ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿ ‘ಜೈ ಶ್ರೀರಾಮ್’ ಕೂಗುವಂತೆ ಒತ್ತಾಯಿಸಿದ ಪ್ರಕರಣ: ಮೂವರು ಆರೋಪಿಗಳ ಬಂಧನ, ಬಿಡುಗಡೆ
ಲಕ್ನೊ: ಕಾನ್ಪುರದಲ್ಲಿ ಮುಸ್ಲಿಂ ಸಮುದಾಯದ ಇ-ರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿ, 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗುವಂತೆ ಒತ್ತಾಯಿಸಿದ ಆರೋಪದಲ್ಲಿ ಮೂವರನ್ನು ಗುರುವಾರ ರಾತ್ರಿ ಬಂಧಿಸಲಾಗಿದ್ದು, ಸ್ಥಳೀಯ ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಹಲ್ಲೆಗೊಳಗಾದ ಅಫ್ಸರ್ ಅಹ್ಮದ್ ಅವರ ಐದು ವರ್ಷದ ಮಗಳು ತನ್ನ ತಂದೆಯನ್ನು ದಾಳಿಕೋರರಿಂದ ರಕ್ಷಿಸಲು ಪ್ರಯತ್ನಿಸುತ್ತಿರುವುದು, ತಂದೆಯನ್ನು ಹೊಡೆಯಬೇಡಿ ಎಂದು ಅಳುತ್ತಾ ಬೇಡಿಕೊಳ್ಳುತ್ತಿರುವ 1 ನಿಮಿಷದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ವೀಡಿಯೊವೊಂದರಲ್ಲಿ ಕೇಸರಿ ಶಿರೋವಸ್ತ್ರಗಳನ್ನು ಧರಿಸಿದ್ದ ಕೆಲವು ಪುರುಷರು ಇ-ರಿಕ್ಷಾ ಚಾಲಕ ಅಹ್ಮದ್ ಮೇಲೆ ಹಲ್ಲೆ ಮಾಡುತ್ತಿದ್ದು, ಆತ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದಾನೆ ಎಂದು ಆರೋಪಿಸಿದ್ದಾರೆ. ತಾನು ಯಾವುದೇ ಘೋಷಣೆಯನ್ನು ಕೂಗಿಲ್ಲ ಎಂದು ಅಹ್ಮದ್ ಪದೇ ಪದೇ ಮನವಿ ಮಾಡುತ್ತಿದ್ದರು. ಪೊಲೀಸರು ಅಹ್ಮದ್ ರನ್ನು ರಕ್ಷಿಸಿ ಆತನನ್ನು ಹಾಗೂ ಆತನ ಮಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದರು.
" ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆ ಹೊಂದಿರುವ ಐಪಿಸಿ ಸೆಕ್ಷನ್ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಹಾಗೂ ನ್ಯಾಯಾಲಯದ ಮಾರ್ಗಸೂಚಿಗಳ ಪ್ರಕಾರ, ಅಂತಹ ಸೆಕ್ಷನ್ ಅಡಿಯಲ್ಲಿ ಆರೋಪಿಗಳಿಗೆ ಜಾಮೀನು ನೀಡಬೇಕು. ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿದೆ. ಆದೇಶಗಳನ್ನು ಸ್ವೀಕರಿಸಿದ ನಂತರ ನಾವು ಅವರನ್ನು ಬಿಡುಗಡೆ ಮಾಡಿದ್ದೇವೆ’’ ಎಂದು ಗೋವಿಂದನಗರ ಎಸಿಪಿ ವಿಕಾಸ್ ಕುಮಾರ್ ಪಾಂಡೆ ಹೇಳಿದ್ದಾರೆ.
ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಗುರುವಾರ ರಾತ್ರಿ ಮೂವರನ್ನು ಬಂಧಿಸಲಾಗಿತ್ತು. ಬಂಧಿತರನ್ನು ಅಜಯ್ ರಾಜೇಶ್ "ಬ್ಯಾಂಡ್ ವಾಲಾ", ಅಮನ್ ಗುಪ್ತಾ ಹಾಗೂ ರಾಹುಲ್ ಕುಮಾರ್ ಎಂದು ಗುರುತಿಸಲಾಗಿದೆ.