ಜಮೈಕಾದ ಅಥ್ಲೀಟ್ ಹ್ಯಾನ್ಸ್ಲೆ ಪಾರ್ಚ್ಮೆಂಟ್ ಚಿನ್ನ ಗೆಲ್ಲಲು ನೆರವಾದ ಒಲಿಂಪಿಕ್ಸ್ ಸ್ವಯಂ ಸೇವಕಿ!
ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಹ್ಯಾನ್ಸ್ಲೆ ಪಾರ್ಚ್‌ಮೆಂಟ್ ಪುರುಷರ 110 ಮೀ ಹರ್ಡಲ್ ರೇಸ್ ಅನ್ನು ಆಗಸ್ಟ್ 5 ರಂದು 13.04 ಸೆಕೆಂಡುಗಳ ಅತ್ಯುತ್ತಮ ಸಮಯದೊಂದಿಗೆ ಗೆದ್ದುಕೊಂಡಿದ್ದರು. ಒಲಿಂಪಿಕ್ಸ್ ಸ್ವಯಂ ಸೇವಕಿಯೊಬ್ಬರು ನೆರವಿಗೆ ಬಾರದೆ ಇರುತ್ತಿದ್ದರೆ ಅವರಿಗೆ ಈ ಅಮೋಘ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಜಮೈಕಾದ ಕ್ರೀಡಾಪಟು ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು,, ತಪ್ಪಾದ ಬಸ್ ಹತ್ತಿದ್ದ ಅವರು ಈಜು ಕ್ರೀಡಾಂಗಣಕ್ಕೆ ತಲುಪಿದ ಬಳಿಕವೂ ಈವೆಂಟ್ ಅನ್ನು ತಪ್ಪಿಸಿಕೊಳ್ಳುವುದರಿಂದ ಕೂದಲೆಳೆ ಅಂತರದಿಂದ ಹೇಗೆ ಪಾರಾದರು ಎನ್ನುವುದನ್ನು ವಿವರಿಸಿದ್ದಾರೆ. ಟೋಕಿಯೊ ಗೇಮ್ಸ್ ಸ್ವಯಂಸೇವಕಿಯೊಬ್ಬರು ಪಾರ್ಚ್‌ಮೆಂಟ್ ಗೆ ಟ್ಯಾಕ್ಸಿಯಲ್ಲಿ ತೆರಳಲು ಹಣವನ್ನು ನೀಡಿ ಸರಿಯಾದ ದಿಕ್ಕಿನಲ್ಲಿ ಹೋಗುವಂತೆ ಮಾಡಿದ್ದರು. ಹೀಗಾಗಿ ಜಮೈಕಾದ ಓಟಗಾರ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದು ಮಾತ್ರವಲ್ಲ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
"ಜಪಾನಿನ ಜನರು ಎಂದೆಂದಿಗೂ ಉತ್ತಮ ವ್ಯಕ್ತಿಗಳು. ಧನ್ಯವಾದಗಳು ನನ್ನ ಸ್ನೇಹಿತೆ @d_treefairy," ಎಂದು ಪಾರ್ಚ್ಮೆಂಟ್ ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.
"ನಾನು ಆಕಸ್ಮಿಕವಾಗಿ ತಪ್ಪು ಸ್ಥಳಕ್ಕೆ ತಪ್ಪು ಬಸ್ಸಿನಲ್ಲಿ ಹೋಗಿದ್ದೆ. ನಾನು ನನ್ನ ಫೋನಿನಲ್ಲಿ, ಸಂಗೀತವನ್ನು ಕೇಳುತ್ತಿದ್ದೆ. ಬಸ್ಸಿನಲ್ಲಿದ್ದ ಜನರು ಹೇಳುತ್ತಿರುವುದು ನನಗೆ ಕೇಳಿಸುತ್ತಿರಲಿಲ್ಲ. ಅಥ್ಲೆಟಿಕ್ಸ್ ಟ್ರ್ಯಾಕ್ ಎಂದು ಬಸ್ಸಿನಲ್ಲಿ ಬೋರ್ಡ್ ನೋಡಿದೆ. ಹಾಗಾಗಿ, ನಾನು ಸುಮ್ಮನೆ ಹೋದೆ... ನನಗೆ ಸುತ್ತಮುತ್ತಲಿನ ಯಾವುದೂ ಪರಿಚಯವಿರಲಿಲ್ಲ. ಹೀಗಾಗಿ ಬಸ್ ತಪ್ಪು ದಾರಿಯಲ್ಲಿ ಹೋಗುತ್ತಿರುವುದು ಗೊತ್ತಾಗಲಿಲ್ಲ’’ ಎಂದು ಪಾರ್ಚ್ಮೆಂಟ್ ಹೇಳಿದರು.
ಜಮೈಕಾದ ಓಟಗಾರನಿಗೆ ಮತ್ತೆ ಒಲಿಂಪಿಕ್ ಗ್ರಾಮಕ್ಕೆ ತೆರಳಿ ಇನ್ನೊಂದು ಬಸ್ಸಿನಲ್ಲಿ ಕ್ರೀಡಾಂಗಣಕ್ಕೆ ಹೋಗಲು ತಿಳಿಸಲಾಯಿತು. ಅವರು ಹಾಗೆ ಮಾಡಿದ್ದರೆ, ತಮ್ಮ ಸ್ಪರ್ಧೆಯನ್ನು ತಪ್ಪಿಸಿಕೊಳ್ಳುತ್ತಿದ್ದರು.
"ನಾನು ಈ ಸ್ವಯಂಸೇವಕಿಯನ್ನು ನೋಡಿದೆ. ಹಣ ನೀಡುವಂತೆ ಕೇಳಿದೆ. ಆಕೆ ನನಗೆ ಟ್ಯಾಕ್ಸಿಯಲ್ಲಿ ಹೋಗುವಷ್ಟು ಸ್ವಲ್ಪ ಹಣವನ್ನು ಕೊಟ್ಟರು. ಹೀಗಾಗಿ ಸರಿಯಾದ ಸಮಯಕ್ಕೆ ನಾನು ಕ್ರೀಡಾಂಗಣದಲ್ಲಿ ಅಭ್ಯಾಸದ ಟ್ರ್ಯಾಕ್‌ಗೆ ಹೋಗಲು ಸಾಧ್ಯವಾಯಿತು, ಸ್ಪರ್ಧಿಸಲು ಸಾಕಷ್ಟು ಸಮಯವೂ ಸಿಕ್ಕಿತ್ತು ಎಂದು ಹೇಳಿದ್ದಾರೆ.
ಹ್ಯಾನ್ಸ್ಲೆ ಪಾರ್ಚ್ಮೆಂಟ್ ಅವರು ಒಲಿಂಪಿಕ್ ಚಿನ್ನ ಗೆಲ್ಲಲು ಸಹಾಯ ಮಾಡಿದ ಸ್ವಯಂಸೇವಕಿಯನ್ನು ಹುಡುಕಿ ಆಕೆಯೊಂದಿಗೆ ಫೋಟೊ ತೆಗೆಸಿಕೊಂಡಿದ್ದಲ್ಲದೆ ಟಿ-ಶರ್ಟ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಟ್ಯಾಕ್ಸಿಗೆ ನೀಡಿದ್ದ ಹಣವನ್ನು ವಾಪಸ್ ನೀಡಿದ್ದಾರೆ.