×
Ad

ರಾಹುಲ್‌ ಗಾಂಧಿ ಖಾತೆ ಬ್ಲಾಕ್:‌ ಟ್ವಿಟರ್‌ ಹೇಳಿದ್ದೇನು?

Update: 2021-08-11 18:26 IST

ಹೊಸದಿಲ್ಲಿ: ರಾಜಧಾನಿಯ ನಂಗಲ್ ಪ್ರದೇಶದಲ್ಲಿರುವ ರುದ್ರಭೂಮಿಯಲ್ಲಿ ಒಂಬತ್ತು ವರ್ಷದ ದಲಿತ ಬಾಲಕಿಯೊಬ್ಬಳ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಂತರ ಆಕೆಯ ಹೆತ್ತವರನ್ನು ಭೇಟಿಯಾಗಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಸಂತ್ರಸ್ತೆಯ ಹೆತ್ತವರ ಚಿತ್ರವನ್ನೊಳಗೊಂಡಂತೆ ಮಾಡಿದ ಪೋಸ್ಟ್ ಅನ್ನು ತೆಗೆದುಹಾಕಲಾಗಿದೆ ಎಂದು ಟ್ವಿಟ್ಟರ್ ಇಂದು ದಿಲ್ಲಿ ಹೈಕೋರ್ಟ್ ಗೆ ತಿಳಿಸಿದೆ.

ಈ ಚಿತ್ರ ಪೋಸ್ಟ್ ಮಾಡಿದ್ದ ರಾಹುಲ್ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದ ವಿಚಾರಣೆ ವೇಳೆ ಟ್ವಿಟ್ಟರ್ ಪರ ಹಿರಿಯ ವಕೀಲ ಸಾಜನ್ ಪೂವಯ್ಯ ಮೇಳಿನಂತೆ ಹೇಳಿದ್ದಾರೆ.

ಈ ಟ್ವೀಟ್ ಟ್ವಟ್ಟರ್ ನ ನೀತಿಗಳ ಉಲ್ಲಂಘನೆಯೂ ಆಗಿರುವುದರಿಂದ ಅದಾಗಲೇ ಅದನ್ನು ತೆಗೆದು ಹಾಕಲಾಗಿದೆ ಹಾಗೂ ರಾಹುಲ್ ಅವರ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.

ರಾಹುಲ್ ಅವರು ತಮ್ಮ ಟ್ವೀಟ್‍ನಲ್ಲಿ ಪೋಸ್ಟ್ ಮಾಡಿರುವ ಸಂತ್ರಸ್ತೆಯ ಹೆತ್ತವರ ಫೋಟೋ, ಬಾಲನ್ಯಾಯ ಕಾಯಿದೆಯ ಸೆಕ್ಷನ್ 74 ಹಾಗೂ ಪೋಕ್ಸೋ ಕಾಯಿದೆಯ ಸೆಕ್ಷನ್ 23(2) ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರಾಗಿರುವ ಸಾಮಾಜಿಕ ಹೋರಾಟಗಾರ ಮಕರಂದ್ ಸುರೇಶ್ ಮಾದ್ಲೇಕರ್  ಆರೋಪಿಸಿದ್ದರು.

ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ನಿಗದಿಪಡಿಸಲಾಗಿದ್ದು, ರಾಹುಲ್ ಗಾಂಧಿ, ದಿಲ್ಲಿ ಪೊಲೀಸರು ಹಾಗೂ ಇತರ ಪ್ರತಿವಾದಿಗಳು ತಮ್ಮ ಪ್ರತಿಕ್ರಿಯೆಗಳೊಂದಿಗೆ ಅಂದು ಸಿದ್ಧವಾಗಬೇಕು ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News