ಕನ್ನಡ ಮಕ್ಕಳನ್ನು ಉದ್ಧರಿಸಿದ ಮುಂಬೈ ಮನಪಾ ಶಾಲೆಗಳು

Update: 2021-08-05 19:30 GMT

ಸಾವಿರಾರು ರೂಪಾಯಿ ಡೊನೇಷನ್ ಕೊಟ್ಟು ಸೇರಿಸುವ ಶಾಲೆಗಳಲ್ಲಿ ದೊರಕುವ ಶಿಕ್ಷಣಕ್ಕಿಂತ ಹೆಚ್ಚಿನ ಜ್ಞಾನ ದೊರಕುವ ಶಿಕ್ಷಣ ಕೇಂದ್ರಗಳು ಮನಪಾ ಶಾಲೆಗಳಾಗಿವೆ. ಈ ಶಾಲೆಗಳು ವಿದ್ಯಾರ್ಥಿಗಳಿಗೆ ಕೇವಲ ಪಠ್ಯವನ್ನಷ್ಟೇ ಬುರುಡೆಯೊಳಗೆ ತುಂಬಿಸುವ ಕಾರ್ಯ ಮಾಡುತ್ತಿಲ್ಲ. ಇಲ್ಲಿನ ಶಿಕ್ಷಕರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ಪರಿ ಇತರ ಶಾಲೆಗಳಿಗೆ ಮಾದರಿಯಾಗಿದೆ.



ಮುಂಬೈಯಲ್ಲಿ ಇಂದು ಕನ್ನಡ ಉಳಿದಿದೆ ಎಂದಾದರೆ ಅದಕ್ಕೆ ಮಹತ್ವದ ಕೊಡುಗೆ ನೀಡಿದ್ದು ಇಲ್ಲಿನ ರಾತ್ರಿಶಾಲೆಗಳು, ಹೊಟೇಲ್‌ಗಳು ಹಾಗೂ ಮಹಾನಗರಪಾಲಿಕೆಯ(ಮನಪಾ) ಶಾಲೆಗಳು. ಕರಾವಳಿ ಕರ್ನಾಟಕದಿಂದ ಹಿಂದೆ ಹೊಟ್ಟೆಪಾಡಿಗೆಂದು ಮುಂಬೈಗೆ ಬರುತ್ತಿದ್ದ ಮಕ್ಕಳು ರಾತ್ರಿ ಶಾಲೆಗಳಲ್ಲಿ ಕಲಿತು ಕನ್ನಡ ತೇರನ್ನು ಎಳೆಯುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಅಂದಿನ ಉದಾರ ಮನಸ್ಸಿನ ಹೊಟೇಲ್ ಮಾಲಕರು ರಾತ್ರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಅಕ್ಷರಶಃ ಪಾಲಕರಾಗಿ ಅವರ ಬೆನ್ನಿಗೆ ನಿಂತರು. ಅಲ್ಲದೆ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ದೊಡ್ಡ ಮಟ್ಟದಲ್ಲಿ ದೇಣಿಗೆ ನೀಡುತ್ತಾ ಶಿಕ್ಷಣ ಸಂಸ್ಥೆಗಳ ಬೆನ್ನೆಲುಬಾದರು. ಕರ್ನಾಟಕದಿಂದ ಬರುತ್ತಿದ್ದ ಕಾರ್ಮಿಕ ವರ್ಗ ಅಲೆಮಾರಿಗಳಂತೆ ಬದುಕುತ್ತಾ ಇಲ್ಲಿನ ಕಟ್ಟಡ, ರಸ್ತೆ, ಸೇತುವೆಗಳ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅಂತಹವರ ಮಕ್ಕಳು ಹೆಚ್ಚಾಗಿ ಮನಪಾ ಶಾಲೆಗಳಿಗೆ ಹೋಗುತ್ತಿದ್ದರು. ಅಂತಹ ಮಕ್ಕಳಷ್ಟೇ ಅಲ್ಲದೆ ಕನ್ನಡ ಭಾಷೆಯ ಮೇಲಿನ ಪ್ರೀತಿಯಿಂದ ಹೆಚ್ಚಿನ ಪಾಲಕರು ತಮ್ಮ ಹತ್ತಿರದ ಮನಪಾ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದರು. ಅವರ ಮನೆ ಮಾತು ಕೊಂಕಣಿ, ತುಳು, ಕೊಡವ, ಮೋಯ ಮಲಯಾಳಿ ಯಾವುದಿದ್ದರೂ ಅಂದು ಹೆಚ್ಚಿನವರು ಆ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಜ್ಞಾತರಂತೆ ಜೀವಿಸುತ್ತಿದ್ದ ಧಾರಾವಿ ಕನ್ನಡಿಗರೂ ತಮ್ಮ ಮಕ್ಕಳನ್ನು ಮನಪಾದ ಕನ್ನಡ ಶಾಲೆಗಳಿಗೆ ಸೇರಿಸುತ್ತಿದ್ದರು. ಅವರಲ್ಲಿ ಹೆಚ್ಚಿನವರ ಮನೆಮಾತು ತೆಲುಗು ಎನ್ನುವುದು ಗಮನಿಸಬೇಕಾದ ಸಂಗತಿ. ಆದರೆ ಒಂದೊಮ್ಮೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ (ವಿದ್ಯಾರ್ಥಿಗಳ ಸಂಖ್ಯೆಯ ದೃಷ್ಟಿಯಿಂದ) ಮನಪಾ ಶಾಲೆಗಳಿಂದು ಡೋಲಾಯಮಾನ ಸ್ಥಿತಿಯಲ್ಲಿವೆ.

‘‘ಏಶ್ಯದ ಅತಿ ದೊಡ್ಡ ಕೊಳಗೇರಿ ಧಾರಾವಿಯಲ್ಲಿ ಮಹಾನಗರಪಾಲಿಕೆ ನಡೆಸುವ ಕನ್ನಡ ಶಾಲೆಯಲ್ಲಿ ಒಂದೂವರೆ ಸಾವಿರಕ್ಕೂ ಹೆಚ್ಚು ಮಕ್ಕಳಿದ್ದಾರೆ. ತುತ್ತು ಅನ್ನಕ್ಕೂ ಗತಿ ಇರದ, ಮಾಸಿದ ಹರಕುಬಟ್ಟೆಯ, ಬರಿಗಾಲಿನ, ಕೆದರಿದ ತಲೆಕೂದಲಿನ ಈ ಮಕ್ಕಳ ಬದುಕಿಗೆ ನೆರವಿನ ಅಗತ್ಯವಿದೆ’’ ಎಂದು ತಮ್ಮ ‘ಯಕ್ಷರಂಗ’ ಕೃತಿಯಲ್ಲಿ ರವಿ ರಾ. ಅಂಚನ್ ಉಲ್ಲೇಖಿಸಿರುವುದರನ್ನು ಗಮನಿಸಿದರೆ ನಮಗೆ ಅಂದಿನ ಮನಪಾ ಧಾರಾವಿ ಶಾಲೆಯ ಮಕ್ಕಳ ಪರಿಸ್ಥಿತಿ ಅರಿವಾಗುತ್ತದೆ.

ಮುಂಬೈಯ ಕೋಟೆ ಪ್ರದೇಶದಲ್ಲಿ 1948ರಲ್ಲಿ ಅಸ್ತಿತ್ವಕ್ಕೆ ಬಂದ ‘ಕಾವಸ್ಜಿ ಪಟೇಲ್ ಸ್ಟ್ರೀಟ್ ಮುನ್ಸಿಪಲ್ ಕನ್ನಡ ಶಾಲೆ’ ಪ್ರಥಮ ಮನಪಾ ಶಾಲೆ ಎಂಬ ದಾಖಲೆಯಿದೆ. ಮನಪಾ ಶಾಲೆಗಳಲ್ಲಿ ಹೆಚ್ಚಾಗಿ ಎಂಟನೇ ತರಗತಿವರೆಗೆ ಶಿಕ್ಷಣ ನೀಡುವ ಸೌಲಭ್ಯ ಇದೆ. ಹಿಂದೆ ಸುಮಾರು 60-70 ಕನ್ನಡ ಮಾಧ್ಯಮ ಶಾಲೆಗಳಿದ್ದಾಗ ಅವುಗಳಲ್ಲಿ ಸುಮಾರು ಏಳು ಶಾಲೆಗಳಲ್ಲಿ ಹತ್ತನೇ ತರಗತಿವರೆಗೆ ಕಲಿಸುವ ವ್ಯವಸ್ಥೆ ಇತ್ತು. ಇಂದು ಒಟ್ಟು ಎಲ್ಲಾ ಮಾಧ್ಯಮಗಳು ಸೇರಿ 767 ಮನಪಾ ಶಾಲೆಗಳಿವೆ. ಅವುಗಳಲ್ಲಿ 543 ಶಾಲೆಗಳಲ್ಲಿ ಎಂಟನೇ ತರಗತಿಯವರೆಗೆ ಹಾಗೂ 224 ಶಾಲೆಗಳಲ್ಲಿ 10ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಇವುಗಳಲ್ಲಿ ಕನ್ನಡದ ಶಾಲೆಗಳಲ್ಲಿ ಕೇವಲ ನಾಲ್ಕು ಶಾಲೆಗಳಲ್ಲಿ ಮಾತ್ರ 10ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಎಲ್ಲಾ ಮನಪಾ ಶಾಲೆಗಳಲ್ಲಿ (ಇಂಗ್ಲಿಷ್, ಹಿಂದಿ, ಮರಾಠಿ, ಉರ್ದು ಮಾಧ್ಯಮ ಬಿಟ್ಟು) ಕೆಲವು ಮಾಧ್ಯಮಗಳ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕುಂಠಿತಗೊಳ್ಳುತ್ತಿರುವುದನ್ನು ಮನಗಂಡ ನಗರ ಪಾಲಿಕೆ ಈ ವರ್ಷದ ಫೆಬ್ರವರಿಯಲ್ಲಿ (2021) ಸುಮಾರು 21 ಶಾಲೆಗಳಲ್ಲಿ ಹೊಸದಾಗಿ ಹತ್ತನೇ ತರಗತಿವರೆಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದೆ. ಅವುಗಳಲ್ಲಿ 8 ಇಂಗ್ಲಿಷ್ ಮಾಧ್ಯಮ ಶಾಲೆ, 6 ಹಿಂದಿ ಮಾಧ್ಯಮ ಶಾಲೆ, 4 ಮರಾಠಿ ಮಾಧ್ಯಮ ಶಾಲೆಗಳಲ್ಲಿ ಮತ್ತು ತಮಿಳು, ಉರ್ದು ಹಾಗೂ ತೆಲುಗು ಮಾಧ್ಯಮಗಳ ತಲಾ ಒಂದೊಂದು ಶಾಲೆಗಳಲ್ಲಿ ಈ ಸೌಲಭ್ಯ ಕಲ್ಪಿಸಿಕೊಡಲಾಗಿದೆ.

1996-97ರ ಹೊತ್ತಿಗೆ ಸುಮಾರು 48 ಶಾಲೆಗಳು; ಸುಮಾರು ಹತ್ತು ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿದ್ದರು. ಅಂದು ಒಟ್ಟು 342 ತರಗತಿಗಳು ಹಾಗೂ 300 ಅಧ್ಯಾಪಕ ವೃಂದದವರು ಇದ್ದರು ಎಂಬ ದಾಖಲೆ ಸಿಗುತ್ತದೆ. ಆದರೆ ಇಂದು ಇರುವ ಮನಪಾ ಶಾಲೆಗಳ ಸಂಖ್ಯೆ 36. ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಸುಮಾರು 2,000. ಅಲ್ಲದೆ ಅಧ್ಯಾಪಕ ವೃಂದದ ಸಂಖ್ಯೆ ಸುಮಾರು 120ಕ್ಕೆ ಇಳಿದಿದೆ. ಇಷ್ಟರಲ್ಲೇ ನಮ್ಮ ಕನ್ನಡ ಮನಪಾ ಶಾಲೆಗಳ ಒಟ್ಟು ಚಿತ್ರಣವನ್ನು ಊಹಿಸಬಹುದು. ಸದ್ಯ ಉಪ ಶಿಕ್ಷಣ ಅಧಿಕಾರಿ (ಡೆಪ್ಯುಟಿ ಎಜುಕೇಶನ್ ಆಫೀಸರ್) ಆಗಿ ಉನ್ನತ ಹುದ್ದೆ ಹೊಂದಿರುವ ಮಮತಾ ರಾವ್ ಅವರ ಅಭಿಪ್ರಾಯದಂತೆ ಹೊಟ್ಟೆಪಾಡಿಗೆ ಇಲ್ಲಿಗೆ ಬಂದು ಅಲೆಮಾರಿಗಳಂತೆ ಬದುಕುತ್ತಿದ್ದು ನಡುವೆ ಊರಿಗೆ ತಿರುಗಿ ಹೋದವರು ಮರಳಿ ಬಾರದಿರುವುದು, ಇತ್ತೀಚಿನ ವರ್ಷಗಳಲ್ಲಿ ಹೊಟ್ಟೆಪಾಡಿಗಾಗಿ ಬರುವ ಸಂಸಾರಗಳ ಸಂಖ್ಯೆ ಕಡಿಮೆಯಾಗಿರುವುದು ಇತ್ಯಾದಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣಗಳೆಂದು ವಿವರಿಸುತ್ತಾರೆ. ‘‘ಮನಪಾ ಶಾಲೆಗಳಲ್ಲಿ ಈಗ ಇಂಗ್ಲಿಷ್, ಹಿಂದಿ, ಉರ್ದು ಮಾಧ್ಯಮದ ಶಾಲೆಗಳು ಉನ್ನತ ಸ್ಥಾನದಲ್ಲಿವೆ’’ ಎಂದು ಹೇಳುವ ಮಮತಾ ರಾವ್ ಈಗ ಶಾಲೆಯ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ.

ಪ್ರತಿಷ್ಠಿತ ಕರ್ನಾಟಕ ಸಂಘವು ಪ್ರತಿವರ್ಷ ಯೋಗ್ಯ ವಿದ್ಯಾರ್ಥಿಗಳಿಗೆ ದೊಡ್ಡ ಮೊತ್ತದ ಹಣವನ್ನು ನೀಡಿ ಶಿಕ್ಷಣ ರಂಗಕ್ಕೆ ಮಹತ್ವದ ಕೊಡುಗೆ ಸಲ್ಲಿಸುತ್ತಿತ್ತು. 1996-97ರ ಸಾಲಿನಲ್ಲಿ ಕರ್ನಾಟಕ ಸಂಘದ ಡಾ. ವಿಶ್ವನಾಥ್ ಕಾರ್ನಾಡ್, ಪ್ರಾ. ಸೀತಾರಾಂ ಆರ್. ಶೆಟ್ಟಿ ಹಾಗೂ ಯು. ಉದಯ ಕುಮಾರ್ ಈ ಮೂವರು ಸಂಘದ ಪರವಾಗಿ ಅನುದಾನ ನೀಡುವ ಶಾಲೆಗಳಿಗೆ ಭೇಟಿ ನೀಡಿದಾಗ ಅಲ್ಲಿನ ವ್ಯವಸ್ಥೆಯನ್ನು ಕಂಡು ಅಭಿವ್ಯಕ್ತಿಸಿದ ಪರಿ ಗಮನಿಸಿ. ‘‘ಭೇಟಿಯಿತ್ತ ಮೂರು ಮಹಾನಗರ ಪಾಲಿಕೆ ಶಾಲೆಗಳಲ್ಲಿ ಎರಡು ಶಾಲೆಗಳಲ್ಲಿ ಸ್ವಚ್ಛತೆ, ಕುಡಿಯುವ ನೀರಿನ ಪೂರೈಕೆ, ಶೌಚಾಲಯ ಮುಂತಾದ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದಂತೆ ಇರುವ ವ್ಯವಸ್ಥೆ ಅಷ್ಟು ಸಮಾಧಾನಕರವಲ್ಲ. ಒಂದು ಶಾಲೆಯಲ್ಲಂತೂ ಶೌಚಾಲಯ ಇದೆ ಆದರೆ ಬಾಗಿಲಿರಲಿಲ್ಲ. ಶೌಚಾಲಯದ ವಾತಾವರಣವಿಡೀ ದುರ್ಗಂಧ ವಿರುತ್ತಿತ್ತು’’

ಆದರೆ ಇಂದು ಇಂತಹ ಸ್ಥಿತಿಯಿಲ್ಲ. ಈಗ ಪಾಲಿಕೆ ಸ್ವಚ್ಛತೆಗೆ ಆದ್ಯತೆ ನೀಡುತ್ತಿದೆ. ಶೌಚಾಲಯವಲ್ಲದೆ ಇಡೀ ಶಾಲಾ ಕಟ್ಟಡವನ್ನು ದಿನನಿತ್ಯ ಸ್ವಚ್ಛಗೊಳಿಸಲು ಕೆಲವೊಂದು ಸಂಸ್ಥೆಗಳನ್ನು ಗುತ್ತಿಗೆಗೆ ಇರಿಸಿಕೊಂಡು ಕೆಲಸ ನಡೆಸುತ್ತಿದೆ ಎಂದು ಸುಮಾರು 2006ರಿಂದ ‘ಜೆರಿಮೇರಿ ಮುನ್ಸಿಪಲ್ ಕನ್ನಡ ಶಾಲೆ’ಯಲ್ಲಿ ಅಧ್ಯಾಪಕರಾಗಿ ದುಡಿಯುತ್ತಿರುವ ಶ್ರೀಮಂತ್ ಶಿವರಾಯ್ ಕಟ್ಟೀಮನಿ ಇತ್ತೀಚಿನ ದಿನಗಳಲ್ಲಿ ಬದಲಾದ ಮನಪಾದ ಮುಖ ಪರಿಚಯ ಮಾಡಿಕೊಡುತ್ತಾರೆ. ‘‘ಒಂದರಿಂದ ಎಂಟನೇ ತರಗತಿವರೆಗೆ ಇರುವ ಈ ಶಾಲೆಯಲ್ಲಿ ಶಿಕ್ಷಕರ ಸಂಖ್ಯೆ ಮಾತ್ರ ಕೇವಲ ಎರಡು. ಹೊಸ ನೇಮಕಾತಿ ಆಗುತ್ತಿಲ್ಲ. ಇದಕ್ಕಾಗಿ ಇಲ್ಲಿನ ಸಂಘ -ಸಂಸ್ಥೆಗಳ ಸಹಕಾರ ಬೇಕು’’ ಎಂದು ಅವರ ಅಳಲು. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇಲ್ಲಿನ ಮನಪಾ ಶಾಲೆಗಳ ಬಗ್ಗೆ ರವಿ ರಾ. ಅಂಚನ್ ಅವರ ಮುಂದಾಳತ್ವದಲ್ಲಿ ವಿಶಿಷ್ಟ ರೀತಿಯ ಸಮೀಕ್ಷೆಯನ್ನು ಮಾಡಿ, ಸಂಘ-ಸಂಸ್ಥೆಗಳು, ಶಿಕ್ಷಣ ತಜ್ಞರು ಮತ್ತು ಶಿಕ್ಷಕ ವೃಂದ ಎಲ್ಲರೂ ಸೇರಿ ಚರ್ಚಿಸಿ ಮಹತ್ವದ ನಿರ್ಣಯ ಕೈಗೊಂಡರು. ಹಲವಾರು ಸಂಘ ಸಂಸ್ಥೆಗಳು ಶಿಕ್ಷಕರ ಕೊರತೆ ಇರುವಲ್ಲಿ ಯೋಗ್ಯ ಶಿಕ್ಷಕರನ್ನು/ಎಂ.ಎ. ಶಿಕ್ಷಣ ಪಡೆದು ಹೊರಬಂದವರನ್ನು ಆಗ ರೂ. 3,000ದಂತೆ ತಿಂಗಳ ಸಂಬಳ ನೀಡಿ ಪ್ರಾಯೋಜಿಸುವ ಸ್ತುತ್ಯ ಕಾರ್ಯ ಮಾಡಿವೆ. ಅಂದು ಕರ್ನಾಟಕ ಸರಕಾರದಿಂದ ಕೆಲವೊಂದು ಆಗಲೇಬೇಕಾದ ಮಹತ್ವದ ಕಾರ್ಯದ ಬಗ್ಗೆ ಗೊತ್ತುವಳಿ ಮಂಡಿಸಿ ಅಂದಿನ ಸರಕಾರಕ್ಕೆ ಒಪ್ಪಿಸಿದ್ದೂ ಆಗಿದೆ. ಆದರೆ ಎಂದಿನಂತೆ ಸರಕಾರದಿಂದ ಯಾವುದೇ ರೀತಿಯ ಸಕಾರಾತ್ಮಕ ಉತ್ತರ ಬಂದಿರಲಿಲ್ಲ. ಕರ್ನಾಟಕ ಸರಕಾರ ಅಂದು ಮಹಾರಾಷ್ಟ್ರ ಸರಕಾರದ ಜತೆ ಚರ್ಚಿಸಿ ಕನ್ನಡಿಗರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವಂತೆ ವಿನಂತಿಸಿ ಮನಪಾ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ನೇಮಕಾತಿ ಮಾಡಿಸಬಹುದಿತ್ತು. ಆದರೆ ಅದಾಗಲಿಲ್ಲ.

ಮುಂಬೈಯ ಒಂದು ಪ್ರತಿಷ್ಠಿತ ಸಂಸ್ಥೆ ಹಲವಾರು ವರ್ಷ ಶಿಕ್ಷಕರನ್ನು ಉತ್ತಮ ರೀತಿಯಿಂದ ಪ್ರಾಯೋಜಿಸುತ್ತ ಬರುತ್ತಿತ್ತು. ಆದರೆ ಅಲ್ಲಿನ ಕೆಲವೊಂದು ಪದಾಧಿಕಾರಿಗಳು ಸಂಘವನ್ನು ತಮ್ಮ ಪಿತ್ರಾರ್ಜಿತ ಆಸ್ತಿ ಎಂಬಂತೆ ಭಾವಿಸಿ, ಶಿಕ್ಷಕರು ತಮ್ಮ 3 ಸಾವಿರ ರೂಪಾಯಿಗಾಗಿ ಬರುವಾಗ ‘‘ನಮಗಲ್ಲಿ ಭಿಕ್ಷೆ ನೀಡುವಂತೆ ವರ್ತಿಸುತ್ತಾರೆ’’ ಎಂದು ಅಲ್ಲಿಂದ ಪ್ರಾಯೋಜಿಸಲ್ಪಟ್ಟ ಶಿಕ್ಷಕರು ಹತಾಶರಾಗಿ ಹೇಳುವಾಗ ಕೆಲವೊಂದು ವ್ಯಕ್ತಿಗಳಿಗೆ ಏರಿದ ಅಧಿಕಾರದ ಮದದ ಬಗ್ಗೆ ಖೇದವೆನಿಸುತ್ತದೆ.

‘‘ಮನಪಾ ಶಾಲೆಗಳಲ್ಲಿ ಏನೂ ಕಲಿಸುವುದಿಲ್ಲ. ಅದು ಮಕ್ಕಳ ಸಮಯ ಕೊಲ್ಲುವ ಕೇಂದ್ರ’’ ಎನ್ನುವವರು ಬಹಳಷ್ಟು ಮಂದಿ. ‘‘ಅಲ್ಲಿ ಸುಸಂಸ್ಕೃತ ಶಿಕ್ಷಕರಿಲ್ಲದಿರುವಾಗ ಮಕ್ಕಳು ಸುಶಿಕ್ಷಿತರಾಗುವುದು ಹೇಗೆ’’ ಎಂಬ ಪ್ರಶ್ನೆ ಬಹಳಷ್ಟು ಮಂದಿಯದ್ದು. ಆದರೆ ಇದು ಕೇವಲ ಅಪಪ್ರಚಾರವಾಗಿದೆ. ಸಾವಿರಾರು ರೂಪಾಯಿ ಡೊನೇಷನ್ ಕೊಟ್ಟು ಸೇರಿಸುವ ಶಾಲೆಗಳಲ್ಲಿ ದೊರಕುವ ಶಿಕ್ಷಣಕ್ಕಿಂತ ಹೆಚ್ಚಿನ ಜ್ಞಾನ ದೊರಕುವ ಶಿಕ್ಷಣ ಕೇಂದ್ರಗಳು ಮನಪಾ ಶಾಲೆಗಳಾಗಿವೆ. ಈ ಶಾಲೆಗಳು ವಿದ್ಯಾರ್ಥಿಗಳಿಗೆ ಕೇವಲ ಪಠ್ಯವನ್ನಷ್ಟೇ ಬುರುಡೆಯೊಳಗೆ ತುಂಬಿಸುವ ಕಾರ್ಯ ಮಾಡುತ್ತಿಲ್ಲ. ಇಲ್ಲಿನ ಶಿಕ್ಷಕರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ಪರಿ ಇತರ ಶಾಲೆಗಳಿಗೆ ಮಾದರಿಯಾಗಿದೆ. ಇಲ್ಲಿನ ಮನಪಾ ಶಾಲೆಗಳಲ್ಲಿ ಕನ್ನಡದ ಪ್ರಾಥಮಿಕ ಜ್ಞಾನವನ್ನು ಪಡೆದು ಸಮಾಜದಲ್ಲಿ ಗಣ್ಯರೆನಿಸಿಕೊಂಡವರ ಕೆಲವು ಹೆಸರುಗಳನ್ನು ಉಲ್ಲೇಖಿಸಿದಾಗ ನಮಗೆ ಅದರ ಅರಿವು ಆಗುತ್ತದೆ. ಚಿಂತಕ ರವಿ ರಾ. ಅಂಚನ್, ರಾಷ್ಟ್ರ ಮಟ್ಟದಲ್ಲೂ ಮಿಂಚಿದ ಕನ್ನಡದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಅಪರೂಪದ ಶಿಕ್ಷಣ ತಜ್ಞ ಜಿ.ವಿ. ಶೆಟ್ಟಿಗಾರ್, ಬಿಲ್ಲವರ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದ ನಿತ್ಯಾನಂದ ಕೋಟ್ಯಾನ್, ಯಕ್ಷಗಾನ ಕಲಾವಿದ, ಹೊಟೇಲು ಉದ್ಯಮಿ ಸುರೇಶ್ ಸುವರ್ಣ, ಮನಪಾ ಶಾಲೆಯಲ್ಲೇ ಕಲಿತು ಮನಪಾ ಶಾಲೆಗಳ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಕಸ್ತೂರಿ ಶೆಟ್ಟಿ, ಈಗ ಉಪ ಶಿಕ್ಷಣ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಮತಾ ರಾವ್ ಹೀಗೆ ಮನಪಾ ಶಾಲೆಗಳಲ್ಲಿ ಕಲಿತು ಸಮಾಜದಲ್ಲಿ ಗುರುತಿಸಲ್ಪಡುವ ಹೆಸರುಗಳ ಪಟ್ಟಿ ಒಂದಲ್ಲ, ಎರಡಲ್ಲ ಸಾವಿರಾರು. ಇವು ಕೇವಲ ಉದಾಹರಣೆಗಾಗಿ ಉಲ್ಲೇಖಿಸಿರುವುದಷ್ಟೇ.

ಮನಪಾ ಶಾಲೆಗಳಿಗೆ ಹಿರಿಯ ಸಾಹಿತಿಗಳನ್ನು, ಗಣ್ಯರನ್ನು ಕರೆದೊಯ್ದು ಆಯಾ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಮುಖಾಮುಖಿಯಾಗಿಸುತ್ತ ಹೊರಪ್ರಪಂಚದ ಹಾಗೂ ಕನ್ನಡ ಕಲೆ ಸಂಸ್ಕೃತಿಯ ಸ್ತುತ್ಯ ಕಾರ್ಯವನ್ನು ಮಾಡುವ ‘ಮುಂಬೆಳಕು’ನಂತಹ ಚಿಕ್ಕ ಪುಟ್ಟ ಸಂಘಟನೆಗಳು; ಮನಪಾ ಶಾಲಾ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವ ಶ್ಲಾಘನೀಯ ಕಾರ್ಯವನ್ನು ಮಾಡುತ್ತಿರುವ ಗೋರೆಗಾಂವ್ ಕರ್ನಾಟಕ ಸಂಘ, ಪೊವಾಯಿ ಕನ್ನಡ ಸಂಘದಂತಹ ಹಲವಾರು ಸಂಘ-ಸಂಸ್ಥೆಗಳು, ಎಲ್ಲಿ ಸೌಲಭ್ಯದ ಕೊರತೆ ಇವೆಯೋ ಆ ಶಾಲೆಗಳನ್ನು ಗುರುತಿಸಿ ಅವುಗಳಿಗೆ ಇಲ್ಲಿನ ಹೊಟೇಲ್ ಮತ್ತು ಇನ್ನಿತರ ಕನ್ನಡಿಗ ಉದ್ಯಮಿಗಳನ್ನು ಸಂಪರ್ಕಿಸಿ ಶಾಲೆಗಳಿಗೆ ಪರಿಕರಗಳನ್ನು ಒದಗಿಸಲು ಸಹಕರಿಸಿದ ಕನ್ನಡದ ಕಟ್ಟಾಭಿಮಾನಿ ಡಾ. ಸಂಜೀವ ಶೆಟ್ಟಿ ಇಂತಹ ನೂರಾರು ಮಹನೀಯರಿಂದಾಗಿ ಇಂದು ಕೂಡಾ ಮನಪಾ ಶಾಲೆಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ.

ನಾನಾಚೌಕ್ ಮುನ್ಸಿಪಲ್ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಮಾಧ್ಯಮದ ವಿಭಾಗ ಅತಂತ್ರ ಸ್ಥಿತಿಯಲ್ಲಿದ್ದಾಗ ಕೋಟೆ ಪರಿಸರದ ಕನ್ನಡ ಭವನ ಶಾಲೆಯ ಪ್ರಾಂಶುಪಾಲರು ತಮ್ಮಲ್ಲಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳನ್ನು ಕಳುಹಿಸಿ ಅಲ್ಲಿನ ಮನಪಾ ಶಾಲೆ ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇತ್ತ ವಿಪಿಎಂ, ಚೆಂಬೂರು ಕರ್ನಾಟಕ ಸಂಘ ಸಂಚಾಲಿತ ಶಾಲೆ, ಎನ್‌ಕೆಇಎಸ್ ಮೊದಲಾದ ಕನ್ನಡ ಮಾಧ್ಯಮ ಶಾಲೆಗಳು ಇಲ್ಲಿನ ಹೆಚ್ಚಿನ ಮನಪಾ ಕನ್ನಡ ಮಾಧ್ಯಮ ಶಾಲೆಗಳ ಬೆಳವಣಿಗೆ ಹಾಗೂ ಉಳಿವಿನಲ್ಲಿ ಮಾತ್ರ ಪಾತ್ರವಹಿಸಿವೆ.

ಮನಪಾ ಶಾಲೆಗಳ ಬಗ್ಗೆ ಬರೆಯುವಾಗ ಮುಂಬೈ ಕಂಡ ಅಪ್ರತಿಮ ಸಂಘಟಕಿ ರಂಗ ಕಲಾವಿದೆ ಭಾರತಿ ಕೊಡ್ಲೇಕರ್ ಅವರನ್ನು ಮರೆಯಲಾಗದು. ಮುಂಬೈಯ ವಿಶಾಲ ಹಾಗೂ ಕುಖ್ಯಾತ ಪ್ರದೇಶವಾದ ಕಾಮಾಟಿಪುರದ ಮಕ್ಕಳ ಬಗ್ಗೆ ಆಸ್ಥೆವಹಿಸಿ ಅಲ್ಲಿ ಶಾಲೆಯೊಂದರ ಅಗತ್ಯವನ್ನು ಮನಗಾಣಿಸಲು ಪಟ್ಟು ಹಿಡಿದು ಅಲ್ಲಿಂದ ಕನ್ನಡ ಮನಪಾ ಶಾಲೆಯನ್ನು ಪ್ರಾರಂಭಿಸಿದ ಹಿರಿಮೆ ಮನಪಾ ಶಾಲಾ ಶಿಕ್ಷಕಿಯಾಗಿದ್ದ ಭಾರತಿ ಕೊಡ್ಲೇಕರ್ ಅವರದ್ದು. ಇಲ್ಲಿನ ಮಕ್ಕಳಿಗೆ ಶುಚಿತ್ವ, ಶಿಸ್ತಿನ ಪ್ರಾಥಮಿಕ ಶಿಕ್ಷಣವನ್ನು ಯಾವುದೇ ಮುಜುಗರ ಇಲ್ಲದೆ ನೀಡಿದವರು ಇವರು. ಕೊಳಚೆ ಪ್ರದೇಶಗಳ ವಲಸೆ ಕಾರ್ಮಿಕರ ಮಕ್ಕಳನ್ನು ಕರೆ ತರುವ ಪ್ರಾಮಾಣಿಕ ಕೆಲಸ ಮಾಡುವ ಮೇರಿ ಪಿಂಟೋ ಕೂಡಾ ಗಮನಾರ್ಹರು. ಗಿಲ್ಬರ್ಟ್ ಹಿಲ್‌ನಂತಹ ಕುಖ್ಯಾತ ಪ್ರದೇಶದಲ್ಲಿ ಮನಪಾ ಶಾಲೆ ತೆರೆಯುವಲ್ಲಿ ಮಹತ್ವದ ಪಾತ್ರ ವಹಿಸಿದ, ಉತ್ತಮ ಕಥೆಗಾರ್ತಿಯೂ ಆಗಿರುವ ಮೇರಿ ಪಿಂಟೋ ಸ್ಮರಣೀಯರು.

ಶಿಕ್ಷಣ ಇಲಾಖೆಯಲ್ಲಿ (ಮನಪಾ) ಸುಪರಿಂಡೆಂಟ್ ಆಗಿ ಕಾರ್ಯನಿರ್ವಹಿಸಿದ್ದ ಸುಮನ್ ಚಿಪ್ಳೂಣ್ಕರ್, ಡೆಪ್ಯುಟಿ ಎಜುಕೇಶನ್ ಆಫೀಸರ್ ಆಗಿದ್ದ ಶಾಂಭವಿ ಜೋಗಿ, ಆಡಳಿತಾತ್ಮಕ ಅಧಿಕಾರಿ ಕಸ್ತೂರಿ ಶೆಟ್ಟಿ, ಶಾರದಾ ಶೆಟ್ಟಿ (ಬೀಟ್ ಆಫೀಸರ್), ಮಮತಾ ರಾವ್ ಉಪ ಆಡಳಿತಾತ್ಮಕ ಅಧಿಕಾರಿ ಸದ್ಯ ಬೀಟ್ ಆಫೀಸರ್ ಆಗಿರುವ ಸೋಮಶೇಖರ್ ಜಿ. ಮಸಳಿ ಅಲ್ಲದೆ ಜಮುನಾ ಉಚ್ಚಿಲ್, ಲೀಲಾವತಿ ಉಚ್ಚಿಲ್, ಕವಿ ನಾಟಕಕಾರ ಮಲ್ಲಿಕಾರ್ಜನ್ ಜಲದೆ, ಸಾಹಿತಿ ಸನತ್ ಕುಮಾರ್ ಜೈನ್ ಮೊದಲಾದ ಶಿಕ್ಷಕರು ಇಲ್ಲಿನ ಕನ್ನಡ ಮನಪಾ ಶಾಲೆಗಳ ವಿದ್ಯಾರ್ಥಿಗಳ ಗುಣಮಟ್ಟ, ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ನಿರಂತರ ದುಡಿದವರು. ದಸಮನೆ ಸಾರ್, ಸಿದ್ದಲಿಂಗಪ್ಪಕಾಸಪ್ಪಕೇಶಗೊಂಡ, ಶ್ರೀಮಂತ್ ಶಿವರಾಯ್ ಕಟ್ಟೀಮನಿ, ಮಾದೇವ್ ಜಾವೀರ್, ಹನುಮಂತ ಕಟಕಿ ಮೊದಲಾದ ನೂರಾರು ಹಿರಿಯ ಪ್ರತಿಭಾನ್ವಿತ ಶಿಕ್ಷಕರ ದಂಡು ಇಂದು ಮಕ್ಕಳ ಯೋಗ್ಯ ಮಾರ್ಗದರ್ಶನಕ್ಕೆ ಕಟಿಬದ್ಧರಾಗಿ ನಿಂತಿದ್ದಾರೆ. ಇತ್ತೀಚಿನ ಹಲವಾರು ವರ್ಷಗಳಲ್ಲಿ ಎಸ್‌ಎಸ್‌ಸಿ (10ನೇ ತರಗತಿ)ಯಲ್ಲಿ ರಾತ್ರಿಶಾಲೆಗಳಲ್ಲಿ ರಾಜ್ಯ ಹಾಗೂ ಮುಂಬೈಯೊಳಗೆ ದಾಖಲೆ ಬರೆಯುತ್ತಿರುವ ಹೆಚ್ಚಿನ ವಿದ್ಯಾರ್ಥಿಗಳು ಈ ರಾತ್ರಿಶಾಲೆಗಳಿಗೆ ಮನಪಾ ಶಾಲೆಗಳಿಂದ ಬರುತ್ತಿರುವ ವಿದ್ಯಾರ್ಥಿಗಳೆಂದು ಅಭಿಮಾನದಿಂದ ಶಿಕ್ಷಕರೋರ್ವರು ಮಾಹಿತಿ ನೀಡುತ್ತಾರೆ.

ಇಲ್ಲಿನ ಮಕ್ಕಳ ಸ್ಥಿತಿ ಈಗ ಬಹಳಷ್ಟು ಸುಧಾರಿಸಿದೆ. ರಾಣಿ ಸತಿ ಮಾರ್ಗ್, ಮಲಾಡ್ ಮನಪಾ ಶಾಲೆಯಲ್ಲಿ ಕಲಿಸುತ್ತಿರುವ ಸಾಂಗ್ಲಿ ಯವರಾದ ಸಿದ್ದಲಿಂಗಪ್ಪಕಾಶಪ್ಪಕೇಶಗೊಂಡ ಅವರ ಪ್ರಕಾರ ಕನ್ನಡದ ವಿದ್ಯಾರ್ಥಿಗಳು ಪರಿಶ್ರಮಿಗಳು, ನಿಷ್ಠೆಯುಳ್ಳವರು, ಪ್ರಾಮಾಣಿಕರು. ಆದ್ದರಿಂದಲೇ ಶಾಲೆಯಲ್ಲಿ ನಡೆಯುವ ಹಾಡುಗಾರಿಕೆ, ಗಿಟಾರ್, ತಬಲ, ನೃತ್ಯ ಮೊದಲಾದ ತರಗತಿಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ನೀಡುತ್ತಾರಂತೆ. ಹಲವಾರು ವರ್ಷಗಳಿಂದ ಈ ಶಾಲೆಯ ಮಕ್ಕಳು ಸ್ಕಾಲರ್‌ಶಿಪ್ ಪರೀಕ್ಷೆಗಳಿಗೆ ಕುಳಿತು ಪ್ರತಿವರ್ಷ 4ರಷ್ಟು ವಿದ್ಯಾರ್ಥಿಗಳು ಮೆರಿಟ್ ಲಿಸ್ಟ್‌ನಲ್ಲಿ ಬರುತ್ತಾರೆ ಹಾಗೂ ನೂರು ಪ್ರತಿಶತ ಫಲಿತಾಂಶ ತರುತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಕನ್ನಡ ಮನಪಾ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ, ‘‘ಬೇರೆ ಖಾಸಗಿ ಶಾಲೆಗಳಲ್ಲಿ ಹಾಗೂ ಮನಪಾದ ಆಂಗ್ಲ ಮಾಧ್ಯಮಗಳಲ್ಲಿ ಇರುವಂತೆ ನಮ್ಮಲ್ಲಿ ಅಂಗನವಾಡಿ (ಎಲ್‌ಕೆಜಿ, ಯುಕೆಜಿ)ಯ ವ್ಯವಸ್ಥೆ ಇಲ್ಲದಿರುವುದು ಇಂದು ಹೆಚ್ಚಿನ ಮಕ್ಕಳು ಅತ್ತ ಸರಿಯುತ್ತಿರುವುದಕ್ಕೆ ಮುಖ್ಯ ಕಾರಣ, ನಮ್ಮ ಶಾಲೆಗೆ ಸೇರಬೇಕಾದರೆ 6 ವರ್ಷ ಆಗಬೇಕು. ಅಲ್ಲದೆ ಮಕ್ಕಳ ಪಾಲಕರು ಈಗ ಆಂಗ್ಲ ಮಾಧ್ಯಮದ ಮೋಹಕ್ಕೆ ಬಲಿಯಾಗಿರುವುದು ಇನ್ನೊಂದು ಬಹುಮುಖ್ಯ ಕಾರಣ’’ ಎಂದು ಅವರು ವಿವರಿಸುತ್ತಾರೆ.

ಶ್ರೀಮಂತ್ ಶಿವರಾಯ್ ಕಟ್ಟೀಮನಿ ಎನ್ನುವ ಶಿಕ್ಷಕರು ‘‘ಇಂದು ಮನಪಾ ಶಾಲಾ ಮಕ್ಕಳಿಗೆ ಯೂನಿಫಾರಂ, ಟಿಫಿನ್ ಬಾಕ್ಸ್ ಇತ್ಯಾದಿ ಓರ್ವ ವಿದ್ಯಾರ್ಥಿಗೆ ಬೇಕಾದ ಒಟ್ಟು ಇಪ್ಪತ್ತೇಳು ಅಗತ್ಯ ಸಾಮಗ್ರಿಗಳನ್ನು ಪ್ರತಿ ವಿದ್ಯಾರ್ಥಿಗಳಿಗೆ ಮನಪಾ ಉಚಿತವಾಗಿ ನೀಡುತ್ತಿದೆ’’ ಎಂದು ಮನಪಾ ಶಾಲಾ ವಿದ್ಯಾರ್ಥಿಗಳಿಗೆ ಸಿಗುವ ಸವಲತ್ತಿನ ಬಗ್ಗೆ ವಿವರಿಸುತ್ತಾರೆ. ಅಲ್ಲದೆ ಶುಚಿ-ರುಚಿಯಾದ ಮಧ್ಯಾಹ್ನದ ಊಟದ ವ್ಯವಸ್ಥೆಯೂ ಇದೆ ಎನ್ನುತ್ತಾರೆ ಈ ಶಿಕ್ಷಕರು. ‘‘ಇಲ್ಲಿ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಪಠ್ಯ ಇದ್ದರೆ ಕರ್ನಾಟಕದಲ್ಲಿ ‘ಸವಿಗನ್ನಡ’, ‘ಸಿರಿಗನ್ನಡ’ ಎಂಬ ಪಠ್ಯಗಳಿವೆ. ಇಲ್ಲಿನ ಪಠ್ಯಗಳಲ್ಲಿ ಬಹಳಷ್ಟು ವಿಷಯಗಳು ಕರ್ನಾಟಕ ಪಠ್ಯಗಳಿಗಿಂತ ಮೊದಲು ಬರುತ್ತಿವೆ. ಉದಾಹರಣೆಗೆ ರಾಜಕುಮಾರ್ ಬಗ್ಗೆ ಮೊದಲು ಪಠ್ಯದಲ್ಲಿ ಅಳವಡಿಸಿದವರು ನಮ್ಮ ಪಠ್ಯಪುಸ್ತಕ ಮಂಡಳಿ’’ ಎಂದು ಹೆಮ್ಮೆಪಡುತ್ತಾರೆ ಇವರು. ಇಲ್ಲಿನ ಪಠ್ಯಪುಸ್ತಕ ಮಂಡಳಿಯಲ್ಲಿ ಕೃ. ಶಿ. ಹೆಗಡೆ, ಜಿ. ಡಿ. ಜೋಶಿ, ಡಾ. ಸುನೀತಾ ಎಂ. ಶೆಟ್ಟಿ ಮೊದಲಾದ ಅನುಭವಿ ಹಿರಿಯರು ಇದ್ದುದನ್ನು ನಾವು ಗಮನಿಸಬಹುದು. ಇಲ್ಲಿನ ಮನಪಾದ ಹೆಚ್ಚಿನ ಶಿಕ್ಷಕರು ಅಂಬರ್ ನಾಥ್ ಪಶ್ಚಿಮದಲ್ಲಿ ಬೀಡು ಬಿಟ್ಟಿರುವುದು ಗಮನಾರ್ಹ.

ಎಂಭತ್ತರಿಂದ ತೊಂಭತ್ತು ಶಿಕ್ಷಕರು ಅಲ್ಲಿ ಮನೆ ಮಾಡಿಕೊಂಡಿದ್ದಾರೆ. ಅಲ್ಲಿಯೇ ಅಂಬರ್‌ನಾಥ್ ಶಿಕ್ಷಕರ ಬಳಗವನ್ನು ಕಟ್ಟಿಕೊಂಡಿರುವ ಈ ಶಿಕ್ಷಕರು ಪರಸ್ಪರರ ಕಷ್ಟ ಸುಖಗಳಿಗೆ ಸದಾ ಸ್ಪಂದಿಸುತ್ತಿದ್ದಾರೆ. ಹೀಗೆ ಒಟ್ಟು ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿಯುವಲ್ಲಿ ಇಲ್ಲಿನ ಮನಪಾ ಶಾಲೆಗಳ ಪಾತ್ರ ಬಹುದೊಡ್ಡದು. ಈಗ ಕಂಪ್ಯೂಟರ್ ಶಿಕ್ಷಣ ಸಹಿತ ಆಧುನಿಕ ವ್ಯವಸ್ಥೆಯನ್ನು ಹೊಂದಿರುವ ಈ ಮನಪಾ ಶಾಲೆಗಳಿಗೆ ಸರಕಾರದ ಕೃಪಾದೃಷ್ಟಿಯ ಅವಶ್ಯಕತೆ ಇದೆ. ಇಲ್ಲಿ ಹೆಚ್ಚಿನ ಕಡೆ ಇನ್ನೂ ಏಕ ವ್ಯಕ್ತಿ ಅಥವಾ ಇಬ್ಬರು ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಶಿಕ್ಷಕರ ನೇಮಕಾತಿಯ ಅಗತ್ಯವಿದೆ. ಕರ್ನಾಟಕ ಸರಕಾರ ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರಕಾರದ ಅಧಿಕಾರಿ, ಮಂತ್ರಿಗಳ ಜತೆ ಚರ್ಚಿಸಿ, ಇಲ್ಲಿನ ಕನ್ನಡಿಗರನ್ನು ಅಲ್ಪಸಂಖ್�

Writer - ದಯಾನಂದ ಸಾಲ್ಯಾನ್

contributor

Editor - ದಯಾನಂದ ಸಾಲ್ಯಾನ್

contributor

Similar News