ಧನಬಾದ್ ನ್ಯಾಯಾಧೀಶರ ಸಾವಿನ ಪ್ರಕರಣ: ತನಿಖೆಯ ವಿವರಗಳನ್ನು ಸಲ್ಲಿಸದ ಸಿಬಿಐ ಅಧಿಕಾರಿಗೆ ಹೈಕೋರ್ಟ್ ತರಾಟೆ
ಹೊಸದಿಲ್ಲಿ,ಆ.13: ಧನಬಾದ್ ನ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಉತ್ತಮ ಆನಂದ ಅವರ ಸಾವಿನ ತನಿಖೆಯನ್ನು ಸಿಬಿಐ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಗುರುವಾರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಜಾರ್ಖಂಡ್ ಉಚ್ಚ ನ್ಯಾಯಾಲಯವು, ತನಿಖೆಯ ಕುರಿತು ಇತ್ತೀಚಿನ ಮಾಹಿತಿಗಳನ್ನು ಸಲ್ಲಿಸುವಲ್ಲಿ ವೈಫಲ್ಯಕ್ಕಾಗಿ ಸಿಬಿಐ ತನಿಖಾಧಿಕಾರಿಯನ್ನು ತರಾಟೆಗೆತ್ತಿಕೊಂಡಿತಲ್ಲದೆ, ಸಂಪೂರ್ಣ ವಿವರಗಳೊಂದಿಗೆ ಸಜ್ಜಾಗಿರುವಂತೆ ಅವರಿಗೆ ಸೂಚಿಸಿತು.
ಮುಖ್ಯ ನ್ಯಾಯಾಧೀಶ ರವಿ ರಂಜನ್ ಮತ್ತು ನ್ಯಾ.ಸುಜಿತ ನಾರಾಯಣ ಪ್ರಸಾದ ಅವರ ಪೀಠವು ಪ್ರಕರಣವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆತ್ತಿಕೊಂಡಿದೆ.
ಜೂ.28ರಂದು ಬೆಳಗಿನ ವಾಯುವಿಹಾರ ನಡೆಸುತ್ತಿದ್ದ ನ್ಯಾ.ಸಿಂಗ್ ಅವರಿಗೆ ಆಟೋರಿಕ್ಷಾವೊಂದು ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ಪೊಲೀಸರು ಕೊಲೆ ತನಿಖೆಯನ್ನು ನಡೆಸುವುದಾಗಿ ಪ್ರಕಟಿಸಿದ್ದರು.
ಪ್ರಾಥಮಿಕ ತನಿಖೆಯನ್ನು ನಡೆಸಿದ್ದ ಪೊಲಿಸರ ವಿಶೇಷ ತನಿಖಾ ತಂಡ (ಸಿಟ್)ವು ಆಟೋದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿತ್ತಾದರೂ, ಕೃತ್ಯದ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆ.4ರಂದು ಪ್ರಕರಣವನ್ನು ತನಗೆ ಹಸ್ತಾಂತರಿಸಿಕೊಂಡಿದ್ದ ಸಿಬಿಐ ಇಬ್ಬರು ಆರೋಪಿಗಳನ್ನು ಇತ್ತೀಚಿಗೆ ತನ್ನ ವಶಕ್ಕೆ ಪಡೆದಿದೆ.
ಗುರುವಾರದ ವಿಚಾರಣೆ ಸಂದರ್ಭ ಮು.ನ್ಯಾ.ರಂಜನ್ ಅವರು ತನಿಖೆಯಲ್ಲಿ ಇತ್ತೀಚಿನ ಮಾಹಿತಿಗಳೇನು ಮತ್ತು ವಿಧಿವಿಜ್ಞಾನ ಪರೀಕ್ಷೆಗಳಿಗೆ ಸಂಬಂಧಿಸಿದ ವಿವರಗಳನ್ನು ಸಿಟ್ ಹಸ್ತಾಂತರಿಸಿದೆಯೇ ಎಂದು ಸಿಬಿಐನ ತನಿಖಾಧಿಕಾರಿಯನ್ನು ಪ್ರಶ್ನಿಸಿದ್ದರು.
ಇದಕ್ಕೆ ಸಮರ್ಪಕ ಉತ್ತರಗಳನ್ನು ನೀಡಲು ಸಾಧ್ಯವಾಗದ ಅಧಿಕಾರಿ, ಸಿಟ್ ಆಟೋರಿಕ್ಷಾವನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ರಾಂಚಿಗೆ ಸಾಗಿಸಿದೆ ಎಂದು ತಿಳಿಸಿದ್ದರು.