ಗೋಗ್ರಾ ಪಾಯಿಂಟ್‌ನಿಂದ ಸೇನಾ ವಾಪಸಾತಿ ಪ್ರಕ್ರಿಯೆ ಪೂರ್ಣಗೊಳಿಸಿದ ಭಾರತ, ಚೀನಾ

Update: 2021-08-06 17:29 GMT

ಹೊಸದಿಲ್ಲಿ,ಆ.6: ಸುಮಾರು 15 ತಿಂಗಳುಗಳ ಮುಖಾಮುಖಿಯ ಬಳಿಕ ಪೂರ್ವ ಲಡಾಖ್‌ನ ಗೋಗ್ರಾ ಘರ್ಷಣಾ ತಾಣದಿಂದ ತಮ್ಮ ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಯನ್ನು ಭಾರತ ಮತ್ತು ಚೀನಿ ಸೇನೆಗಳು ಪೂರ್ಣಗೊಳಿಸಿವೆ ಮತ್ತು ಸ್ಥಳದಲ್ಲಿದ್ದ ಪೂರ್ವಸ್ಥಿತಿಯನ್ನು ಮರುಸ್ಥಾಪಿಸಲಾಗಿದೆ ಎಂದು ಭಾರತೀಯ ಸೇನೆಯು ಶುಕ್ರವಾರ ತಿಳಿಸಿದೆ. ಪಡೆಗಳನ್ನು ವಾಪಸ್ ಕರೆಸಿಕೊಳ್ಳುವ ಕಾರ್ಯ ಆ.4 ಮತ್ತು 5ರಂದು ನಡೆದಿದ್ದು,ಉಭಯ ಕಡೆಗಳ ಪಡೆಗಳು ಈಗ ತಮ್ಮ ಶಾಶ್ವತ ನೆಲೆಗಳಲ್ಲಿವೆ ಎಂದೂ ಅದು ಹೇಳಿದೆ.

ಗೋಗ್ರಾ ಪಾಯಿಂಟ್ ಅನ್ನು ಪೆಟ್ರೋಲಿಂಗ್ ಪಾಯಿಂಟ್-17ಎ ಎಂದೂ ಕರೆಯಲಾಗುತ್ತದೆ.

ಉಭಯ ಪಡೆಗಳು ಪ್ರದೇಶದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ರಚನೆಗಳು ಮತ್ತು ಇತರ ಸಂಬಂಧಿತ ಮೂಲಸೌಕರ್ಯಗಳನ್ನು ತೆರವುಗೊಳಿಸಲಾಗಿದೆ ಮತ್ತು ಇದನ್ನು ಉಭಯ ಸೇನೆಗಳು ಪರಸ್ಪರ ಪರಿಶೀಲಿಸಿವೆ. ಸೇನೆಗಳನ್ನು ವಾಪಸ್ ಕರೆಸಿಕೊಳ್ಳುವ ಒಪ್ಪಂದವು ಗೋಗ್ರಾದಲ್ಲಿನ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯ ಮೇಲೆ ಕಟ್ಟುನಿಟ್ಟಿನ ನಿಗಾ ಮತ್ತು ಉಭಯ ಪಡೆಗಳನ್ನು ಅದನ್ನು ಗೌರವಿಸುವಂತೆ ಹಾಗೂ ಯಥಾಸ್ಥಿತಿಯಲ್ಲಿ ಯಾವುದೇ ಏಕಪಕ್ಷೀಯ ಬದಲಾವಣೆಗಳು ಆಗದಂತೆ ನೋಡಿಕೊಳ್ಳಲಿದೆ. ಇದರೊಂದಿಗೆ ಇನ್ನೊಂದು ಸೂಕ್ಷ್ಮ ಪ್ರದೇಶದಲ್ಲಿಯ ಬಿಕ್ಕಟ್ಟನ್ನು ಬಗೆಹರಿಸಲಾಗಿದೆ. 

ಮಾತುಕತೆಗಳನ್ನುಮುಂದುವರಿಸಲು ಮತ್ತು ಪಶ್ಚಿಮ ವಿಭಾಗ(ಪೂರ್ವ ಲಡಾಖ್)ದಲ್ಲಿ ಎಲ್‌ಎಸಿಯಲ್ಲಿನ ಉಳಿದಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉಭಯ ಸೇನೆಗಳು ಬದ್ಧತೆಯನ್ನು ವ್ಯಕ್ತಪಡಿಸಿವೆ ಎಂದು ಹೇಳಿಕೆಯು ತಿಳಿಸಿದೆ. ಭಾರತೀಯ ಸೇನೆಯು ಐಟಿಬಿಪಿಯೊಂದಿಗೆ ದೇಶದ ಸಾರ್ವಭೌಮತೆಯನ್ನು ರಕ್ಷಿಸಲು ಹಾಗೂ ಎಲ್‌ಎಸಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳಲು ಬದ್ಧವಾಗಿದೆ ಎಂದು ತಿಳಿಸಿರುವ ಹೇಳಿಕೆಯು,ಉಭಯ ಪಕ್ಷಗಳು ಗೋಗ್ರಾದಲ್ಲಿ ಮುಂಚೂಣಿ ನಿಯೋಜನೆಗಳನ್ನು ಹಂತಹಂತವಾಗಿ ಸಂಘಟಿತ ಮತ್ತು ದೃಢೀಕೃತ ರೀತಿಯಲ್ಲಿ ಅಂತ್ಯಗೊಳಿಸಿವೆ ಎಂದು ಹೇಳಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News