ಸ್ವಾತಂತ್ರ್ಯ ಹೋರಾಟ ಮುಗಿದಿಲ್ಲ, ಆರಂಭವಾಗಿದೆ

Update: 2021-08-15 05:45 GMT

ಗಾಂಧಿಯವರ ಮೇಲೆ ಬ್ರಿಟಿಷ್ ಸರಕಾರವು ದೇಶದ್ರೋಹದ ಆಪಾದನೆಯನ್ನು ಮಾಡಿ ನ್ಯಾಯ ವಿಚಾರಣೆ ನಡೆದಾಗ ಅನ್ಯಾಯ ಮಾಡುವ ಪ್ರಭುತ್ವವನ್ನು, ಸರಕಾರವನ್ನು ವಿರೋಧಿಸುವುದು ದೇಶದ್ರೋಹವಾದರೆ ನಾನು ಅಂತಹ ದೇಶದ್ರೋಹವನ್ನು ಮತ್ತೆ ಮತ್ತೆ ಮಾಡಲು ಬಯಸುತ್ತೇನೆ ಎಂದು ನಿರ್ಧರಿಸಿದರು. ವಿಪರ್ಯಾಸವೆಂದರೆ ಕ್ರೂರ ದಬ್ಬಾಳಿಕೆಗಾಗಿ ಕಾನೂನುಗಳನ್ನು ರಚಿಸಿಕೊಂಡಿದ್ದ ಬ್ರಿಟಿಷ್ ಸರಕಾರವು ಅವರಿಗೆ ಶಿಕ್ಷೆ ಕೊಟ್ಟಿತೇ ಹೊರತು ಅವರ ಪ್ರಾಣ ತೆಗೆಯಲು ಪ್ರಯತ್ನಿಸಲಿಲ್ಲ; ಅವರೊಬ್ಬರೇ ಅಲ್ಲ, ದೇಶದ ಸಾವಿರಾರು ಅನಾಮಿಕ ಸಾಮಾನ್ಯರು ಸಾಮ್ರಾಜ್ಯಶಾಹಿ ಪ್ರಭುತ್ವದ ವಿರುದ್ಧ ಬಂಡಾಯ ಮಾಡಿದರು. ಈಗ ಹೋರಾಟ ಮಾಡುತ್ತಿರುವ ರೈತರಿಗೆ, ಕಾರ್ಮಿಕರಿಗೆ ಇರುವುದೊಂದೇ ದೇಶ- ಭಾರತ. ಕೊರೋನ ಪಿಡುಗು ಬಂದ ಕೂಡಲೇ ಖಾಸಗಿ ವಿಮಾನಗಳಲ್ಲಿ ವಿದೇಶಗಳಿಗೆ ಹಾರುವ ಬಂಡವಾಳಶಾಹಿಗಳು ಅವರಲ್ಲ. ಈ ದೇಶಕ್ಕೆ ಸ್ವಾತಂತ್ರವನ್ನು ತಂದವರು ಅವರೇ. ಹೀಗಾಗಿ ಈಗ ಬಂಡವಾಳಶಾಹಿಯ ವಿರುದ್ಧ ಸ್ವಾತಂತ್ರವನ್ನು ಕೇಳುತ್ತಿದ್ದಾರೆ.


ಸ್ವಾತಂತ್ರ್ಯ ಒಂದು ಘಟನೆಯಲ್ಲ; ಅದೊಂದು ಪ್ರಕ್ರಿಯೆ. ಹೀಗಾಗಿ ಚರಿತ್ರೆಕಾರರು ತಮ್ಮ ಅನುಕೂಲಕ್ಕಾಗಿ ಭಾರತದ ಸ್ವಾತಂತ್ರ್ಯ ಚಳವಳಿಯು ಹತ್ತೊಂಭತ್ತನೆಯ ಶತಮಾನದಲ್ಲಿ ಆರಂಭವಾಗಿ ಆಗಸ್ಟ್ 15, 1947ರಂದು ಮುಗಿಯಿತು ಎಂದು ಹೇಳುತ್ತಾರೆ. ಕೆಲವರು 1857ರಲ್ಲಿ ಸ್ವಾತಂತ್ರ್ಯ ಚಳವಳಿ ಆರಂಭವಾಯಿತು ಎಂದು ಹೇಳುತ್ತಾರೆ. ಆದರೆ ಸ್ವಾತಂತ್ರ್ಯವು ಒಂದು ಪ್ರಯೋಗ, ಗಾಂಧಿಯವರು ತಮ್ಮ ಆತ್ಮಚರಿತ್ರೆಯನ್ನು ಒಂದು ಪ್ರಯೋಗವೆಂದು ಕರೆದ ಅರ್ಥದಲ್ಲಿ, ಅವರು ಹೇಳಿದಂತೆ ಸತ್ಯವು ಒಂದು ಅಂತಿಮ ಸ್ಥಿತಿಯಲ್ಲ. ಅದು ನಿರಂತರವಾಗಿ ಹುಡುಕುತ್ತಾ, ನಮ್ಮನ್ನೇ ಶೋಧಿಸಿಕೊಳ್ಳುತ್ತಾ, ಆದರ್ಶದ ಜೊತೆಗೆ ಕ್ರಿಯೆಗಳನ್ನು ಜೋಡಿಸುತ್ತಾ ಅಂದಿನ ಯುಗಧರ್ಮಕ್ಕೆ ಅನುಗುಣವಾಗಿ ಕಂಡುಕೊಳ್ಳುವ ಅನುಭವ. ಹಾಗೆಯೆ ಸ್ವಾತಂತ್ರ್ಯ ಕೂಡ. ಸ್ವಾತಂತ್ರ್ಯವು ಇಂದೂ ಮುಗಿಯದ ಒಂದು ಹುಡುಕಾಟವಾಗಿದೆ. ಹೀಗಾಗಿ ಭಾರತದ ಅನೇಕ ಸಮುದಾಯಗಳು, ವರ್ಗಗಳು ತಮಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲವೆಂದು ಹೇಳಿದರೆ, ಅದು ದೇಶದ್ರೋಹವಲ್ಲ. ಸ್ವಾತಂತ್ರದ ನಮ್ಮ ಕಲ್ಪನೆಯನ್ನು ಇನ್ನೂ ವಿಸ್ತಾರಗೊಳಿಸುತ್ತಿದ್ದಾರೆ, ಕ್ರಿಯಾಶೀಲಗೊಳಿಸುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಬೇಕು. ಭಾರತದ ಮೂವರು ಮಹಾನ್ ಚಿಂತಕರು ಹೀಗೆ ನಂಬಿದ್ದರು. ಸ್ವಾತಂತ್ರದ ಆಚರಣೆಗಳಿಂದ ದೂರವಿಟ್ಟುಕೊಂಡು ಕೋಮು ಹಿಂಸೆಯನ್ನು ತಡೆಯುವ ಪ್ರಯತ್ನದಲ್ಲಿದ್ದ ಗಾಂಧಿ ಹೀಗೆ ಹೇಳಿದ್ದರು:

‘‘ಭಾರತ ಸ್ವಾತಂತ್ರದ ಹೊಸ್ತಿಲಲ್ಲಿ ನಿಂತಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ ಈ ರೀತಿಯಲ್ಲಿ ಸ್ವಾತಂತ್ರವನ್ನು ನಾನು ಬಯಸಿರಲಿಲ್ಲ. ನಾನು ಬಯಸಿದ್ದು ಈ ಸ್ವಾತಂತ್ರವನ್ನಲ್ಲ. ಭಾರತವನ್ನು ವಿಭಜಿಸಿದಲ್ಲಿ, ಅಲ್ಪಸಂಖ್ಯಾತರಿಗೆ ಭದ್ರತೆ, ರಕ್ಷಣೆ, ಸಮಾನತೆಗಳಿಲ್ಲದೆ ಹೋದಲ್ಲಿ ಅಂಥ ಸ್ವಾತಂತ್ರವು ನನ್ನ ದೃಷ್ಟಿಯಲ್ಲಿ ಸ್ವಾತಂತ್ರವೇ ಅಲ್ಲ. ಈಗ ನಡೆಯುತ್ತಿರುವ ವಿದ್ಯಮಾನಗಳು ಸ್ವಾತಂತ್ರ್ಯಾನಂತರ ಏನಾಗಲಿವೆ ಎಂಬುದರ ಪೂರ್ವಸೂಚನೆಗಳಾಗಿದ್ದಲ್ಲಿ ಇದು ಒಳ್ಳೆಯ ಭವಿಷ್ಯದ ಮುಂಗಾಣ್ಕೆಯಲ್ಲ.’’ (‘ಮೋಹನ್‌ದಾಸ್, ಒಂದು ಸತ್ಯಕತೆ’ ಅನುವಾದ ಜಿ.ಎನ್. ರಂಗನಾಥರಾವ್, ಪು.845).
ಗಾಂಧಿ ಖಂಡಿತ ದೇಶದ್ರೋಹಿಗಳಾಗಿರಲಿಲ್ಲ. ಸ್ವಾತಂತ್ರ ಬಂದು ಭಾರತವು ಜಗತ್ತಿನಲ್ಲಿಯೇ ಶ್ರೇಷ್ಠವೆಂದು ಹೇಳಲಾಗುವ ಸಂವಿಧಾನವನ್ನು ದೇಶಕ್ಕೆ ಅರ್ಪಿಸುವಾಗ ಬಾಬಾ ಸಾಹೇಬ ಅಂಬೇಡ್ಕರ್ ಅವರು ಹೀಗೆ ಹೇಳಿದರು:

‘‘ಭಾರತದ ಸ್ವಾತಂತ್ರಕ್ಕೆ ಮುಂದೆ ಏನಾಗಬಹುದು? ಭಾರತವು ತನ್ನ ಸ್ವಾತಂತ್ರವನ್ನು ಉಳಿಸಿಕೊಳ್ಳುತ್ತದೆಯೋ ಅಥವಾ ಮತ್ತೆ ಅದನ್ನು ಕಳೆದುಕೊಳ್ಳುತ್ತದೆಯೋ?’’ ಬಿ.ಆರ್. ಅಂಬೇಡ್ಕರ್ ಅವರು ದೇಶದ್ರೋಹಿಗಳಾಗಿರಲಿಲ್ಲ. ರಾಷ್ಟ್ರಕವಿ ರವೀಂದ್ರನಾಥ ಠಾಗೂರ್ ಅವರು ಭಾರತ, ಬಾಂಗ್ಲಾದೇಶ, ಸಿಂಹಳ ಈ ಮೂರು ದೇಶಗಳ ರಾಷ್ಟ್ರಗೀತೆಗಳ ರಚನೆಗೆ ಕಾರಣರಾದವರು. ಆದರೆ ‘‘ರಾಷ್ಟ್ರವಾದವು ಮನುಷ್ಯ ನಾಗರಿಕತೆಗೆ ಅಪಾಯಕಾರಿಯಾಗಬಲ್ಲದು’’ ಎಂದು ಭಾರತದಲ್ಲಿ ಮಾತ್ರವಲ್ಲ, ಮೂರು ಬಲಾಢ್ಯ ದೇಶಗಳಲ್ಲಿ ಹೇಳಿ ಮೂರೂ ದೇಶಗಳಲ್ಲಿ ಆ ಕಾರಣದಿಂದಾಗಿ ವಿವಾದಗಳನ್ನೆದುರಿಸಿ ಅವಮಾನಿತರಾದರು ಕೂಡ. ರಾಷ್ಟ್ರವು ಕೇವಲ ವ್ಯಾಪಾರದ ಹಿತಾಸಕ್ತಿಗಾಗಿ ಕಟ್ಟುವ ಒಂದು ವ್ಯವಸ್ಥೆಯಾಗಿಬಿಡಬಹುದು ಎಂದು ಅವರು ಗಾಢವಾದ ಸಂಶಯವನ್ನಿಟ್ಟುಕೊಂಡಿದ್ದರು. ರವೀಂದ್ರನಾಥರು ದೇಶದ್ರೋಹಿಗಳೂ ಆಗಿರಲಿಲ್ಲ; ರಾಷ್ಟ್ರದ್ರೋಹಿಗಳೂ ಆಗಿರಲಿಲ್ಲ.

ಹಾಗಿದ್ದರೆ ಭಾರತದ ಸ್ವಾತಂತ್ರ ಹೋರಾಟದಲ್ಲಿ ದಾರಿದೀಪಗಳಾಗಿದ್ದ ಈ ಮೂವರು ಮಹಾತ್ಮರು ಯಾಕೆ ಹೀಗೆ ಹೇಳಿದರು? ಏಕೆಂದರೆ ಸ್ವಾತಂತ್ರವೆನ್ನುವುದು ಒಂದು ಮುಗಿದುಹೋಗುವ ಘಟನೆಯಲ್ಲ, ಅದು ಮುಕ್ತಾಯವಿಲ್ಲದ ಪ್ರಕ್ರಿಯೆ. ಗುರಿ ತಲುಪದ ಒಂದು ಪ್ರಯಾಣ. ಇಂದು ಅಪಾರ ಹಿಂಸೆ, ದ್ವೇಷ, ಘರ್ಷಣೆಗಳಿಗೆ ಕಾರಣವಾಗಿರುವುದು ಈ ತಿಳಿವಳಿಕೆಯನ್ನು ಕಳೆದುಕೊಂಡಿದ್ದರ ಫಲವಾಗಿದೆ. ಕೆಲವರಿಗೆ ಸ್ವಾತಂತ್ರವೇನೆಂದು ಆಖೈರಾಗಿ ಗೊತ್ತಾಗಿಬಿಟ್ಟಿದೆ. ಈ ರಾಷ್ಟ್ರದಲ್ಲಿ ಯಾರು ಎಲ್ಲಿರಬೇಕೆನ್ನುವುದು ಅಂತಿಮವಾಗಿ ಗೊತ್ತಾಗಿಬಿಟ್ಟಿದೆ. ಇದೇ ಇಂದಿನ ದುರಂತಗಳ ಮೂಲವಾಗಿದೆ. ಕಲ್ಯಾಣದಲ್ಲಿ ಬಸವಣ್ಣ, ಅಲ್ಲಮ ಮತ್ತು ಶರಣರನ್ನು ಭೇಟಿಯಾದ ಅಕ್ಕಮಹಾದೇವಿ ಕನ್ನಡ ಭಾಷೆ ಇರುವವರೆಗೂ ಉಜ್ವಲವಾಗಿರುವ ಜಗತ್ತಿನ ಶ್ರೇಷ್ಠ ಕಾವ್ಯವನ್ನು ಬರೆದಳು. ಆದರೆ ‘ಕಲ್ಯಾಣವನ್ನು ಹೋಗಬಾರದು’ ಅಂದರೆ ಕಲ್ಯಾಣವೆನ್ನುವ ಪವಿತ್ರವಾದ ಸ್ಥಿತಿಗೆ ತಲುಪಲು ಅರ್ಹರಾಗುವುದು ಸುಲಭವಲ್ಲ; ನಾನೂ ಇನ್ನೂ ಅರ್ಹಳಾಗಿಲ್ಲ ಎನ್ನುವ ಪ್ರಾಮಾಣಿಕ ಆತ್ಮಶೋಧನೆಯಲ್ಲಿ ತೊಡಗಿದ್ದಳು. ಈಗ ಅನೇಕರಿಗೆ ಕಲ್ಯಾಣವು ಸಿಕ್ಕ್ಕಿಬಿಟ್ಟಿದೆ- ಯಡಿಯೂರಪ್ಪನವರ ಕಚೇರಿಯಲ್ಲಿ, ಇದುವೆ ಜಗತ್ತೇ ಕಂಡಿರದ ಹನ್ನೆರಡನೇ ಶತಮಾನದ ಕ್ರಾಂತಿಯ ದುರಂತ ಅಂತ್ಯವಾಗಿದೆ.

ಕಲ್ಯಾಣ ಮತ್ತು ಸ್ವಾತಂತ್ರಗಳು ಎಂದಿಗೂ ತಲುಪಲಾಗದ ಆದರ್ಶ ಸ್ಥಿತಿಗಳು. ಜಡವಾಗಬಾರದು, ಸ್ಥಾವರವಾಗಬಾರದು. ನಿರಂತರವಾಗಿ ಸಕಲ ಜೀವಿಗಳ ಲೇಸನ್ನು ಬಯಸಬೇಕು ಎನ್ನುವ ಎಚ್ಚರವನ್ನು ಅವು ನಮಗೆ ಕೊಡುತ್ತವೆ. ಆದ್ದರಿಂದ ಸ್ವಾತಂತ್ರ ದಿನಾಚರಣೆಯಂದು ಎರಡು ಕೆಲಸಗಳನ್ನು ಮಾಡಬೇಕಿದೆ. ಮೊದಲನೆಯದು, ಸಂಭ್ರಮಪಡುವುದು. ಅಲ್ಲಿಂದ ಇಲ್ಲಿಯವರೆಗೆ ಪ್ರಯಾಣದ ಒಂದು ಹಂತವನ್ನು ತಲುಪಿದ್ದೇವಲ್ಲ ಎಂದು ಎಲ್ಲರೂ ಸೇರಿ ಖುಷಿಪಡುವುದು. ಸ್ವಾತಂತ್ರ ಬಂದಾಗ ಈ ದೇಶದ ಶೇಕಡಾ 21ರಷ್ಟು ಮಾತ್ರ ಅಕ್ಷರಸ್ಥರಾಗಿದ್ದರು. ಈಗ ಶೇಕಡಾ 77ರಷ್ಟು ಅಕ್ಷರಸ್ಥರಿದ್ದಾರೆ. ಶೇಕಡಾ 2ರಷ್ಟು ಹೆಣ್ಣುಮಕ್ಕಳು ಅಂದು ಶಾಲೆಗೆ ಹೋಗುತ್ತಿದ್ದರು. ಸಾವಿತ್ರಿಬಾಯಿ ಫುಲೆ ಹೆಣ್ಣುಮಕ್ಕಳಿಗೆ, ಶೂದ್ರರಿಗೆ ಪಾಠ ಹೇಳಲು ಶಾಲೆಗೆ ಹೊರಟರೆ ಸನಾತನಿಗಳು ಅವರ ಮೇಲೆ ಕೆಸರು, ಸೆಗಣಿ ಎರಚುತ್ತಿದ್ದರು. ಇಂದು ಒಲಿಂಪಿಕ್ಸ್‌ನಲ್ಲಿ ಹೆಣ್ಣು ಮಕ್ಕಳದೇ ದರಬಾರು. ಗಂಡಸರೂ ಸೇರಿದಂತೆ ಒಲಿಂಪಿಕ್ಸ್‌ನಲ್ಲಿ ಭಾಗ ವಹಿಸಿದ ಬಹುಪಾಲು ಆಟಗಾರರು ಹಳ್ಳಿಗಳಿಂದ, ರೈತರ ಮನೆಗಳಿಂದ ಬಂದವರು. ಹಾಕಿ ಸ್ಟಿಕ್ ಕೊಳ್ಳಲು ದುಡ್ಡಿಲ್ಲದ ಮನೆಗಳಿಂದ ಬಂದವರು. ಸೌದೆಯನ್ನು ಹೊತ್ತು ತಂದ ಹೆಣ್ಣು ಮಕ್ಕಳು. ಅತ್ಯದ್ಭುತ ಹಾಕಿ ಆಟಗಾರ್ತಿ ದಲಿತ ಸಮುದಾಯದವಳು. ಇವರ ಸಾಧನೆಯ ಹಿಂದೆ ಸ್ವಾತಂತ್ರವಿದೆ. ಭಾರತವೆನ್ನುವ ಬಹುಮುಖಿ, ಬಹುಧರ್ಮೀಯ, ಸಹಬಾಳ್ವೆಯ ದೇಶದ ಸಾಂಘಿಕವಾದ ಪ್ರಯತ್ನವಿದೆ.

ಎರಡನೇ ಕೆಲಸವೆಂದರೆ ಅಭಿಮಾನ, ಸಂಭ್ರಮಗಳೊಂದಿಗೆ ಆತಂಕ, ವಿಷಾದಗಳನ್ನು ಅಷ್ಟೇ ಪ್ರಾಮಾಣಿಕವಾಗಿ ಇಟ್ಟುಕೊಳ್ಳುವುದು. ದಿಲ್ಲಿಯಲ್ಲಿ ಒಂದು ಪುಟ್ಟ ದಲಿತ ಹುಡುಗಿಯನ್ನು ಅಮಾನುಷವಾಗಿ ಮಾನಭಂಗಮಾಡಿ ಕೊಲ್ಲಲಾಗಿದೆ. ಇಂತಹ ಒಂದು ಘಟನೆ ನಡೆದರೂ ಸ್ವಾತಂತ್ರಕ್ಕಾಗಿ ಮನೆ, ಮಠ, ಪ್ರಾಣಗಳನ್ನು ಕಳೆದುಕೊಂಡ ಕೋಟಿಗಟ್ಟಲೆ ಅನಾಮಧೇಯ ಭಾರತೀಯರಿಗೆ ಅವಮಾನವಲ್ಲವೇ? ಏಕೆಂದರೆ ಸ್ವಾತಂತ್ರವೆಂದರೆ ಒಂದು ಘಟನೆಯಲ್ಲ, ಸಮಗ್ರವಾದ ಸಮಾನತೆ ಹಾಗೂ ಬಂಧುತ್ವವನ್ನು ಬಯಸುವ ಒಂದು ಮನೋಸ್ಥಿತಿ. ಮನುಷ್ಯ ಇತಿಹಾಸದಲ್ಲಿಯೇ ಅತಿ ಬಲಿಷ್ಠವಾದ ಸಾಮ್ರಾಜ್ಯಶಾಹಿಯನ್ನು ಅಹಿಂಸೆಯಿಂದ ಸೋಲಿಸಿ ಸ್ವಾತಂತ್ರ ಪಡೆದ ನಾವು ಜಾತಿ, ಅಸಮಾನತೆ, ಲಿಂಗದ್ವೇಷಗಳ ಸರಪಣಿಗಳಿಂದ ನಮ್ಮನ್ನು ನಮ್ಮ ಮನಸ್ಸುಗಳನ್ನು ಬಿಗಿದುಕೊಳ್ಳಬೇಕೇ? ಹಾಗೆ ಬಿಗಿದುಕೊಂಡರೆ, ‘‘ಯಾರಿಗೆ ಬಂತು, ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ’’ ಎಂದು ಕೇಳಿ ಈಗ ಹೊರಟುಹೋದ ಕವಿ ಸಿದ್ದಲಿಂಗಯ್ಯನವರಿಗೆ ಏನು ಹೇಳುವುದು? ‘‘ಕಡಲುಗಳ್ಳರು ಹೋಗಿ, ಒಡಲುಗಳ್ಳರು ಬಂದರು’’ ಎಂದು ಎಚ್ಚರಿಸಿದ ಕವಿ ರಾಮಚಂದ್ರ ಶರ್ಮರಿಗೆ ಏನು ಹೇಳುವುದು? ಇತ್ತೀಚೆಗೆ ನಾವು ಎಷ್ಟು ಅಸೂಕ್ಷ್ಮವಾಗಿಬಿಟ್ಟಿದ್ದೇವೆ ಎಂದರೆ ಎಲ್ಲವನ್ನೂ ರಾಜಕೀಯಕ್ಕೆ ಇಳಿಸಿಬಿಡುತ್ತೇವೆ. ಕುವೆಂಪು ಹೇಳಿದಂತೆ ರಾಷ್ಟ್ರವೆನ್ನುವುದು ‘ಒಂದು ಚಿತ್‌ಭೂಮಿ’. ಅದು ವಾಸ್ತವ ಸಾಮಾಜಿಕ ಸ್ಥಿತಿಗಳನ್ನು ಒಳಗೊಂಡಂತೆ ಮನಸ್ಸಿನ ಸ್ಥಿತಿಯನ್ನು ಪ್ರಜ್ಞೆಯನ್ನು ಒಳಗೊಂಡಿರುತ್ತದೆ. ಇವುಗಳನ್ನು ಕಾವ್ಯ, ಕಲೆ, ಭಾಷೆ, ಸಮುದಾಯದ ಮಾತುಕತೆಗಳು ಕಟ್ಟಿಕೊಡುತ್ತವೆ. ಇವುಗಳನ್ನೇ ಬಿಟ್ಟುಕೊಟ್ಟರೆ ಇನ್ನಾವ ಸ್ವಾತಂತ್ರದ ಬಗ್ಗೆ ನಾವು ಮಾತನಾಡುತ್ತಿದ್ದೇವೆ?

ಸ್ವಾತಂತ್ರದ ಕಥನಗಳನ್ನು ರಚಿಸುವುದರಲ್ಲಿಯೇ ನಾವು ಎಡವಿಬಿಟ್ಟೆವು. ಸ್ವಾತಂತ್ರ ಹೋರಾಟವನ್ನು ಕೆಲವು ವರ್ಚಸ್ವಿ ನಾಯಕರ ಜೀವನ ಚರಿತ್ರೆಗೆ ಇಳಿಸಿಬಿಟ್ಟೆವು. ಅದರಿಂದಾಗಿ ಈಗಲೂ ನಾಯಕರ ಆರಾಧನೆಯೆನ್ನುವ ರಾಷ್ಟ್ರೀಯ ಮನೋರೋಗಕ್ಕೆ ತುತ್ತಾಗಿಬಿಟ್ಟೆವು. ಸ್ವಾತಂತ್ರದ ಹೋರಾಟಕ್ಕೆ ಸಾವಿರಾರು ನದಿಗಳು ಎನ್ನುವ ಚರಿತ್ರೆಯ ಸತ್ಯವನ್ನು ನಾವು ಮರೆತುಬಿಟ್ಟೆವು. ಸಾವಿರಾರು ಆದಿವಾಸಿಗಳು, ಬುಡಕಟ್ಟಿನ ಜನರು, ರೈತರು, ಕಾರ್ಮಿಕರು, ಮಹಿಳೆಯರು ಈ ಹೋರಾಟದಲ್ಲಿ ಭಾಗಿಗಳಾಗಿದ್ದರು. ಭಗತ್‌ಸಿಂಗ್‌ರಂತಹ ಕ್ರಾಂತಿಕಾರಿಗಳು, ಭೂಗತ ಹೋರಾಟಗಾರರೂ ಇದರಲ್ಲಿ ಭಾಗಿಯಾಗಿದ್ದರು. ಇವರೆಲ್ಲರ ಅಪೇಕ್ಷೆ ಕೇವಲ ಬ್ರಿಟಿಷರನ್ನು ಈ ದೇಶದಿಂದ ಹೊರಹಾಕುವುದು ಆಗಿರಲಿಲ್ಲ. ಎಲ್ಲರಿಗೂ ಇದ್ದ ಕಳಕಳಿ, ಪ್ರಶ್ನೆ ಏನೆಂದರೆ ಸ್ವಾತಂತ್ರ ಬಂದಮೇಲೆ ಈ ದೇಶ ಹೇಗಿರಬೇಕು ಎನ್ನುವುದು. ಈ ಪ್ರಶ್ನೆಗೆ ಉತ್ತರವನ್ನು ಹುಡುಕುವ ಕೆಲಸದಲ್ಲಿ ಇಡೀ ದೇಶವೇ ಒಂದು ಅಗಾಧವಾದ ಶಿಕ್ಷಣದ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿತು.

ಹೌದು. ಅದು ಕಲಿಯುವ, ಅರಿಯುವ ಕೆಲಸವಾಗಿತ್ತು. ಉಳುವವನೇ ಭೂಮಿಯ ಒಡೆಯನಾಗುತ್ತಾನೆಯೆ? ರೈತನು ಬಡತನ, ಸಾಲ, ಹಸಿವು ಇವುಗಳಿಲ್ಲದೆ ಘನತೆಯಿಂದ ಬದುಕುತ್ತಾನೆಯೆ ಎಂದು ರೈತರು ಕೇಳಿಕೊಂಡರು. ಶ್ರಮಜೀವಿಗಳಿಗೆ ಈ ದೇಶ ಕಟ್ಟುವುದರಲ್ಲಿ ಸಮಪಾಲು ಇರುವಂತೆ, ಅವರು ಸೃಷ್ಟಿಸುವ ಸಂಪತ್ತಿನಲ್ಲಿಯೂ ಸಮಪಾಲು ಇರುತ್ತದೆಯೇ ಎಂದು ಕಾರ್ಮಿಕರು ಕೇಳಿಕೊಂಡರು. ಪಂಚಮರೆಂದು ಅನ್ನಿಸಿಕೊಂಡ ನಾವು ದೇಶದ ಪ್ರಥಮರು ಆಗುವುದು ಯಾವಾಗ ಎಂದು ದಲಿತರು ಕೇಳಿಕೊಂಡರು. ಭಾರತಮಾತೆಯಾಗುವುದಲ್ಲ, ಸ್ವಾಭಿಮಾನ, ಸ್ವಾತಂತ್ರ, ಸಮಾನತೆ ಪಡೆಯುವ ಸ್ತ್ರೀಯಾಗುವ ಅವಕಾಶ ಅದರಲ್ಲಿದೆಯೇ ಎಂದು ಮಹಿಳೆಯರು ಕೇಳಿಕೊಂಡರು. ಹೀಗಾಗಿ ಸ್ವಾತಂತ್ರವೆಂದರೆ ಅನೇಕ ಸಮುದಾಯಗಳು, ವರ್ಗಗಳು ಕೇಳಿದ ಅನೇಕ ಪ್ರಶ್ನೆಗಳ ಮೊತ್ತವೂ ಆಗಿತ್ತು. ಇವರೆಲ್ಲರೂ ತಮ್ಮದೇ ಆದ ಕಾಣ್ಕೆಗಳನ್ನು ಕಂಡರು. ಕೆಂಪುಕೋಟೆಯಲ್ಲಿ ಭಾರತದ ಧ್ವಜವು ಹಾರಿದ ಕೂಡಲೇ ಇದೆಲ್ಲವೂ ಸಾಧ್ಯವಾಗುತ್ತದೆಯೆಂದು ಯಾರೂ ನಂಬಿರಲಿಲ್ಲ. ಆದರೆ ಅದು ಸಾಧ್ಯವೆನ್ನುವ ಯುಗದ ಉತ್ಸಾಹದಲ್ಲಿ ಎಲ್ಲರೂ ದುಡಿದರು.

ಅವರೆಲ್ಲರೂ ಕಂಡ ಕನಸು ಈಗ ಒಂದು ದುಃಸ್ವಪ್ನವಾಗಿ ಬಿಟ್ಟಿತೇ? ಹಳವಂಡವಾಗಿಬಿಟ್ಟಿತೇ ಎನ್ನುವ ತೀವ್ರ ಆತಂಕದಲ್ಲಿ ನಾವಿದ್ದೇವೆ. ಏಕೆಂದರೆ ಎಲ್ಲರೂ ಆಶಿಸಿದ ಹಲವು ಬಗೆಯ ಸ್ವಾತಂತ್ರಗಳು ಅಪಾಯದಲ್ಲಿವೆ. ಸಮಾನತೆಯ ಬದಲು ಬಂಡವಾಳಶಾಹಿಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಜಾಗತಿಕ ಮಟ್ಟದ ರಾಕ್ಷಸಿ ಶಕ್ತಿಯ ಬಂಡವಾಳಶಾಹಿಯು ಎಲ್ಲಾ ಸ್ವಾತಂತ್ರಗಳನ್ನು ಸರ್ವ ನಾಶಮಾಡುವುದರ ಬಗ್ಗೆ ಸಂಶಯವೇ ಇಲ್ಲ. ಸ್ವಾತಂತ್ರಗಳ ವಿನಾಶವೇ ಅದರ ತರ್ಕ ಮತ್ತು ಏಕಮಾತ್ರ ಗುರಿಯಾಗಿದೆ. ವಂದನಾ ಶಿವಾ ಹೇಳಿರುವಂತೆ ಅದು ಇಡೀ ವಿಶ್ವವನ್ನು ‘‘1% ಛ್ಟಿಠ್ಠ ಚ್ಝ್ಝ’’ ಎನ್ನುವ ಸ್ಥಿತಿಗೆ ತಳ್ಳುತ್ತಿದೆ. ಅಂದರೆ ಅಂತಿಮವಾಗಿ ಜಗತ್ತಿನ ಜನಸಂಖ್ಯೆಯ ಶೇ. 1ಕ್ಕಿಂತ ಕಡಿಮೆ ಸಂಖ್ಯೆಯ ಬಂಡವಾಳಶಾಹಿಗಳು ಉಳಿದ ಶೇ.99 ಜನರನ್ನು ಅಸಮಾನತೆ ಮತ್ತು ಅಸ್ವಾತಂತ್ರಕ್ಕೆ ತಳ್ಳುವುದು ಖಚಿತ. ಹೇಗೆ ಪರಿಸರ ವಿನಾಶದಿಂದ ಇಡೀ ಭೂಮಿಯೇ ನಾಶವಾಗುವುದು ಸಾಧ್ಯ ಎನ್ನುವುದನ್ನು ನಾವು ನಂಬಲು ಸಿದ್ಧರಿಲ್ಲವೋ ಹಾಗೆಯೇ ವಂದನಾ ಶಿವಾ ಹೇಳಿದ ಸಾಧ್ಯತೆಯನ್ನು ನಂಬುತ್ತಿಲ್ಲ. ಆದರೆ ಅದು ವಾಸ್ತವ. ಕೋಟಿಗಟ್ಟಲೆ ರೈತರ ಹಿತಾಸಕ್ತಿಯನ್ನು ಇಬ್ಬರು ಬಂಡವಾಳಶಾಹಿಗಳಿಗಾಗಿ ಬಲಿಕೊಡಲು ಪ್ರಜಾಪ್ರಭುತ್ವವನ್ನೇ ನಾಶ ಮಾಡುವುದೆಂದರೆ ಮತ್ತೇನು? ಕೋಟಿಗಟ್ಟಲೇ ಕಾರ್ಮಿಕರ ಮೇಲೆ ಬಂಡವಾಳಶಾಹಿಗಳಿಗೋಸ್ಕರ ಕರಾಳ ಕಾನೂನುಗಳನ್ನು ಹೇರುವುದೆಂದರೇನು? ಸ್ವಾತಂತ್ರದಿಂದ ಸ್ವಾತಂತ್ರ ವಿನಾಶದ ಕಡೆಗೆ ಇವು ನಾವು ಇಡುತ್ತಿರುವ ಹೆಜ್ಜೆಗಳಲವೇ? ಇದು ನಮಗೆ ಅರ್ಥವಾಗುತ್ತಿಲ್ಲವೇಕೆಂದರೆ ನಾವು ಕೋಮುವಾದದ, ಹುಸಿ ರಾಷ್ಟ್ರೀಯತೆಯ ಸಮೂಹ ಸನ್ನಿಗೆ ಒಳಗಾಗಿ ಇಡೀ ದೇಶವೇ ಮಂಪರಿನ ಸ್ಥಿತಿಯಲ್ಲಿದೆ.

ಕೋಮು ದ್ವೇಷದಿಂದ ಒಪ್ಪೊತ್ತಿನ ಕೂಳು ಪಡೆದ ಉದಾಹರಣೆ ಮನುಷ್ಯ ಇತಿಹಾಸದಲ್ಲಿಯೇ ಇಲ್ಲ. ಗಾಂಧಿಯವರ ಮೇಲೆ ಬ್ರಿಟಿಷ್ ಸರಕಾರವು ದೇಶದ್ರೋಹದ ಆಪಾದನೆಯನ್ನು ಮಾಡಿ ನ್ಯಾಯ ವಿಚಾರಣೆ ನಡೆದಾಗ ಅನ್ಯಾಯ ಮಾಡುವ ಪ್ರಭುತ್ವವನ್ನು, ಸರಕಾರವನ್ನು ವಿರೋಧಿಸುವುದು ದೇಶದ್ರೋಹವಾದರೆ ನಾನು ಅಂತಹ ದೇಶದ್ರೋಹವನ್ನು ಮತ್ತೆ ಮತ್ತೆ ಮಾಡಲು ಬಯಸುತ್ತೇನೆ ಎಂದು ನಿರ್ಧರಿಸಿದರು. ವಿಪರ್ಯಾಸವೆಂದರೆ ಕ್ರೂರ ದಬ್ಬಾಳಿಕೆಗಾಗಿ ಕಾನೂನುಗಳನ್ನು ರಚಿಸಿಕೊಂಡಿದ್ದ ಬ್ರಿಟಿಷ್ ಸರಕಾರವು ಅವರಿಗೆ ಶಿಕ್ಷೆ ಕೊಟ್ಟಿತೇ ಹೊರತು ಅವರ ಪ್ರಾಣ ತೆಗೆಯಲು ಪ್ರಯತ್ನಿಸಲಿಲ್ಲ; ಅವರೊಬ್ಬರೇ ಅಲ್ಲ, ದೇಶದ ಸಾವಿರಾರು ಅನಾಮಿಕ ಸಾಮಾನ್ಯರು ಸಾಮ್ರಾಜ್ಯಶಾಹಿ ಪ್ರಭುತ್ವದ ವಿರುದ್ಧ ಬಂಡಾಯ ಮಾಡಿದರು. ಈಗ ಹೋರಾಟ ಮಾಡುತ್ತಿರುವ ರೈತರಿಗೆ, ಕಾರ್ಮಿಕರಿಗೆ ಇರುವುದೊಂದೇ ದೇಶ- ಭಾರತ. ಕೊರೋನ ಪಿಡುಗು ಬಂದ ಕೂಡಲೇ ಖಾಸಗಿ ವಿಮಾನಗಳಲ್ಲಿ ವಿದೇಶಗಳಿಗೆ ಹಾರುವ ಬಂಡವಾಳಶಾಹಿಗಳು ಅವರಲ್ಲ. ಈ ದೇಶಕ್ಕೆ ಸ್ವಾತಂತ್ರವನ್ನು ತಂದವರು ಅವರೇ. ಹೀಗಾಗಿ ಈಗ ಬಂಡವಾಳಶಾಹಿಯ ವಿರುದ್ಧ ಸ್ವಾತಂತ್ರವನ್ನು ಕೇಳುತ್ತಿದ್ದಾರೆ.

ಪಕ್ಷ, ಸಿದ್ಧಾಂತಗಳ ಭರಾಟೆಯಲ್ಲಿ ನಾವು ಮರೆಯಬಾರದು. ಮನುಷ್ಯ ನಾಗರಿಕತೆಯ ಇತಿಹಾಸದಲ್ಲಿ ಸ್ವಾತಂತ್ರವು ಸಹಜವಾಗಿ, ಸುಲಭವಾಗಿ ಸಿಕ್ಕ ಒಂದು ಉದಾಹರಣೆಯೂ ಇಲ್ಲ. ಅದು ಸುಲಭವಾಗಿ ಉಳಿದುಕೊಂಡಿರುವ ಒಂದೇ ಉದಾಹರಣೆಯೂ ಇಲ್ಲ. ಸದಾ ಎಚ್ಚರವಾಗಿ, ನಿರಂತರವಾದ ಪ್ರಯೋಗಗಳಿಂದ, ಸಂವಾದಗಳ ಮೂಲಕ, ವಿವೇಕದ ಮೂಲಕ ಅದನ್ನು ಉಳಿಸಿಕೊಳ್ಳಬೇಕಾಗಿದೆ. ಯಾವ ಸ್ವಾತಂತ್ರಕ್ಕೂ ಗ್ಯಾರಂಟಿ ಅವಧಿ ಇರುವುದಿಲ್ಲ. ಸ್ವಾತಂತ್ರ ಮತ್ತು ಅಸ್ವಾತಂತ್ರಗಳ ನಡುವಿನ ಗಡಿರೇಖೆಯೂ ಅಷ್ಟೇನೂ ಖಚಿತವಲ್ಲ. ಹೀಗಾಗಿ ಈಗಿನ ಸವಾಲೆಂದರೆ ಸ್ವಾತಂತ್ರ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಮತ್ತು ಸಂಸ್ಥೆಗಳನ್ನು ಕಾಪಾಡುವುದಾಗಿದೆ. ಸಮಾನತೆಯ ಅಪೇಕ್ಷೆಯನ್ನು ಭದ್ರವಾಗಿ ಉಳಿಸಿಕೊಳ್ಳಬೇಕಾಗಿದೆ. ಸ್ವಾತಂತ್ರದ ಶತೃಗಳೆಂದರೆ ಬಂಡವಾಳಶಾಹಿ ಮತ್ತು ಕೋಮುವಾದಗಳು. ಆದ್ದರಿಂದಲೇ ಸ್ವಾತಂತ್ರ ಹೋರಾಟವು ಇನ್ನೂ ಮುಗಿದಿಲ್ಲ. ಆರಂಭವಾಗಿದೆ ಅಷ್ಟೆ.

Writer - ರಾಜೇಂದ್ರ ಚೆನ್ನಿ

contributor

Editor - ರಾಜೇಂದ್ರ ಚೆನ್ನಿ

contributor

Similar News