ಗೊಂದಲಗಳ 'ಕಲಿವೀರ'...!

Update: 2021-08-07 19:30 GMT

ಬಾಹುಬಲಿಯಂತಹ ಸಿನೆಮಾ ನೋಡಿ ಸ್ಫೂರ್ತಿ ಪಡೆಯುವುದರಲ್ಲಿ ತಪ್ಪಿಲ್ಲ. ಆದರೆ ಅಂತಹದ್ದೊಂದು ಚಿತ್ರಕ್ಕೆ ಮಾಡಿರಬಹುದಾದ ತಯಾರಿಯ ಒಂದಂಶವೂ ಇರದೆ ದೊಡ್ಡ ಪ್ರಾಜೆಕ್ಟ್‌ಗೆ ಕೈ ಹಾಕಿದರೆ ಏನಾಗುತ್ತದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ‘ಕಲಿವೀರ’ ಸಿನೆಮಾ!

ಚಿತ್ರದ ಆರಂಭದಲ್ಲಿ ನಾಯಕ ಕಲಿ ಪಾತ್ರಧಾರಿ ನಗರದಲ್ಲಿರುತ್ತಾನೆ. ಆತನ ವೇಷಭೂಷಣ, ವರ್ತನೆ ಕಂಡರೆ ಹಳ್ಳಿ ಗಮಾರನಂತೆ ಕಾಣುತ್ತಾನೆ. ಕಲಿಗೆ ನಗರದ ಕಳ್ಳನೋರ್ವ ಸ್ನೇಹಿತನಾಗುತ್ತಾನೆ. ಹಾಗೆ ಜೈಲು ಸೇರುವ ಆತನನ್ನು ಬಿಡಿಸಲು ಹುಡುಗಿಯೋರ್ವಳು ಪೊಲೀಸ್ ಸ್ಟೇಷನ್ ಒಳಗೆ ಕಾಲಿಡುತ್ತಾಳೆ. ಇಷ್ಟರಲ್ಲಾಗಲೇ ನಿಮಗೆ ನಾನು ‘ಜೋಗಿ’ ಸಿನೆಮಾ ಕತೆ ಹೇಳುತ್ತಿರುವ ಹಾಗೆ ಅನಿಸಿರಬೇಕಲ್ಲ?! ಮುಂದೆ ಒಂದಷ್ಟು ತಿರುವುಗಳಿವೆ. ಆತ ನಗರಕ್ಕೆ ಬಂದಿದ್ದೇಕೆ ಎನ್ನುವ ವಿಚಾರದಲ್ಲಿ ಹಿಂದಿನ ಕತೆ ಹಳ್ಳಿಯೊಂದರಲ್ಲಿ ತೆರೆದುಕೊಳ್ಳುತ್ತದೆ. ಹಳ್ಳಿಯಲ್ಲಿ ನಡೆಯುವ ಕತೆ ಏನು ಎನ್ನುವ ಬಗ್ಗೆ ಇಲ್ಲಿ ಹೇಳುವುದಿಲ್ಲ. ಕುತೂಹಲಕ್ಕಾಗಿಯಾದರೂ ಒಮ್ಮೆ ಸಿನೆಮಾ ನೋಡಿ ಎಂದರೆ ಅದೂ ತಪ್ಪಾಗಬಹುದು. ಯಾಕೆಂದರೆ ಪೂರ್ತಿ ಚಿತ್ರಕತೆಯಲ್ಲಿ ಅಧ್ಯಯನದ ಕೊರತೆ ಎದ್ದು ಕಾಣುತ್ತದೆ. ಕಾಲ್ಪನಿಕ ಕತೆಯಾದರೂ ಅದಕ್ಕೊಂದು ಆಸ್ವಾದನೆಯ ಗುಣ ಇರಬೇಕಾಗುತ್ತದೆ. ಇಲ್ಲಂತೂ ಕಲ್ಪನೆಯ ಜೊತೆಗೆ ಇತಿಹಾಸವನ್ನು ತಳಕು ಹಾಕುವ ಪ್ರಯತ್ನವೂ ನಡೆದಿದೆ. ಘಜನಿ, ಘೋರಿ ಹೆಸರನ್ನು ಎಳೆದು ತಂದು ಪ್ರೇಕ್ಷಕರ ಧಾರ್ಮಿಕ ಭಾವನೆ ಕೆರಳಿಸುವ ಸಣ್ಣ ಪ್ರಯತ್ನ ಬಿಟ್ಟರೆ ಚಿತ್ರ ಸಾಧಿಸುವುದೇನೂ ಇಲ್ಲ.

ಕಲಿವೀರನಾಗಿ ನಟಿಸಿರುವ ಏಕಲವ್ಯ ಅವರಲ್ಲಿ ನಟನೆಗಿಂತ ಕಸರತ್ತು ಹೆಚ್ಚು. ನಿರ್ದೇಶಕ ಅವಿಯವರು ಅದನ್ನೇ ಹೈಲೈಟ್ ಮಾಡಿ ಸುಲಭದ ದಾರಿ ನೋಡಿಕೊಂಡಿದ್ದಾರೆ. ಕಲಿಯ ಮುಖಭಾವಕ್ಕಿಂತ ದೇಹಭಾಷೆ ಮನದಲ್ಲಿ ಉಳಿಯುತ್ತದೆ. ಚಿತ್ರದಲ್ಲಿ ಇಬ್ಬರು ನಾಯಕಿಯರು. ಕಲಿಯ ಪ್ರೇಯಸಿ ಬುಡಕಟ್ಟಿನ ಯುವತಿಯಾಗಿ ಕಾಣಿಸಿದ್ದಾರೆ ಚಿರಶ್ರೀ ಅಂಚನ್. ಕಲಾತ್ಮಕ ಪಾತ್ರವೇನೋ ಎನ್ನುವಂತೆ ಕಳೆಗೆಡಿಸಿ ಪಾತ್ರದ ಕುಲಗೆಡಿಸಲಾಗಿದೆ. ಕೇಸರಿ ಎನ್ನುವ ಆ ಪಾತ್ರವನ್ನು ಗುಡ್ಡಬೆಟ್ಟದಲ್ಲಿ ಓಡಾಡಿಸಿದ್ದು ಬಿಟ್ಟರೆ ನಟನೆಗಾಗಿ ಒಳ್ಳೆಯ ಅವಕಾಶ ನೀಡಲಾಗಿಲ್ಲ. ನಗರದ ಹುಡುಗಿಯ ಪಾತ್ರ ನಿರ್ವಹಿಸಿರುವ ಪಾವನಾ ಗೌಡ ಆ ಮಟ್ಟಿಗೆ ಅದೃಷ್ಟವಂತೆ. ಚಿತ್ರದಲ್ಲಿನ ಪಾತ್ರಗಳಲ್ಲೇ ಒಂದಷ್ಟು ಶೇಡ್ಸ್ ಹೊಂದಿರುವ ಗಟ್ಟಿ ಕ್ಯಾರೆಕ್ಟರ್ ಅವರದು. ಹಳ್ಳಿಯ ಬುಡಕಟ್ಟು ನಿವಾಸಿಗಳ ‘ಒಡೆಯ’ನಾಗಿ ಟಿ.ಎಸ್. ನಾಗಾಭರಣ ನಟಿಸಿದ್ದಾರೆ. ಮಾತಿಗೊಮ್ಮೆ ಕಣ್ಣರಳಿಸುವುದು ಬಿಟ್ಟರೆ ಅವರಿಗೂ ಹೆಚ್ಚು ಕೆಲಸಗಳಿಲ್ಲ. ಅದರಲ್ಲೂ ಬುಡಕಟ್ಟು ಜನರ ಒಡೆಯ ಸಂಸ್ಕೃತ ಶ್ಲೋಕ ಹೇಳಿ ಪೂಜಿಸುವುದು ನಿರ್ದೇಶಕರ ಕಲ್ಪನೆಯ ಕಿರೀಟಕ್ಕೊಂದು ಗರಿ ಎಂದೇ ಹೇಳಬಹುದು.

ಆರಂಭದಿಂದ ಪೊಲೀಸ್ ಅಧಿಕಾರಿಯಾಗಿ ಕಾಣಿಸಿರುವ ನಟ ಮುನಿಯವರು ಕ್ಲೈಮ್ಯಾಕ್ಸ್ ನಲ್ಲಿ ‘‘ನನ್ನ ಪಾತ್ರ ಏನು ಕಾಮಿಡಿಯನ್ನಾ..?’’ ಎಂದು ಹೇಳುವ ಸಂಭಾಷಣೆ ನಿಜಕ್ಕೂ ಸನ್ನಿವೇಶಕ್ಕೆ ಹೊಂದಿಕೊಳ್ಳುವಂತಿದೆ! ಆ ಸಂಭಾಷಣೆ ಮತ್ತೋರ್ವ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ ನೀನಾಸಂ ಅಶ್ವಥ್ ಅವರಿಗೂ ಸಲ್ಲುತ್ತದೆ. ಅವರ ಜೋಡಿಯಾಗಿ ನಟಿಸಿರುವ ಅನಿತಾ ಭಟ್ ಶಾರ್ಪ್ ಶೂಟರ್ ಪಾತ್ರಕ್ಕೆ ಈಗಾಗಲೇ ಸಾಕಷ್ಟು ಹೇಟರ್ಸ್ ಸೃಷ್ಟಿಯಾಗಿರಬಹುದು. ಇರುವುದರಲ್ಲಿ ಡ್ಯಾನಿಯ ರೌಡಿ ಪಾತ್ರ ಮತ್ತು ಮುಹಮ್ಮದ್ ಗಡಾಫಿ ಎನ್ನುವ ಉಗ್ರನಾಗಿ ನಟಿಸಿದ ಸೂರ್ಯನಾರಾಯಣ ರಾವ್ ಅವರ ನೋಟಗಳು ಚಿತ್ರ ಮುಗಿದ ಬಳಿಕವೂ ಕಾಡುತ್ತವೆ. ವಿ ಮನೋಹರ್ ಸಂಗೀತದಲ್ಲಿನ ಎರಡು ಹಾಡುಗಳು ಚಿತ್ರದ ಆಕರ್ಷಕ ಅಂಶವಾಗಿವೆ.
ಕಲಿವೀರ ಚಿತ್ರದಲ್ಲೊಂದು ಆನೆಯಿದೆ. ಗಜಪಡೆಯಂತೆ ಕಲಾವಿದರೂ ಇದ್ದಾರೆ. ಆದರೆ ಒಂದು ಅಚ್ಚುಕಟ್ಟಿನ ಮೆರವಣಿಗೆ ಕಾಣದಿರುವಲ್ಲಿ ಮಾವುತನ ವೈಫಲ್ಯ ಎದ್ದು ಕಾಣುತ್ತದೆ.

ತಾರಾಗಣ: ಏಕಲವ್ಯ, ಪಾವನಾ ಗೌಡ, ಚಿರಶ್ರೀ ಅಂಚನ್
ನಿರ್ದೇಶನ: ಅವಿ
ನಿರ್ಮಾಣ: ರಾಜು ಪೂಜಾರ್, ಶ್ರೀನಿವಾಸ್

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News