"ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಗಳು" ಜಂತರ್ ಮಂತರ್ ದ್ವೇಷ ಘೋಷಣೆ ಆರೋಪಿಗಳಿಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ
ಹೊಸದಿಲ್ಲಿ: ಆಗಸ್ಟ್ 8 ರಂದು ಜಂತರ್ ಮಂತರ್ ನಲ್ಲಿ ನಡೆದ ರ್ಯಾಲಿಯಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿದ ಘಟನೆಗೆ ಸಂಬಂಧಿಸಿದಂತೆ ಬಂಧಿತ ಮೂವರ ಜಾಮೀನು ಅರ್ಜಿಗಳನ್ನು ದೆಹಲಿಯ ನ್ಯಾಯಾಲಯ ತಿರಸ್ಕರಿಸಿದೆ ಎಂದು Theindianexpress ಗುರುವಾರ ವರದಿ ಮಾಡಿದೆ.
ಈ ಕಾರ್ಯಕ್ರಮವನ್ನು ಭಾರತೀಯ ಜನತಾ ಪಕ್ಷದ ಮಾಜಿ ವಕ್ತಾರ ಅಶ್ವಿನಿ ಉಪಾಧ್ಯಾಯ ಅವರು "ಭಾರತ್ ಜೊಡೊ [ಭಾರತವನ್ನು ಒಗ್ಗೂಡಿಸುವ] ಚಳುವಳಿ" ಎಂಬ ಹೆಸರಿನಲ್ಲಿ ಆಯೋಜಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪೊಲೀಸರು ಬಂಧಿಸಿದರೂ ಒಂದೇ ದಿನದಲ್ಲಿ ಜಾಮೀನು ಪಡೆಯುವಲ್ಲಿ ಅವರು ಯಶಸ್ವಿಯಾಗಿದ್ದರು.
ಧಾರ್ಮಿಕ ದ್ವೇಷವನ್ನು ಉತ್ತೇಜಿಸುವ ಮತ್ತು ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ ಆರೋಪದ ಮೇರೆಗೆ ಬಂಧಿತರಾದ ದೀಪಕ್ ಸಿಂಗ್., ಪ್ರೀತ್ ಸಿಂಗ್ ಮತ್ತು ವಿನೋದ್ ಶರ್ಮಾ ಎಂಬಾತರಿಗೆ ಜಾಮೀನು ನೀಡಲು ದಿಲ್ಲಿ ನ್ಯಾಯಾಲಯ ನಿರಾಕರಿಸಿತು. ಮೆಟ್ರೋಪಾಲಿಟನ್ ನ್ಯಾಯಾಧೀಶರಾದ ಉದ್ಭವ್ ಕುಮಾರ್ ಜೈನ್ ಈ ಪ್ರಕರಣದ ಕುರಿತ ವಿಚಾರಣೆಯ ಸಂದರ್ಭದಲ್ಲಿ ಈ ಘೋಷಣೆಗಳು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಗಳಾಗಿವೆ ಎಂದು ಹೇಳಿದ್ದಾಗಿ ವರದಿ ತಿಳಿಸಿದೆ.