ದಿಲ್ಲಿ: ದಲಿತ ಬಾಲಕಿಯ ಅತ್ಯಾಚಾರ, ಹತ್ಯೆ ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ; ಕೇಜ್ರಿವಾಲ್

Update: 2021-08-04 17:31 GMT

ಹೊಸದಿಲ್ಲಿ,ಆ. 4: ದೇಶದ ರಾಜಧಾನಿಯಲ್ಲಿ 9 ವರ್ಷದ ದಲಿತ ಬಾಲಕಿಯ ಅತ್ಯಾಚಾರಗೈದು, ಆಕೆಯನ್ನು ಹತ್ಯೆಗೈದ ಘೋರ ಕೃತ್ಯದ ಬಗ್ಗೆ ಮ್ಯಾಜಿಸ್ಟ್ರೇಟ್ ಮಟ್ಟದ ತನಿಖೆಗೆ ತನ್ನ ಸರಕಾರ ಆದೇಶಿಸಲಿದೆಯೆಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮಂಗಳವಾರ ತಿಳಿಸಿದ್ದಾರೆ.

ಬಾಲಕಿಯ ಸಂತ್ರಸ್ತ ಕುಟುಂಬಕ್ಕೆ 10 ಲಕ್ಷ ರೂ.ಗಳ ಪರಿಹಾರ ಕೂಡಾ ನೀಡಲಾಗುವುದೆಂದು ಅವರು ಘೋಷಿ ಸಿದ್ದಾರೆ. ದಿಲ್ಲಿಯಲ್ಲಿ ಮೃತ ಬಾಲಕಿಯ ಕುಟುಂಬಿಕರನ್ನು ಭೇಟಿಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘‘ ನಮ್ಮ ಹುಡುಗಿ ಮತ್ತೆ ಮರಳಿ ಬರ ಲಾರಳು.ಆಕೆಯ ಕುಟುಂಬಿಕರಿಗೆ ಅನ್ಯಾಯವಾಗಿರುವುದು ತೀರಾ ದುರದೃಷ್ಟಕರ. ಅದನ್ನೆಂದೂ ಪರಿಹರಿಸಲು ಸಾಧ್ಯವಿಲ್ಲ. ಆದರೆ ಅವರಿಗೆ ದಿಲ್ಲಿ ಸರಕಾರವು 10 ಲಕ್ಷ ರೂ.ಗಳ ಪರಿಹಾರಧನ ನೀಡಲಿದೆ ಹಾಗೂ ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಿದೆ’’ ಎಂದವರು ಹೇಳಿದರು.

ಸ್ಥಳೀಯರೊಂದಿಗೆ ಪಾಲಕರ ಧರಣಿ

ಪ್ರಕರಣದ ಆರೋಪಿಗಳಿಗೆ ಮರಣದಂಡನೆ ಯಾಗಬೇಕೆಂದು ಆಗ್ರಹಿಸಿ, ನೈಋತ್ಯ ದಿಲ್ಲಿಯಲ್ಲಿರುವ ಘಟನೆ ನಡೆದ ಸ್ಥಳದಲ್ಲಿ ಮಂಗಳವಾರ ಬಾಲಕಿಯ ಹೆತ್ತವರೊಂದಿಗೆ ನೂರಾರು ಮಂದಿ ಸ್ಥಳೀಯರು ಪ್ರತಿಭಟನೆ ನಡೆಸಿದರು.

ಅರವಿಂದ್ ಕೇಜ್ರಿವಾಲ್ ಅವರು ಬಾಲಕಿಯ ಹೆತ್ತವರನ್ನು ಭೇಟಿಯಾಗಲು ಸ್ಥಳಕ್ಕೆ ಆಗಮಿಸಿದಾಗ, ಪ್ರತಿಭಟನಾ ಕಾರರು ಮುಖ್ಯಮಂತ್ರಿಯನ್ನು ಸುತ್ತುವರಿದು ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಆಗ ಕೇಜ್ರಿವಾಲ್ ಧರಣಿ ನಿರತರ ಜೊತೆ ಮಾತನಾಡಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವುದನ್ನು ಖಾತರಿ ಪಡಿಸಲು ತನ್ನ ಸರಕಾರವು ಉನ್ನತ ನ್ಯಾಯವಾದಿಗಳನ್ನು ನೇಮಿಸಲಿದೆ. ದಿಲ್ಲಿಯಲ್ಲಿ ಕಾನೂನು, ಸುವ್ಯವಸ್ಥೆಯನ್ನು ಬಲಪಡಿಸಲು ಸದೃಢವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ಮಾಡುವುದಾಗಿ ಅವರು ತಿಳಿಸಿದರು.

ನೈಋತ್ಯ ದಿಲ್ಲಿಯಲ್ಲಿರುವ ತನ್ನ ತಂದೆತಾಯಿಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಬಾಲಕಿಯು, ರವಿವಾರ ಸಂಜೆ 5:30ರ ಸುಮಾರಿಗೆ ಸಮೀಪದ ಚಿತಾಗಾರದಲ್ಲಿರುವ ನೀರಿನ ಕೂಲರ್ನಲ್ಲಿ ನೀರು ತರುವುದಾಗಿ ಹೇಳಿ ಹೋದ ವಳು ಹಿಂತಿರುಗಿ ಬರಲಿಲ್ಲ. ಆನಂತರ ಬಾಲಕಿ ಮನೆಯವರಿಗೆ ಪರಿಚಯವಿರುವ ಶಂಕಿತ ಆರೋಪಿಗಳು, ಕರೆ ಮಾಡಿ ಆಕೆಯ ಮಗಳು ಚಿತಾಗಾರದ ಕೂಲರ್ನಿಂದ ನೀರು ಸಂಗ್ರಹಿಸುತ್ತಿದ್ದಾಗ ವಿದ್ಯುದಾಘಾತಕ್ಕೊಳಗಾಗಿ ಸಾವನ್ನಪ್ಪಿರುವುದಾಗಿ ತಿಳಿಸಿದರು ಮತ್ತು ಸ್ಥಳಕ್ಕೆ ಧಾವಿಸಿದ ಬಾಲಕಿಯ ಮನೆಯವರಿಗೆ ಸುಟ್ಟು ಕರಕಲಾದ ಮೃತದೇಹವನ್ನು ತೋರಿಸಿದ್ದರು.

ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸದಂತೆ ಬಾಲಕಿಯ ತಾಯಿಗೆ ಹೇಳಿದ ಆರೋಪಿಗಳು, ಒಂದು ವೇಳೆ ದೂರು ನೀಡಿದಲ್ಲಿ ಅವರು ಪ್ರಕರಣ ದಾಖಲಿಸಲಿದ್ದಾರೆ ಮತ್ತು ವಿನಾಕಾರಣ ಕೋರ್ಟ್ ಕಚೇರಿಗೆ ಅಲೆದಾಡಬೇಕಾದೀತು ಮತ್ತು ಮರಣೋತ್ತರ ಪರೀಕ್ಷೆಯ ವೇಳೆ ವೈದ್ಯರು ಬಾಲಕಿಯ ಅಂಗಾಂಗಗಳನ್ನು ಕದಿಯಲಿದ್ದಾರೆ. ಹೀಗಾಗಿ ಆಕೆಯ ಮೃತದೇಹವನ್ನು ಅಂತ್ಯಕ್ರಿಯೆ ಮಾಡುವಂತೆ ತಿಳಿಸಿದರು.

ಪ್ರಕರಣಕ್ಕೆ ಸಂಬಂದಿಸಿ ಪೊಲೀಸರು ಸ್ಮಶಾನದ ಪುರೋಹಿತ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಘಟನೆಯ ಬಗ್ಗೆ ದಿಲ್ಲಿ ಮಹಿಳಾ ಆಯೋಗವು ಈಗಾಗಲೇ ತನಿಖೆಯನ್ನು ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News