ಹಿಮಾಚಲಪ್ರದೇಶ ಭೂಕುಸಿತ: 11 ಮಂದಿ ಸಾವು, ಅವಶೇಷಗಳಡಿ 40ಕ್ಕೂ ಅಧಿಕ ಜನರು ಸಿಲುಕಿರುವ ಸಾಧ್ಯತೆ
ಶಿಮ್ಲಾ (ಹಿಮಾಚಲ ಪ್ರದೇಶ), ಆ. 11: ಹಿಮಾಚಲಪ್ರದೇಶದ ಕಿನ್ನೌರ್ನಲ್ಲಿ ಬಾರೀ ಭೂಕುಸಿತ ಸಂಭವಿಸಿದ್ದು, ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಹಾಗೂ 40ಕ್ಕೂ ಅಧಿಕ ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ.
ಕಿನ್ನಾರ್ ನ ರೆಖೋಂಗ್ಪಿಯೋ-ಶಿಮ್ಲಾ ಹೆದ್ದಾರಿಯಲ್ಲಿ ಮಧ್ಯಾಹ್ನ ಸುಮಾರು 12 ಗಂಟೆಗೆ ಈ ಭೂಕುಸಿತ ಸಂಭವಿಸಿದೆ. ಇದರಿಂದ 40 ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಹಿಮಾಚಲ ರಾಜ್ಯ ರಸ್ತೆ ಸಾರಿಗೆ ಬಸ್ ಸೇರಿದಂತೆ ಹಲವು ವಾಹನಗಳು ಅವಶೇಷಗಳಡಿ ಸಿಲುಕಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಬಸ್ಸು ಕಿನ್ನೌರ್ ನ ರಿಕಾಂಗ್ ಪಿಯೋದಿಂದ ಶಿಮ್ಲಾಕ್ಕೆ ತೆರಳುತ್ತಿತ್ತು. ಬಸ್ಸಿನಲ್ಲಿ 40 ಮಂದಿ ಪ್ರಯಾಣಿಕರಿದ್ದರು.
‘‘ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಅವಶೇಷಗಳ ಅಡಿ 50ರಿಂದ 60 ಮಂದಿ ಸಿಲುಕಿರುವ ಸಾಧ್ಯತೆ ಇದೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಬಸ್ ಚಾಲಕ, ನಿರ್ವಾಹಕ ಸೇರಿದಂತೆ 14 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
17, 19 ಹಾಗೂ 43ನೇ ಬೆಟಾಲಿಯನ್ನ ಐಟಿಬಿಪಿ ಸಿಬ್ಬಂದಿ ರಿಕಾಂಗ್ ಪಿಯೊ-ಶಿಮ್ಲಾ ಹೆದ್ದಾರಿ ತಲುಪಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಇದು ಭೂಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.