ʼನಷ್ಟ ನಾವು ಭರಿಸುತ್ತೇವೆʼ ಎಂದು ಪೆಟ್ರೋಲ್ ಬೆಲೆ ರೂ 3ರಷ್ಟು ಕಡಿತಗೊಳಿಸಿದ ತಮಿಳುನಾಡಿನ ಸ್ಟಾಲಿನ್ ಸರ್ಕಾರ

Update: 2021-08-13 11:32 GMT

ಚೆನ್ನೈ : ಇಂಧನ ಬೆಲೆಯೇರಿಕೆಯಿಂದ ಕಂಗೆಟ್ಟ ಜನರಿಗೆ ಖುಷಿ ನೀಡುವ ಬೆಳವಣಿಗೆಯೊಂದರಲ್ಲಿ ತಮಿಳುನಾಡಿನ ಸರ್ಕಾರ ಪೆಟ್ರೋಲ್ ದರವನ್ನು ರೂ 3ರಷ್ಟು ಕಡಿತಗೊಳಿಸಿದೆ. ಇಂದು ರಾಜ್ಯದ ನೂತನ ಸರಕಾರದ ಮೊದಲ ಬಜೆಟ್ ಮಂಡನೆ ವೇಳೆ ಮೇಲಿನ ಮಾಹಿತಿಯನ್ನು ರಾಜ್ಯದ ವಿತ್ತ ಸಚಿವ ಪಿ ಟಿ ಪಳನಿವೇಲ್ ತ್ಯಾಗರಾಜನ್ ನೀಡಿದ್ದಾರೆ. ಈ ಕ್ರಮವು ರಾಜ್ಯದ ಬೊಕ್ಕಸಕ್ಕೆ ರೂ 1,160 ಕೋಟಿ ನಷ್ಟವುಂಟು ಮಾಡಲಿದೆ ಎಂದು ಹೇಳಿದ ಅವರು ಪೆಟ್ರೋಲ್ ದರ ಕಡಿತವನ್ನು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಸೂಚನೆಯಂತೆ ಮಾಡಲಾಗಿದೆ ಎಂದಿದ್ದಾರೆ.

ಕಳೆದ ಕೆಲ ವಾರಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗರಿಷ್ಠ ಮಟ್ಟದಲ್ಲಿವೆ. ಶುಕ್ರವಾರ ಪೆಟ್ರೋಲ್ ಬೆಲೆ ಲೀಟರ್‍ಗೆ ರೂ 102.49 ಆಗಿದ್ದರೆ ಡೀಸೆಲ್ ಬೆಲೆ ರೂ 94.39 ಲೀಟರ್ ಆಗಿತ್ತು.

ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಪೆಟ್ರೋಲ್ ದರವನ್ನು ಲೀಟರ್‍ಗೆ ರೂ 5ರಷ್ಟು ಹಾಗೂ ಡೀಸೆಲ್ ಬೆಲೆಯನ್ನು ರೂ 4ರಷ್ಟು ಕಡಿತಗೊಳಿಸುವ ಭರವಸೆ ನೀಡಿತ್ತು. ಇಂತಹ ಭರವಸೆಗಳನ್ನು ತಕ್ಷಣ ಈಡೇರಿಸಲು ಸಾಧ್ಯವಿಲ್ಲ ಹಾಗೂ ಸಮಯ ಸಂದಂತೆ ಜಾರಿಗೊಳಿಸಲಾಗುವುದು ಎಂದು ವಿತ್ತ ಸಚಿವರು ಈ ಹಿಂದೆ ಹೇಳಿದ್ದರು.

"ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರೂ 32.90 ತೆರಿಗೆಯ ಪೈಕಿ ರೂ 31.50ರಷ್ಟು ರಾಜ್ಯಗಳಿಗೆ ಹಂಚಿಕೆಯಾಗುವುದಿಲ್ಲ, ಇದು ಕೇಂದ್ರವನ್ನು ಸೇರುತ್ತದೆ ಈ ಕಾರಣದಿಂದ ವ್ಯಾಟ್ ಇಳಿಕೆ ಸಾಧ್ಯವಿಲ್ಲ" ಎಂದು ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News