ಉಜ್ವಲ ಯೋಜನೆಯ ಶೇ. 90 ಸಿಲಿಂಡರ್ ಉಪಯೋಗ ಶೂನ್ಯ: ಪ್ರಿಯಾಂಕಾ ಗಾಂಧಿ

Update: 2021-08-11 18:41 GMT

ಹೊಸದಿಲ್ಲಿ, ಆ. 11: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಕಳೆದ 7 ವರ್ಷಗಳಲ್ಲಿ ಎಲ್ಪಿಜಿ ಸಿಲಿಂಡರ್ನ ಬೆಲೆಯನ್ನು ದ್ವಿಗುಣಗೊಳಿಸಿದೆ. ಅಲ್ಲದೆ, ಸಬ್ಸಿಡಿ ಕಡಿತಗೊಳಿಸಿದೆ. ಇದರಿಂದ ಉಜ್ವಲ ಯೋಜನೆ ಅಡಿಯಲ್ಲಿ ನೀಡಲಾದ ಶೇ. 90 ಸಿಲಿಂಡರ್ ಗಳು ಉಪಯೋಗ ಶೂನ್ಯವಾಗಿವೆ. ಮಹಿಳೆಯರು ಕಟ್ಟಿಗೆಯಿಂದ ಅಡುಗೆ ಮಾಡುವ ಬಲವಂತಕ್ಕೆ ಒಳಗಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದ್ದಾರೆ.

ಅಡುಗೆ ಅನಿಲ ಸಿಲಿಂಡರ್ ನ ಅತ್ಯಧಿಕ ಬೆಲೆ ಕುರಿತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಉಜ್ವಲ ಯೋಜನೆ ಬಗ್ಗೆ ಕೇಂದ್ರ ಸರಕಾರ ಪ್ರಾಮಾಣಿಕವಾಗಿದ್ದರೆ, ಬಡವರಿಗೆ ಅಡುಗೆ ಅನಿಲಕ್ಕೆ ಸಬ್ಸಿಡಿ ನೀಡಬೇಕು ಹಾಗೂ ಬೆಲೆ ಇಳಿಕೆ ಮಾಡಬೇಕು ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಅಡುಗೆ ಅನಿಲ ಸಿಲಿಂಡರ್ ನ ಬೆಲೆ ಏರಿಕೆಯಿಂದ ಬಡವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಧ್ಯಮ ವರದಿಯೊಂದನ್ನು ಟ್ಯಾಗ್ ಮಾಡಿದ್ದಾರೆ.

ಉತ್ತರಪ್ರದೇಶದ ಮಹೋಬಾದಲ್ಲಿ ಕೆಲವು ಫಲಾನುಭವಿಗಳಿಗೆ ಉಚಿತ ಎಲ್ಪಿಜಿ ಸಂಪರ್ಕ ನೀಡುವ ಮೂಲಕ ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ)ಯ ಎರಡನೇ ಹಂತ ಉಜ್ವಲ 2.0 ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆನ್ಲೈನ್ ನಲ್ಲಿ ಲೋಕಾರ್ಪಣೆಗೊಳಿಸಿದ ಒಂದು ದಿನದ ಬಳಿಕ ಪ್ರಿಯಾಂಕಾ ಗಾಂಧಿ ವಾದ್ರ ಈ ವಾಗ್ದಾಳಿ ನಡೆಸಿದ್ದಾರೆ.

ಅಡುಗೆ ಅನಿಲದ ಸಿಲಿಂಡರ್ ಬೆಲೆ 888 ರೂಪಾಯಿಗೆ ಏರಿಕೆಯಾಗಿದೆ. ಈ ಸಂದರ್ಭ ಉಜ್ವಲ 2.0 ಲೋಕಾರ್ಪಣೆ ಕೇಂದ್ರ ಸರಕಾರದ ಟೊಳ್ಳು ಗಿಮಿಕ್ ಎಂದು ಕಾಂಗ್ರೆಸ್ ಮಂಗಳವಾರ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News