ಕೋವಿಡ್ ಲಸಿಕೆ ನಿರಾಕರಿಸಿದ ವಾಯುಪಡೆ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ: ಹೈಕೋರ್ಟ್‍ಗೆ ತಿಳಿಸಿದ ಕೇಂದ್ರ
ಹೊಸದಿಲ್ಲಿ: ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಲು ನಿರಾಕರಿಸಿದ ಓರ್ವ ಉದ್ಯೋಗಿಯನ್ನು ಭಾರತೀಯ ವಾಯುಪಡೆ ಕೆಲಸದಿಂದ ವಜಾಗೊಳಿಸಿದೆ ಎಂದು ಕೇಂದ್ರ ಸರಕಾರ ಗುಜರಾತ್ ಹೈಕೋರ್ಟ್‍ಗೆ ಬುಧವಾರ ತಿಳಿಸಿದೆ.
ಲಸಿಕೆ ಪಡೆಯದೇ ಇರುವ ನಿರ್ಧಾರ ಕೈಗೊಳ್ಳುವುದು ತನ್ನ ಮೂಲಭೂತ ಹಕ್ಕು ಎಂದು ಜಾಮ್ನಗರ್‍ದ ಐಎಎಫ್ ಕಾರ್ಪೊರಲ್ ಯೋಗೇಂದರ್ ಕುಮಾರ್ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸಿ ಸರಕಾರ ಮೇಲಿನಂತೆ ಹೇಳಿದೆ.
ಯೋಗೇಂದರ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿಗೊಳಿಸಿದ ಹೈಕೋರ್ಟ್ ಅದೇ ಸಮಯ ಅರ್ಜಿದಾರರಿಗೆ ನೀಡಿದ ಮಧ್ಯಂತರ ಪರಿಹಾರವು ಭಾರತೀಯ ವಾಯುಪಡೆಯು ಅವರ ಪ್ರಕರಣವನ್ನು ಇತ್ಯರ್ಥಪಡಿಸುವ ತನಕ ಮುಂದುವರಿಯಲಿದೆ ಎಂದು ಹೇಳಿದೆ ಹಾಗೂ ಅರ್ಜಿದಾರರಿಗೆ ಆದೇಶ ಸಲ್ಲಿಸಿದ ಎರಡು ವಾರಗಳ ತನಕ ಅದನ್ನು ಜಾರಿಗೊಳಿಸುವ ಹಾಗಿಲ್ಲ ಎಂದು ಹೇಳಿದೆ.
ಲಸಿಕೆ ಪಡೆದುಕೊಳ್ಳಲು ನಿರಾಕರಿಸಿದ್ದಕ್ಕೆ ಮೇ 10, 2021ರಂದು ನೀಡಲಾದ ಶೋಕಾಸ್ ನೋಟೀಸ್ ಅನ್ನು ರದ್ದುಗೊಳಿಸುವಂತೆ ಕೋರಿ ಯೋಗೇಂದರ್ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರಲ್ಲದೆ ತಮ್ಮ ವಿರುದ್ಧ ಭಾರತೀಯ ವಾಯುಪಡೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದೆಂದು ಸೂಚಿಸಬೇಕೆಂದೂ ಕೋರಿದ್ದರು.
ಲಸಿಕೆ ಪಡೆದುಕೊಳ್ಳುವುದು ಐಚ್ಛಿಕ ಹಾಗೂ ಕಡ್ಡಾಯವಲ್ಲ ಎಂದು ಕೇಂದ್ರ ಸರಕಾರ ಹೇಳಿದೆ ಎಂದೂ ಅವರು ತಮ್ಮ ಅರ್ಜಿಯಲ್ಲಿ ಹೇಳಿದ್ದರು.