ಚುನಾವಣಾ ಆಯೋಗದ ವೆಬ್ ಸೈಟ್ ಹ್ಯಾಕ್ ಮಾಡಿ10,000ಕ್ಕೂ ಹೆಚ್ಚು ನಕಲಿ ಐಡಿಗಳನ್ನು ಸೃಷ್ಟಿಸಿದ್ದ ಯುವಕನ ಸೆರೆ
ಸಹರಾನ್ ಪುರ: ಭಾರತೀಯ ಚುನಾವಣಾ ಆಯೋಗದ ವೆಬ್ ಸೈಟ್ ಹ್ಯಾಕ್ ಮಾಡಿ ಸಾವಿರಾರು ನಕಲಿ ವೋಟರ್ ಐಡಿ ಸೃಷ್ಟಿಸಿದ ಆರೋಪದ ಮೇಲೆ 24 ವರ್ಷದ ಯುವಕನೊಬ್ಬನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ (ಬಿಸಿಎ) ಪದವಿ ಪಡೆದಿರುವ ವಿಪುಲ್ ಸೈನಿ ಅವರನ್ನು ಸಹರಾನ್ ಪುರ್ ಜಿಲ್ಲೆಯಿಂದ ಗುರುವಾರ ಬಂಧಿಸಲಾಗಿದೆ.
ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಮಧ್ಯಪ್ರದೇಶದ ಅರ್ಮಾನ್ ಮಲಿಕ್ ಎಂಬ ವ್ಯಕ್ತಿಯ ಇಚ್ಛೆಯಂತೆ ಸೈನಿ ಕೆಲಸ ಮಾಡುತ್ತಿದ್ದನೆಂದು ಪೊಲೀಸರು ಕಂಡುಕೊಂಡಿದ್ದಾರೆ. ಆರೋಪಿ ಸೈನಿ ಮೂರು ತಿಂಗಳಲ್ಲಿ 10,000ಕ್ಕೂ ಅಧಿಕ ನಕಲಿ ವೋಟರ್ ಐಡಿಗಳನ್ನು ಸೃಷ್ಟಿಸಿದ್ದ.
ಸೈನಿಗೆ ಪ್ರತಿ ಐಡಿಗೆ ರೂ.100-200 ಪಾವತಿಸಲಾಗಿದೆ ಹಾಗೂ ಬಂಧನದ ನಂತರ ಆತನ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಅದರಲ್ಲಿ 60 ಲಕ್ಷ ರೂ. ಜಮಾ ಆಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಬ್ಯಾಂಕ್ ಖಾತೆಯನ್ನು ತಕ್ಷಣವೇ ಸ್ಥಗಿತಗೊಳಿಸಲಾಗಿದೆ ಎಂದು ಸಹರಾನ್ಪುರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎಸ್. ಚನ್ನಪ್ಪ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.