ಪೆಗಾಸಸ್ ದೂರವಾಣಿ ಬೇಹುಗಾರಿಕೆ ಹಗರಣದ ಬಗ್ಗೆ ಸಂಸತ್ನಲ್ಲಿ ಚರ್ಚೆಯಾಗಬೇಕೆಂದು ಬುಧವಾರ ಹದಿನಾಲ್ಕು ಪ್ರತಿಪಕ್ಷಗಳು ಆಗ್ರಹಿಸಿವೆ. ಪೆಗಾ ಸಸ್ ಹಗರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಆಯಾಮಗಳನ್ನು ಹೊಂದಿರುವ ವಿಷಯವಾಗಿದ್ದು, ಆ ಬಗ್ಗೆ ಕೇಂದ್ರ ಗೃಹ ಸಚಿವರು ಸಂಸತ್ನಲ್ಲಿ ಉತ್ತರಿಸಬೇಕೆಂದು ಅವು ಆಗ್ರಹಿಸಿವೆ. ಈ ಹಗರಣದ ಬಗ್ಗೆ ಸಂಸತ್ನಲ್ಲಿ ಚರ್ಚಿಸಲು ನಿರಾಕರಿಸುತ್ತಿರುವ ಕೇಂದ್ರ ಸರಕಾರವು ಉದ್ದಟತನ ಹಾಗೂ ಮೊಂಡುತನವನ್ನು ಪ್ರದರ್ಶಿಸುತ್ತಿದೆೆ ಎಂದು ಅವು ಆಕ್ರೋಶ ವ್ಯಕ್ತಪಡಿಸಿವೆ.

ಪೆಗಾಸಸ್ ಹಗರಣದ ವಿರುದ್ಧ ಸದನದಲ್ಲಿ ಸಂಘಟಿತವಾದ ಹೋರಾಟ ನಡೆಸುತ್ತಿರುವ ಪ್ರತಿಪಕ್ಷಗಳಿಗೆ ಕಳಂಕ ಹಚ್ಚಲು ಮೋದಿ ಸರಕಾರವು ಅಪಪ್ರಚಾರದ ಅಭಿಯಾನವನ್ನು ನಡೆಸುತ್ತಿದೆ ಮತ್ತು ಸದನದಲ್ಲಿ ಕಲಾಪಗಳಿಗೆ ಪ್ರತಿಪಕ್ಷಗಳು ಅಡ್ಡಿಪಡಿಸುತ್ತಿವೆಯೆಂದು ದೂರುತ್ತಿದೆ ಎಂದು ಪ್ರತಿಪಕ್ಷಗಳು ಪ್ರಕಟಿಸಿದ ಜಂಟಿ ಹೇಳಿಕೆಯೊಂದು ತಿಳಿಸಿದೆ.

ಸಂಸತ್ನಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಕೇಂದ್ರ ಸರಕಾರವೇ ಸಂಪೂರ್ಣ ಹೊಣೆಗಾರನಾಗಿದೆ. ಪೆಗಾಸಸ್ ಹಗರಣದ ಬಗ್ಗೆ ಸಂಸತ್ನ ಉಭಯ ಸದನಗಳಲ್ಲಿ ಮಾಹಿತಿಯುಕ್ತವಾದ ಚರ್ಚೆಯಾಗಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸುತ್ತಿರುವ ಕೇಂದ್ರ ಸರಕಾರವು ಉದ್ದಟತನ ಹಾಗೂ ಮೊಂಡುತನದಿಂದ ವರ್ತಿಸುತ್ತಿದೆಯೆಂದು ಅವು ಕಿಡಿಕಾರಿವೆ.

ಮುಂಗಾರು ಅಧಿವೇಶನದಲ್ಲಿ ಸಂಸತ್ನ ಉಭಯ ಸದನಗಳಲ್ಲಿ ಕಲಾಪಗಳು ನಡೆಯದಂತೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ. ಕಾಂಗ್ರೆಸ್ನ ಈ ನಡವಳಿಕೆಯನ್ನು ಸಾರ್ವಜನಿಕರು ಹಾಗೂ ಮಾಧ್ಯಮಗಳ ಮುಂದೆ ಬಯಲುಗೊಳಿಸಬೇಕೆಂದು ಮೋದಿ ಮಂಗಳವಾರ ಕರೆನೀಡಿದ ಬೆನ್ನಲ್ಲೇ ಪ್ರತಿಪಕ್ಷಗಳು ಈ ಜಂಟಿ ಹೇಳಿಕೆಯನ್ನು ಬಿಡುಗಡೆಗೊಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News