‘‘ಆಮ್ಲಜನಕದ ಕೊರತೆಯಿಂದ ಯಾರೂ ಸಾವನ್ನಪ್ಪಿಲ್ಲ’’: ಮಧ್ಯಪ್ರದೇಶ ಸರಕಾರದ ಹೇಳಿಕೆಗೆ ಹೈಕೋರ್ಟ್ ಅಚ್ಚರಿ

Update: 2021-08-11 18:32 GMT
ಸಾಂದರ್ಭಿಕ ಚಿತ್ರ

ಭೋಪಾಲ, ಆ. 11: ಕೋವಿಡ್ ಎರಡನೇ ಅಲೆಯ ಸಂದರ್ಭ ಆಮ್ಲಜನಕದ ಕೊರತೆಯಿಂದ ಯಾರೊಬ್ಬರೂ ಸಾವನ್ನಪ್ಪಿಲ್ಲ ಎಂಬ ಮಧ್ಯಪ್ರದೇಶ ಸರಕಾರದ ಪ್ರತಿಕ್ರಿಯೆ ಕುರಿತು ಅಚ್ಚರಿ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ಜಬಲ್ಪುರ ಪ್ರಾಥಮಿಕ ಪೀಠ, ಇದನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದೆ.

ಕೋವಿಡ್ ಎರಡನೇ ಅಲೆ ಸಂದರ್ಭ ಆಮ್ಲಜನಕದ ಕೊರತೆಯಿಂದ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ಪರಿಹಾರ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯ ಗುಚ್ಛದ ವಿಚಾರಣೆ ಸಂದರ್ಭ ಉಚ್ಚ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಆಮ್ಲಜನಕ ಕೊರತೆಯಿಂದ ಈ ವರ್ಷ 77 ಮಂದಿ ಸಾವನ್ನಪ್ಪಿರುವುದನ್ನು ಉಚ್ಚ ನ್ಯಾಯಾಲಯ ಪಟ್ಟಿ ಮಾಡಿತ್ತು. ಆದರೆ, ಅನಂತರ ರಾಜ್ಯ ಸರಕಾರ ಆಮ್ಲಜನಕದ ಕೊರತೆಯಿಂದ ಯಾರೊಬ್ಬರೂ ಸಾವನ್ನಪ್ಪಿಲ್ಲ ಎಂದು ಪ್ರತಿಪಾದಿಸಿ ನ್ಯಾಯಾಲಯಕ್ಕೆ ಅಫಿಡಾವಿಟ್ ಸಲ್ಲಿಸಿತ್ತು.
 
ಮುಖ್ಯ ನ್ಯಾಯಮೂರ್ತಿ ನೇತೃತ್ವದ ಹೈಕೋರ್ಟ್ ನ ವಿಭಾಗೀಯ ನ್ಯಾಯಪೀಠ, ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಶಿವರಾಜ್ ಸಿಂಗ್ ಚೌಹಾಣ್ ಸರಕಾರಕ್ಕೆ ಸೂಚಿಸಿತು. ಅಲ್ಲದೆ, ಸಾವು ಸಂಭವಿಸಿರುವುದನ್ನು ರಾಜ್ಯ ಸರಕಾರ ಯಾವಾಗ ನಿರಾಕರಿಸಿದೆ ಹಾಗೂ ಪರಿಹಾರ ಬೇಡಿಕೆಗಳ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ತಿಳಿಯಬಯಸುತ್ತದೆ ಎಂದು ನ್ಯಾಯಾಲಯ ಹೇಳಿತು.

ಪ್ರತಿಕ್ರಿಯೆ ಸಲ್ಲಿಸಲು ರಾಜ್ಯ ಸರಕಾರಕ್ಕೆ ಮೂರು ವಾರಗಳ ಕಾಲಾವಕಾಶ ನೀಡಿದ ನ್ಯಾಯಾಲಯ ವಿಚಾರಣೆಯನ್ನು ಸೆಪ್ಟಂಬರ್ 6ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News