ಕುಂಭ ಮೇಳ ಸಂದರ್ಭ ಕೋವಿಡ್ ಪರೀಕ್ಷೆ ಹಗರಣ; ಲ್ಯಾಬ್‍ಗಳ ಮೇಲೆ ಇಡಿ ದಾಳಿ

Update: 2021-08-07 06:37 GMT

ಹರಿದ್ವಾರ್: ಉತ್ತರಾಖಂಡದ ಹರಿದ್ವಾರ್ ಜಿಲ್ಲೆಯಲ್ಲಿ ಎಪ್ರಿಲ್ ತಿಂಗಳಲ್ಲಿ ಕುಂಭ ಮೇಳ ನಡೆದ ಸಂದರ್ಭ ಕೋವಿಡ್-19 ಪರೀಕ್ಷೆಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿವೆಯೆನ್ನಲಾದ ಲ್ಯಾಬ್‍ಗಳ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ ಶುಕ್ರವಾರ ದಾಳಿ ನಡೆಸಿದೆ. ಕೆಲ ಲ್ಯಾಬ್‍ಗಳ ವಿರುದ್ಧ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದೆಯ್ಲಿದೆ  ಅವುಗಳು ಆರ್ಥಿಕ ಲಾಭಕ್ಕಾಗಿ ಬೋಗಸ್ ಬಿಲ್‍ಗಳನ್ನು ಸೃಷ್ಟಿಸಿದ್ದವು ಎಂದು ಹೇಳಿದೆ.

ಡೆಹ್ರಾಡೂನ್‍ನ ನೋವಸ್ ಪಾಥ್ ಲ್ಯಾಬ್ಸ್, ಹರಿದ್ವಾರದ ಡಿಎನ್‍ಎ ಲ್ಯಾಬ್ಸ್, ನೊಯ್ಡಾದ ಮ್ಯಾಕ್ಸ್ ಕಾರ್ಪೊರೇಟ್ ಸರ್ವಿಸಸ್, ಡಾ ಲಾಲ್ ಚಂದಾನಿ ಲ್ಯಾಬ್ಸ್ ಹಾಗೂ ನಲ್ವಾ ಲ್ಯಾಬ್ಸ್ ಮೇಲೆ ದಾಳಿ ನಡೆಸಲಾಗಿದೆ ಎಂದು ನಿರ್ದೇಶನಾಲಯ ಮಾಹಿತಿ ನೀಡಿದೆ.

ಕುಂಭ ಮೇಳ ಸಂದರ್ಭ ಸಾವಿರಾರು ಭಕ್ತರು ಆಗಮಿಸಿದ್ದರಿಂದ ಅವರ ಕೋವಿಡ್ ಪರೀಕ್ಷೆ ನಡೆಸಲು ಉತ್ತರಾಖಂಡ ಸರಕಾರ ಮೇಲೆ ತಿಳಿಸಿದ ಐದು ಲ್ಯಾಬ್‍ಗಳಿಗೆ ಗುತ್ತಿಗೆ ನೀಡಿತ್ತು. ಆದರೆ ಈ ಲ್ಯಾಬ್‍ಗಳು ಹೆಚ್ಚು ಪರೀಕ್ಷೆ ನಡೆಸದೆ  ಬಿಲ್ ತಯಾರಿಸಲು ಪರೀಕ್ಷೆಗಳನ್ನು ನಡೆಸಲಾಗಿದೆ ಎಂಬ ಕುರಿತು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದವು ಎನ್ನಲಾಗಿದೆ.

ಈಗಾಗಲೇ ಉತ್ತರಾಖಂಡ ಸರಕಾರ ಈ ಲ್ಯಾಬ್‍ಗಳಿಗೆ ರೂ 3.4 ಕೋಟಿ ಪಾವತಿಸಿದೆ. ಈ ಲ್ಯಾಬ್‍ಗಳು ಪರೀಕ್ಷೆ ನಡೆಸದೇ ಇದ್ದ ಕಾರಣ ಶೇ5.3ರಷ್ಟಿದ್ದ ಪಾಸಿಟಿವಿಟಿ  ಪ್ರಮಾಣವನ್ನು ಶೇ 0.18ರಷ್ಟೆಂದು ತೋರಿಸಲಾಗಿತ್ತು.

ಈ ಲ್ಯಾಬ್‍ಗಳು ಒಂದೇ ಮೊಬೈಲ್ ಸಂಖ್ಯೆ ಅಥವಾ ನಕಲಿ ಮೊಬೈಲ್ ಸಂಖ್ಯೆ  ಅಥವಾ ಒಂದೇ ವಿಳಾಸ ಬಳಸಿ ಅಥವಾ ಅನೇಕ ಜನರಿಗೆ ಒಂದೇ ಸ್ಪೆಸಿಮನ್ ರೆಫರೆಲ್ ಫಾರ್ಮ್ ಗಳನ್ನು ಬಳಸಿ ಬಹಳಷ್ಟು ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ತೋರಿಸಿತ್ತೆನ್ನಲಾಗಿದೆ. ಕುಂಭ ಮೇಳಕ್ಕೆ ಆಗಮಿಸದೇ ಇರುವವರ ಹೆಸರಿನಲ್ಲೂ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ತೋರಿಸಲಾಗಿತ್ತು.

ಸುಮಾರು ಒಂದು ಲಕ್ಷ ನಕಲಿ ರ್ಯಾಪಿಡ್ ಆಂಟಿಜನ್ ಪರೀಕ್ಷೆಗಳನ್ನು ನಡೆಸಿವೆ ಎಂದು ಹೇಳಲಾದ ಲಾಲ್‍ಚಂದಾನಿ, ನಲ್ವಾ ಲ್ಯಾಬ್‍ಗಳು ಹಾಗೂ ಮ್ಯಾಕ್ಸ್ ಕಾರ್ಪೊರೇಟ್ ಸರ್ವಿಸಸ್ ವಿರುದ್ಧ ಉತ್ತರಾಖಂಡ ಪೊಲೀಸರು ಜೂನ್ ತಿಂಗಳಲ್ಲಿ ಎಫ್‍ಐಆರ್ ದಾಖಲಿಸಿದ್ದರು. ನಂತರ ಈ ಲ್ಯಾಬ್‍ಗಳು ಎಫ್‍ಐಆರ್ ರದ್ದುಗೊಳಿಸಬೇಕೆಂದು ಕೋರಿ ಉತ್ತರಾಖಂಡ ಹೈಕೋರ್ಟಿನ ಕದ ತಟ್ಟಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News