ನೂತನ ಗುಜರಿ ನೀತಿಯು ಆಟೊಮೊಬೈಲ್ ವಲಯಕ್ಕೆ ಹೊಸ ಅನನ್ಯತೆಯನ್ನು ನೀಡಲಿದೆ: ಪ್ರಧಾನಿ ಮೋದಿ

Update: 2021-08-13 16:59 GMT

ಗಾಂಧಿನಗರ (ಗುಜರಾತ),ಆ.13: ರಾಷ್ಟ್ರೀಯ ವಾಹನ ಗುಜರಿ ನೀತಿಗೆ ಶುಕ್ರವಾರ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು,ಈ ಉಪಕ್ರಮವು ಆವರ್ತ ಆರ್ಥಿಕತೆಯನ್ನು ಉತ್ತೇಜಿಸಲಿದೆ ಮತ್ತು ಆರ್ಥಿಕ ಅಭಿವೃದ್ಧಿ ಪ್ರಕ್ರಿಯೆಯನ್ನು ಹೆಚ್ಚು ಸುಸ್ಥಿರಗೊಳಿಸಲಿದೆ ಹಾಗೂ ಪರಿಸರ ಸ್ನೇಹಿಯಾಗಿಸಲಿದೆ ಮತ್ತು  ಆಟೊಮೊಬೈಲ್ ವಲಯಕ್ಕೆ ಹೊಸ ಅನನ್ಯತೆಯನ್ನು ನೀಡಲಿದೆ ಎಂದು ಹೇಳಿದರು.

ಇಲ್ಲಿ ಆಯೋಜಿಸಲಾದ ಹೂಡಿಕೆದಾರರ ಸಮಾವೇಶದಲ್ಲಿ ವರ್ಚುವಲ್ ಭಾಷಣವನ್ನು ಮಾಡಿದ ಮೋದಿ,ನೂತನ ನೀತಿಯು ಹಳೆಯ ಮತ್ತು ಅನರ್ಹ ವಾಹನಗಳ ಪುನರ್ಬಳಕೆಯ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದರು.

ಬಳಕೆಗೆ ಯೋಗ್ಯವಲ್ಲದ ವಾಹನಗಳನ್ನು ವೈಜ್ಞಾನಿಕ ವಿಧಾನದಲ್ಲಿ ನಮ್ಮ ರಸ್ತೆಗಳಿಂದ ತೆರವುಗೊಳಿಸುವಲ್ಲಿ ಈ ನೀತಿಯು ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಹೇಳಿದ ಮೋದಿ,21ನೇ ಶತಮಾನದಲ್ಲಿ ಸ್ವಚ್ಛ,ದಟ್ಟಣೆರಹಿತ ಮತ್ತು ಅನುಕೂಲಕರ ಚಲನಶೀಲನತೆಗಾಗಿ ಭಾರತವು ಶ್ರಮಿಸಬೇಕಿದೆ ಎಂದರಲ್ಲದೆ, ನೂತನ ನೀತಿಯು ನಗರಗಳಲ್ಲಿ ವಾಯುಮಾಲಿನ್ಯವನ್ನು ತಗ್ಗಿಸಲು ನೆರವಾಗಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ನೂತನ ನೀತಿಯು ‘ತ್ಯಾಜ್ಯದಿಂದ ಸಂಪತ್ತು ’ಕಾರ್ಯಕ್ರಮದಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಹೇಳಿದ ಅವರು,ನಾವು ಆವರ್ತ ಆರ್ಥಿಕತೆಯೊಂದನ್ನು ಉತ್ತೇಜಿಸುತ್ತಿದ್ದೇವೆ. ಈ ನೀತಿಯು ಮಾಲಿನ್ಯವನ್ನು ಕಡಿಮೆ ಮಾಡುವ ಜೊತೆಗೆ ಆಟೊಮೊಬೈಲ್ ಹಾಗೂ ಲೋಹಗಳ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಲಿದೆ ಮತ್ತು ಶ್ರೀಸಾಮಾನ್ಯನಿಗೂ ಲಾಭದಾಯಕವಾಗಲಿದೆ ಎಂದು ತಿಳಿಸಿದರು.

ನೂತನ ನೀತಿಯಡಿ ತಮ್ಮ ಹಳೆಯ ವಾಹನಗಳನ್ನು ಗುಜರಿಗೆ ಹಾಕುವವರಿಗೆ ಸರಕಾರವು ಪ್ರಮಾಣಪತ್ರವನ್ನು ನೀಡಲಿದೆ. ಈ ಪ್ರಮಾಣಪತ್ರವನ್ನು ಹೊಂದಿದವರಿಗೆ ನೂತನ ವಾಹನವನ್ನು ಖರೀದಿಸಿದಾಗ ನೋಂದಣಿ ಶುಲ್ಕದಿಂದ ವಿನಾಯಿತಿಯನ್ನು ನೀಡಲಾಗುವುದು,ಅಲ್ಲದೆ ರಸ್ತೆ ತೆರಿಗೆಯಲ್ಲಿ ರಿಯಾಯತಿಗೂ ಅವರು ಅರ್ಹರಾಗುತ್ತಾರೆ ಎಂದರು.

ನೀತಿಯ ಪ್ರಮುಖ ಅಂಶವನ್ನು ಬೆಟ್ಟುಮಾಡಿದ ಅವರು,ವಾಹನವು ಎಷ್ಟು ಹಳೆಯದಾಗಿದೆ ಎನ್ನುವುದರ ಬದಲು ಕ್ಷಮತೆ ಪರೀಕ್ಷೆಯು ಅದನ್ನು ಗುಜರಿಗೆ ಹಾಕಬೇಕೇ ಎನ್ನುವುದನ್ನು ನಿರ್ಧರಿಸಲಿದೆ ಎಂದು ತಿಳಿಸಿದರು.

ನೂತನ ನೀತಿಯು 10,000 ಕೋ.ರೂ.ಗಳ ಬಂಡವಾಳವನ್ನು ಆಕರ್ಷಿಸಲಿದೆ ಮತ್ತು ಸಹಸ್ರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದ ಮೋದಿ,‘ನಮ್ಮ ದೇಶದಲ್ಲಿ ಮರುಬಳಕೆ ಲೋಹಗಳ ಲಭ್ಯತೆ ಸಾಕಷ್ಟು ಪ್ರಮಾಣದಲ್ಲಿಲ್ಲ, ಹೀಗಾಗಿ ಕಳೆದ ವರ್ಷ ನಾವು 23,000 ಕೋ.ರೂ.ವೌಲ್ಯದ ಗುಜರಿ ಉಕ್ಕನ್ನು ಆಮದು ಮಾಡಿಕೊಂಡಿದ್ದೇವೆ. ಈ ನೀತಿಯು ಜಾರಿಗೊಳ್ಳುವುದರೊಂದಿಗೆ ನಾವು ವೈಜ್ಞಾನಿಕ ವಿಧಾನದಲ್ಲಿ ವಿರಳ ಭೂಧಾತುಗಳನ್ನೂ ಮರುಬಳಕೆಗೆ ಲಭ್ಯವಾಗಿಸಿಕೊಳ್ಳಬಹುದು. ಆಮದುಗಳ ಮೇಲಿನ ನಮ್ಮ ಅವಲಂಬನೆಯನ್ನು ನಾವು ತಗ್ಗಿಸಬೇಕಿದೆ. ಇದಕ್ಕಾಗಿ ಉದ್ಯಮವು ಹೆಚ್ಚುವರಿ ಶ್ರಮಿಸಬೇಕಾಗುತ್ತದೆ ’ಎಂದರು.

ಹಡಗು ಮರುಬಳಕೆ ಕೇಂದ್ರವಾಗಿರುವ ಭಾವನಗರದ ಅಲಂಗ್ ಅನ್ನು ವಾಹನ ಮರುಬಳಕೆ ಕೇಂದ್ರವನ್ನಾಗಿ ಅಭಿವೃದ್ಧಿಗೊಳಿಸುವುದಕ್ಕೂ ಮೋದಿ ಒತ್ತು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News