1979ರಿಂದ ಅಸ್ಸಾಂ ಗಡಿ ಘರ್ಷಣೆಯಲ್ಲಿ 157 ಮಂದಿ ಸಾವು: ಮಾನವ ಹಕ್ಕು ಸಂಘಟನೆ

Update: 2021-08-10 18:14 GMT

ಗುವಾಹತಿ, ಆ. 10: 1979ರಿಂದ ಈ ವರ್ಷ ಜುಲೈ 26ರ ವರೆಗೆ ಅರಣಾಚಲಪ್ರದೇಶ, ಮೇಘಾಲಯ, ಮಿಝೋರಾಂ ಹಾಗೂ ನಾಗಾಲ್ಯಾಂಡ್ ನೊಂದಿಗಿನ ಗಡಿ ಘರ್ಷಣೆಯಲ್ಲಿ ಅಸ್ಸಾಂನಲ್ಲಿ ಕನಿಷ್ಠ 157 ಮಂದಿ ಸಾವನ್ನಪ್ಪಿದ್ದಾರೆ ಹಾಗೂ 65,729 ಜನರು ಸ್ಥಳಾಂತರಗೊಂಡಿದ್ದಾರೆ ಎಂದು ರೈಟ್ಸ್ ಬಾಡಿ ರೈಟ್ಸ್ ಆ್ಯಂಡ್ ರಿಸ್ಕ್ಸ್ ಅನಾಲಿಸಿಸ್ ಗ್ರೂಪ್ (ಆರ್ಆರ್ಎಜಿ) ಮಂಗಳವಾರ ಹೇಳಿದೆ. 

ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಈ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಆರ್ಆರ್ಎಜಿ ನಿರ್ದೇಶಕ ಸುಹಾಸ್ ಚಕ್ಮಾ, ಏರುತ್ತಿರುವ ಸಾವಿನ ಸಂಖ್ಯೆ ಶಾಶ್ವತ ಶಾಂತಿ ಸ್ಥಾಪನೆಯ ಕ್ರಮಗಳಿಗೆ ಅಡ್ಡಿ ಉಂಟು ಮಾಡಿದೆ ಎಂದು ಹೇಳಿದ್ದಾರೆ. ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿ 136, ಅಸ್ಸಾಂ-ಅರುಣಾಚಲ ಗಡಿಯಲ್ಲಿ 10, ಅಸ್ಸಾಂ-ಮಿರೆರಾ ಗಡಿಯಲ್ಲಿ 7, ಅಸ್ಸಾಂ-ಮೇಘಾಲಯದಲ್ಲಿ ಗಡಿಯಲ್ಲಿ 4 ಸಾವು ವರದಿಯಾಗಿದೆ ಎಂದು ಅವರು ಹೇಳಿದ್ದಾರೆ. 

ಈ ಘರ್ಷಣೆಯಲ್ಲಿ ಒಟ್ಟು 361 ಮಂದಿ ಗಾಯಗೊಂಡಿದ್ದಾರೆ. ಅಸ್ಸಾಂ-ನಾಗಾಲ್ಯಾಂಡ್ ಗಡಿಯಲ್ಲಿ 184, ಅಸ್ಸಾಂ-ಮಿಝೋರಾಂ ಗಡಿಯಲ್ಲಿ 143, ಅಸ್ಸಾಂ-ಮೇಘಾಲಯ ಗಡಿಯಲ್ಲಿ 18 ಹಾಗೂ ಅಸ್ಸಾಂ-ಅರುಣಾಚಲ ಗಡಿಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. 2018ರಲ್ಲಿ ಅಸ್ಸಾಂ ಹಾಗೂ ಮಿಝೋರಾಂನ ಗಡಿ ಘರ್ಷಣೆ ತೀವ್ರಗೊಂಡಿತ್ತು. ಈ ಸಂದರ್ಭ 143 ಮಂದಿ ಗಾಯಗೊಂಡಿರುವುದು ಘರ್ಷಣೆಯ ತೀವ್ರತೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ. 

‘‘ರಾಜ್ಯಗಳು ಸಾಮಾನ್ಯವಾಗಿ ವಿವಾದಗಳನ್ನು ಬಗೆ ಹರಿಸಲು ಸುಪ್ರೀಂ ಕೋರ್ಟ್ ನ ಮೆಟ್ಟಿಲೇರುತ್ತವೆ. ಆದರೆ, ಗಡಿ ಗುರುತಿಸುವುದು ಕಾರ್ಯಾಕಾರಿ ಕಾರ್ಯ. ಆದುದರಿಂದ ಸುಪ್ರೀಂ ಕೋರ್ಟ್ ಸಾಮಾನ್ಯವಾಗಿ ಗಡಿ ಆಯೋಗವನ್ನು ರೂಪಿಸಲು ಶಿಫಾರಸು ಮಾಡುತ್ತದೆ. ಆದರೆ, ಆಯೋಗ ರಚನೆಯ ಶಿಫಾರಸನ್ನು ಯಾವುದೇ ರಾಜ್ಯ ನಿರಾಕರಿಸಿದರೆ, ಹೆಚ್ಚಿನ ಪ್ರಗತಿ ಸಾಧ್ಯವಿಲ್ಲ’’ ಚಕ್ಮಾ ಅವರು ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News