×
Ad

ಹಿಂದುತ್ವ ಗುಂಪುಗಳ ಹಲ್ಲೆಯಿಂದ ಮೌಲ್ವಿಯನ್ನು ರಕ್ಷಿಸಿದ್ದ ಠಾಣಾಧಿಕಾರಿ ಸೇವೆಯಿಂದ ಅಮಾನತು

Update: 2021-08-12 23:57 IST

ಹೊಸದಿಲ್ಲಿ, ಆ.12: ಕಳೆದ ವಾರ ದಿಲ್ಲಿಯ ಫ್ಲೈಓವರ್ ಒಂದರ ಮೇಲೆ ಮೌಲ್ವಿಯೋರ್ವರಿಗೆ ಕಿರುಕುಳ ನೀಡುತ್ತಿದ್ದ ಹಿಂದುತ್ವ ಗುಂಪನ್ನು ತಡೆದಿದ್ದ ಇಲ್ಲಿಯ ಆದರ್ಶ ನಗರ ಪೊಲೀಸ್ ಠಾಣಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಘಟನೆಯ ವೀಡಿಯೊ ಆ.4ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.

ಕರ್ತವ್ಯಲೋಪದ ಆರೋಪದಲ್ಲಿ ಠಾಣಾಧಿಕಾರಿ ಸಿ.ಪಿ.ಭಾರದ್ವಾಜ್ ರನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಹಲವಾರು ದೂರುಗಳಿದ್ದವು ಎಂದು ದಿಲ್ಲಿ ಪೊಲೀಸರು ಹೇಳಿಕೊಂಡಿದ್ದಾರಾದರೂ ಅಮಾನತು ಆದೇಶವು ‘ಅನಧಿಕೃತ’ ಆರಾಧನಾ ತಾಣವೊಂದರ ಕುರಿತು ಮೌಲ್ವಿಯನ್ನು ತರಾಟೆಗೆತ್ತಿಕೊಂಡಿದ್ದ ಹಿಂದುತ್ವ ಕಾರ್ಯಕರ್ತರು ಭಾರದ್ವಾಜ್ ರೊಂದಿಗೆ ವಾಗ್ವಾದದಲ್ಲಿ ತೊಡಗಿರುವುದನ್ನು ತೋರಿಸಿರುವ ವೈರಲ್ ವೀಡಿಯೊಕ್ಕೆ ಸಂಬಂಧಿಸಿರುವಂತೆ ಕಂಡುಬರುತ್ತಿದೆ ಎಂದು thewire.in ವರದಿ ಮಾಡಿದೆ.

ಮೌಲ್ವಿಗೆ ಕಿರುಕುಳ ನೀಡದಂತೆ ಹಿಂದುತ್ವ ಕಾರ್ಯಕರ್ತರಿಗೆ ಕಠಿಣ ಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದ ಭಾರದ್ವಾಜ್, ಅನಧಿಕೃತ ಧಾರ್ಮಿಕ ಸ್ಥಳಗಳ ಬಗ್ಗೆ ಯಾವುದೇ ದೂರುಗಳಿದ್ದರೆ ಸರ್ವೋಚ್ಚ ನ್ಯಾಯಾಲಯದ ನಿರ್ದೇಶದ ಮೇರೆಗೆ ದಿಲ್ಲಿ ಸರಕಾರವು ರಚಿಸಿರುವ ಸಮಿತಿಯನ್ನು ಸಂಪರ್ಕಿಸಬಹುದು, ಹೀಗೆ ಸಾರ್ವಜನಿಕವಾಗಿ ಗಲಾಟೆಯನ್ನು ನಡೆಸುವುದಲ್ಲ ಎಂದು ಬುದ್ಧಿಮಾತು ಹೇಳಿದ್ದರು.

ಫ್ಲೈಓವರ್ ನಲ್ಲಿಯ ಮಝಾರ್ ಒಂದರ ಕುರಿತು ಇಬ್ಬರು ಹಿಂದುತ್ವ ಕಾರ್ಯಕರ್ತರು ಮೌಲ್ವಿಯೊಂದಿಗೆ ವಾಗ್ವಾದಕ್ಕಿಳಿದಿದ್ದು, ಮೂರನೇ ಕಾರ್ಯಕರ್ತ ಘಟನೆಯನ್ನು ವೀಡಿಯೊ ಚಿತ್ರೀಕರಿಸುತ್ತಿದ್ದ. ಮೌಲ್ವಿಗೆ ಒಂದರ ನಂತರ ಒಂದರಂತೆ ಪ್ರಶ್ನೆಗಳನ್ನು ಕೇಳುತ್ತಿದ್ದ ಕುತ್ತಿಗೆಗೆ ಕೇಸರಿ ಶಾಲು ಸುತ್ತಿಕೊಂಡಿದ್ದ ಯುವಕ, ಇಂತಹ ಎಷ್ಟು ಮಝಾರ್ ಗಳನ್ನು ನೀವು ಅನಧಿಕೃತವಾಗಿ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದ ವೇಳೆ ಸ್ಥಳಕ್ಕೆ ತಲುಪಿದ ಭಾರದ್ವಾಜ್, ಭಾರತೀಯ ಪ್ರಜೆಗೆ ಹೀಗೆ ಸಾರ್ವಜನಿಕವಾಗಿ ತೊಂದರೆ ನೀಡುವ ಹಕ್ಕನ್ನು ನಿಮಗೆ ಯಾರು ನೀಡಿದ್ದಾರೆ ಎಂದು ಕೇಳಿದ್ದನ್ನು ವೀಡಿಯೊ ತೋರಿಸಿದೆ.
   
ಭಾರದ್ವಾಜ್ ಅವರೊಂದಿಗೆ ವಾದಕ್ಕಿಳಿದಿದ್ದ ಯುವಕ, ಪೊಲೀಸರು ಮತ್ತು ಆಡಳಿತ ರಾತ್ರೋರಾತ್ರಿ ಚಾಂದನಿ ಚೌಕ್ನಲ್ಲಿಯ ದೇವಸ್ಥಾವೊಂದನ್ನು ನೆಲಸಮಗೊಳಿಸಿರುವ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದ್ದ. ಇದಕ್ಕೆ ಅಧಿಕಾರಯುತವಾಗಿ ಉತ್ತರಿಸಿದ್ದ ಭಾರದ್ವಾಜ್, ‘ನೀವು ನನ್ನೊಂದಿಗೆ ಸಾಂವಿಧಾನಿಕ ಹಕ್ಕುಗಳ ಬಗ್ಗೆ ಮಾತನಾಡಿ. ನೀವು ಹೀಗೆ ಯಾವುದೇ ಪ್ರಜೆಗೆ ಅಥವಾ ಧಾರ್ಮಿಕ ವ್ಯಕ್ತಿಗೆ ಕಿರುಕುಳ ನೀಡುವಂತಿಲ್ಲ. ನಿಮಗೆ ಆ ಹಕ್ಕು ಇಲ್ಲ’ ಎಂದು ಹೇಳಿದ್ದರು. ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭಾರದ್ವಾಜ್ ಎಚ್ಚರಿಕೆ ನೀಡಿದ್ದರೂ ಯುವಕ ತನ್ನ ವಾದವನ್ನು ಮುಂದುವರಿಸಿದಾಗ ಆತನನ್ನು ಅಲ್ಲಿಂದ ಕರೆದೊಯ್ಯುವಂತೆ ತನ್ನ ಸಿಬ್ಬಂದಿಗಳಿಗೆ ಆದೇಶಿಸಿದ್ದರು.

ಭಾರದ್ವಾಜ್ ರನ್ನು ಅಮಾನತುಗೊಳಿಸಿರುವ ದಿಲ್ಲಿ ಪೊಲೀಸರ ಕ್ರಮಕ್ಕೆ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರಿಯಾದ ನಿಲುವು ತೆಗೆದುಕೊಂಡಿದ್ದಕ್ಕಾಗಿ ಇಲಾಖೆಯು ಭಾರದ್ವಾಜರಿಗೆ ಕಿರುಕುಳ ನೀಡುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಲಾಗಿದೆ. ಇದು ಭಾರತದಲ್ಲಿ ಕಾನೂನಿನ ಆಡಳಿತವನ್ನು ಸ್ಥಾಪಿಸುವ ಕ್ರಮವೇ ಎಂದು ಪತ್ರಕರ್ತ ಹಾಗೂ ‘ಜನತಾ ಕಿ ರಿಪೋರ್ಟರ್’ನ ಸ್ಥಾಪಕ ರಿಫಾತ್ ಜಾವೇದ್ ಟ್ವಿಟರ್ ನಲ್ಲಿ ಪ್ರಶ್ನಿಸಿದ್ದಾರೆ.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News