ಮಧ್ಯರಾತ್ರಿಯ ಆ ಶ್ರೇಷ್ಠ ಭಾಷಣ....

Update: 2021-08-15 09:23 GMT
photo: twitter/@Vaishal29629343

ದೇಶದ ಮೊದಲ ಸ್ವಾತಂತ್ರದಿನದ ಮುನ್ನಾದಿನದಂದು (ಆಗಸ್ಟ್ 14, 1947) ನಿಯೋಜಿತ ಪ್ರಧಾನಿ ಜವಾಹರಲಾಲ್ ನೆಹರೂ ಮರುದಿನ ಮಧ್ಯರಾತ್ರಿ ವೇಳೆಗೆ ಮಾಡಲಿದ್ದ ತಮ್ಮ ಭಾಷಣವನ್ನು ಬರೆಯಲು ಕೂತರು. ದಿನವಿಡೀ ನೂರಾರು ಕೆಲಸಗಳು. ರಾತ್ರಿ ಹತ್ತು ಗಂಟೆಗೆ ಭಾಷಣ ಬರೆಯಲೆಂದು ಕೂತಾಗ ಕುಟುಂಬ ಸದಸ್ಯರೆಲ್ಲ ಒಟ್ಟಾಗಿ ಒತ್ತಾಯಪೂರ್ವಕವಾಗಿ ಊಟಕ್ಕೆ ಕರೆದರು. ಊಟಕ್ಕೆ ಕೂತಾಗ ಲಾಹೋರ್‌ನಿಂದ ತುರ್ತು ದೂರವಾಣಿ ಕರೆ. ಫೋನ್‌ನಲ್ಲೇ ಅರ್ಧ ಗಂಟೆ ಕಳೆದು ಹೋಯಿತು.

ಲಾಹೋರ್‌ನಲ್ಲಿ ನಡೆದಿದ್ದ ಗಲಭೆಗಳು (ದೇಶ ವಿಭಜನೆಯ ಗಲಭೆ) ದೂರವಾಣಿ ಕರೆಯ ವಿಷಯವಾಗಿತ್ತು. ಈ ಸುದ್ದಿ ಕೇಳಿ ನೆಹರೂ ಬಹಳ ನೊಂದುಕೊಂಡರು. ತಳವಿಲ್ಲದ ಕೆರೆಯಲ್ಲಿ ಮುಳುಗುತ್ತಿರುವ ಸ್ಥಿತಿ ನೆಹರೂ ಅವರದಾಗಿತ್ತು. ಕೊನೆಗೆ ಅವರಿಗೆ ಭಾಷಣ ಬರೆಯುವಷ್ಟು ವ್ಯವಧಾನವಾಗಲಿ, ಶಕ್ತಿಯಾಗಲಿ, ಸಮಯವಾಗಲಿ ಲಭಿಸಲಿಲ್ಲ.

 ಆದರೆ, ಮರುದಿನ ಮಧ್ಯರಾತ್ರಿ ಹೊತ್ತಿಗೆ ನೆಹರೂ ತಮ್ಮನ್ನು ತಾವೇ ಸಮರ್ಥಿಸಿಕೊಳ್ಳುವ ಸ್ಥಿತಿಯಲ್ಲಿದ್ದರು. ಅತ್ಯಂತ ಶ್ರೇಷ್ಠವಾದ ಭಾಷಣವೊಂದನ್ನು ಅವರು ಮಾಡಿದ್ದರು. ನಾಲಿಗೆಯಿಂದ ಶಬ್ದಗಳು ಸಂದರ್ಭೋಚಿತವಾಗಿ ಹರಿದುಬಂದವು. ನುಡಿಗಟ್ಟುಗಳು ಹೃದಯಕ್ಕೆ ನಾಟುವಂತಿದ್ದವು. ಅವರ ಮಾತಿನ ಹುರುಪು ಸಂಸತ್‌ಭವನದ ಮೂಲೆಮೂಲೆಯನ್ನು ಮುಟ್ಟುವಂತಿತ್ತು.

ಭಾರತದ ಪ್ರಥಮ ಪ್ರಧಾನಿಯೊಬ್ಬರು ಅತ್ಯುತ್ತಮ ಭಾಷಣವೊಂದನ್ನು ಮಾಡುತ್ತ ಜಗತ್ತಿನಾದ್ಯಂತ ಕೋಟ್ಯಂತರ ಜನರ ಹೃದಯವನ್ನು ತಟ್ಟಿದ್ದರು ಎಂಬುದು ನಾವೆಲ್ಲ ಹೆಮ್ಮೆ ಪಡುವಂತಹ ಸಂಗತಿಯಾಗಿದೆ. ಅಂದು ನೆಹರೂ ಮಾಡಿದ್ದ ಭಾಷಣವು 20ನೇ ಶತಮಾನದ ಶ್ರೇಷ್ಠ ಭಾಷಣಗಳ (11ನೇ ಸ್ಥಾನ) ಸಾಲಿಗೆ ಸೇರಿದೆ. ಆ ಭಾಷಣದ ಆಯ್ದ ತುಣುಕುಗಳು ಇಲ್ಲ್ಲಿವೆ.

... ಇಂದು ರಾತ್ರಿ 12 ಗಂಟೆಗೆ ಇಡೀ ಜಗತ್ತು ನಿದ್ರಿಸುತ್ತಿದೆ. ಆದರೆ ಭಾರತವು ಸ್ವಾತಂತ್ರ ಹಾಗೂ ಬದುಕಿನ ಹೊಸ ಮುಂಜಾವಿನೊಂದಿಗೆ ಎದ್ದೇಳಲಿದೆ. ಇಂತಹ ಸುಸಂದರ್ಭ ಇತಿಹಾಸದಲ್ಲಿ ತೀರಾ ಅಪರೂಪ. ನಾವು ಹಳೆಯದನ್ನು ತೊರೆದು ಹೊಸತಿನೆಡೆಗೆ ಸಾಗಿದಾಗ, ಯುಗವೊಂದು ಅಂತ್ಯಗೊಂಡಾಗ ಹಾಗೂ ಹಲವು ವರ್ಷಗಳಿಂದ ಶೋಷಿಸಲ್ಪಟ್ಟ ದೇಶವೊಂದರ ಆತ್ಮವು, ಈಗ ಮಾತನಾಡುತ್ತಿದೆ..

ಈ ಪವಿತ್ರ ಕ್ಷಣದಲ್ಲಿ ಭಾರತ ಹಾಗೂ ಅದರ ಜನತೆಯ ಸೇವೆಗೆ ನಮ್ಮನ್ನು ಸಮರ್ಪಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡುವ ಸುಯೋಗ ನಮಗೆ ದೊರೆತಿದೆ ಮತ್ತು ಇದಕ್ಕಿಂತಲೂ ಮಿಗಿಲಾಗಿ, ಇಡೀ ಮಾನವಕುಲದ ಸೇವೆಗೈಯುವ ಪ್ರತಿಜ್ಞೆಯನ್ನು ಕೈಗೊಳ್ಳುತ್ತಿದ್ದೇವೆ....

***

...ಇಂದು ನಾವು ಈ ಸಾಧನೆಯ ಉತ್ಸವವನ್ನು ಆಚರಿಸುತ್ತಿದ್ದೇವೆ. ಇದೊಂದು ಹೊಸ ಅವಕಾಶವನ್ನು ತೆರೆದಿಡುವ ಹೆಜ್ಜೆಯಾಗಿದೆ. ಇದಕ್ಕಿಂತಲೂ ಮಿಗಿಲಾದ ಗೆಲುವು ಹಾಗೂ ಸಾಧನೆಗಳು ನಮಗಾಗಿ ಕಾಯುತ್ತಿವೆ. ಈ ಅವಕಾಶವನ್ನು ಮನನ ಮಾಡಿಕೊಳ್ಳಲು ಹಾಗೂ ಭವಿಷ್ಯದ ಸವಾಲನ್ನು ಸ್ವೀಕರಿಸುವಷ್ಟು ದೃಢತೆ ಹಾಗೂ ಬೌದ್ಧಿಕತೆ ನಮ್ಮಲ್ಲಿದೆಯೇ?.

ಸ್ವಾತಂತ್ರ ಹಾಗೂ ಅಧಿಕಾರವು ನಮಗೆ ಹೊಣೆಗಾರಿಕೆಯನ್ನು ತಂದುಕೊಡುತ್ತದೆ. ಈ ಹೊಣೆಗಾರಿಕೆಯು ಈಗ ಭಾರತದ ಸಾರ್ವಭೌಮ ಜನತೆಯನ್ನು ಪ್ರತಿನಿಧಿಸುವಂತಹ ಸಾರ್ವಭೌಮ ಘಟಕವೊಂದರ ಮೇಲಿದೆ. ಸ್ವಾತಂತ್ರದ ಜನನಕ್ಕೆ ಮುನ್ನ ನಾವು ಎಲ್ಲಾ ರೀತಿಯ ನೋವನ್ನು ಅನುಭವಿಸಿದ್ದೇವೆ. ಈ ನೋವಿನ ನೆನಪಿನಿಂದಾಗಿ ನಮ್ಮ ಹೃದಯಗಳು ಭಾರವಾಗಿವೆ. ಕೆಲವೊಂದು ನೋವುಗಳು ಈಗಲೂ ಮುಂದುವರಿದಿವೆ. ಏನೇ ಇರಲಿ, ಭೂತಕಾಲವು ಮುಕ್ತಾಯಗೊಂಡಿದೆ ಹಾಗೂ ಭವಿಷ್ಯವು ನಮ್ಮನ್ನು ಕೈಬೀಸಿ ಕರೆಯುತ್ತಿದೆ. ಆ ಭವಿಷ್ಯತ್ತು ನಮಗೆ ಆರಾಮವಾಗಿರಲು ಅಥವಾ ನೆಮ್ಮದಿಯಿಂದ ಕುಳಿತುಕೊಳ್ಳಲು ಇರುವುದಕ್ಕಲ್ಲ. ಬದಲಿಗೆ ನಿರಂತರವಾಗಿ ಪರಿಶ್ರಮ ಪಡುವುದಕ್ಕೆ ಇರುವಂತಹದ್ದಾಗಿದೆ. ಹಾಗಾದಲ್ಲಿ ಮಾತ್ರ ನಾವು ಪದೇ ಪದೇ ಘೋಷಿಸುತ್ತಿದ್ದ ಹಾಗೂ ಈಗಲೂ ಘೋಷಿಸುತ್ತಿರುವ ವಾಗ್ದಾನವನ್ನು ಈಡೇರಿಸಲು ಸಾಧ್ಯವಾಗಲಿದೆ. ಭಾರತದ ಸೇವೆಯೆಂದರೆ ಯಾತನೆಗಳನ್ನು ಅನುಭವಿಸುತ್ತಿರುವ ಕೋಟ್ಯಂತರ ಜನರ ಸೇವೆಯಾಗಿದೆ. ಬಡತನ ಹಾಗೂ ಅಜ್ಞಾನವನ್ನು ತೊಲಗಿಸುವುದು, ರೋಗ ಮತ್ತು ಅಸಮಾನತೆಯನ್ನು ಕೊನೆಗೊಳಿಸುವುದೆಂಬುದೇ ಇದರ ಅರ್ಥವಾಗಿದೆ.

ಪ್ರತಿಯೊಬ್ಬನ ಕಣ್ಣೀರನ್ನೂ ಒರೆಸುವುದೇ ನಮ್ಮ ತಲೆಮಾರಿನ ಮಹಾನ್ ವ್ಯಕ್ತಿಯ ಮಹತ್ವಾ ಕಾಂಕ್ಷೆಯಾಗಿದೆ. ಬಹುಶಃ ಅದು ನಮಗೆ ಸಾಧ್ಯವಾಗದೇ ಇರಬಹುದು. ಆದರೆ ಎಲ್ಲಿಯವರೆಗೆ ಕಣ್ಣೀರು ಹಾಗೂ ಯಾತನೆ ಇರುವುದೋ ಅಲ್ಲಿಯವರೆಗೆ ನಮ್ಮ ಕೆಲಸ ಮುಗಿಯುವುದಿಲ್ಲ.

ಇದಕ್ಕಾಗಿ ನಾವು ದುಡಿಯಬೇಕಾಗಿದೆ ಹಾಗೂ ಕಠಿಣವಾದ ಪರಿಶ್ರಮಪಡಬೇಕಾಗಿದೆ. ಇಲ್ಲದಿದ್ದಲ್ಲಿ ನಮ್ಮ ಕನಸುಗಳು ಸಾಕಾರಗೊಳ್ಳಲಾರವು.

****

...ಕಾರ್ಮುಗಿಲುಗಳು ನಮ್ಮನ್ನು ಸುತ್ತುವರಿದಿದ್ದರೂ, ನೋವುತುಂಬಿದ ಹಾಗೂ ಕಠಿಣವಾದ ಸಮಸ್ಯೆಗಳು ನಮ್ಮನ್ನು ಆವರಿಸಿದ್ದರೂ ನಾವು ಆ ಸ್ವಾತಂತ್ರವನ್ನು ಸದಾ ಆನಂದಿಸೋಣ. ಆದರೆ ಸ್ವಾತಂತ್ರವು ನಮಗೆ ಹೊಣೆಗಾರಿಕೆಗಳನ್ನು ಹಾಗೂ ಹೊರೆಗಳನ್ನು ತರುತ್ತದೆ. ಮುಕ್ತ ಹಾಗೂ ಶಿಸ್ತುಬದ್ಧ ಪ್ರಜೆಗಳಾಗಿ ನಾವು ಅವುಗಳನ್ನು ಎದುರಿಸಬೇಕಾಗಿದೆ.... ಭವಿಷ್ಯವು ನಮ್ಮನ್ನು ಕರೆಯುತ್ತಿದೆ. ನಾವು ಎಲ್ಲಿಗೆ ಸಾಗಬೇಕು ಹಾಗೂ ಯಾವುದಕ್ಕೆ ಶ್ರಮಿಸಬೇಕಾಗಿದೆ?. ಶ್ರೀಸಾಮಾನ್ಯನಿಗೆ, ಭಾರತದ ರೈತರು ಹಾಗೂ ಕಾರ್ಮಿಕರಿಗೆ ಸ್ವಾತಂತ್ರ ಹಾಗೂ ಅವಕಾಶಗಳನ್ನು ತಂದುಕೊಡಲು, ಬಡತನ, ಅಜ್ಞಾನ ಹಾಗೂ ರೋಗರುಜಿನಗಳನ್ನು ಕೊನೆಗೊಳಿಸಲು, ಸಮೃದ್ಧಿದಾಯಕವಾದ, ಪ್ರಜಾತಾಂತ್ರಿಕ ರಾಷ್ಟ್ರ ನಿರ್ಮಿಸಲು, ಪ್ರತಿಯೊಬ್ಬ ಪುರುಷನಿಗೂ, ಮಹಿಳೆಗೂ ನ್ಯಾಯ ಹಾಗೂ ಪರಿಪೂರ್ಣತೆಯನ್ನು ಖಾತರಿಪಡಿಸುವಂತಹ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಸಂಸ್ಥೆಗಳನ್ನು ಸೃಷ್ಟಿಸಲು ನಾವು ಪರಿಶ್ರಮಪಡಬೇಕಿದೆ.

ನಾವೆಲ್ಲರೂ ಈ ಮಹಾನ್ ರಾಷ್ಟ್ರದ ಪ್ರಜೆಗಳಾಗಿದ್ದೇವೆ. ನಾವು ತೀವ್ರ ಪ್ರಗತಿಯ ತಿರುವಿನಲ್ಲಿದ್ದೇವೆ. ನಾವು ಅದನ್ನು ಉನ್ನತ ಮಟ್ಟದೆಡೆಗೆ ಕೊಂಡೊಯ್ಯಬೇಕು. ನಾವು ಯಾವುದೇ ಧರ್ಮಕ್ಕೆ ಸೇರಿದವರಾದರೂ, ಸಮಾನ ಹಕ್ಕುಗಳನ್ನು, ಅವಕಾಶಗಳನ್ನು ಹಾಗೂ ಬಾಧ್ಯತೆಗಳನ್ನು ಹೊಂದಿರುವ ಭಾರತಾಂಬೆಯ ಮಕ್ಕಳಾಗಿದ್ದೇವೆ. ನಾವು ಕೋಮುವಾದವನ್ನು ಹಾಗೂ ಸಂಕುಚಿತ ಮನೋಭಾವವನ್ನು ಉತ್ತೇಜಿಸಕೂಡದು. ಚಿಂತನೆ ಹಾಗೂ ಕೃತಿಯಲ್ಲಿ ಸಂಕುಚಿತತೆಯನ್ನು ಪ್ರದರ್ಶಿಸುವ ಯಾವುದೇ ದೇಶವೂ ಮಹಾನ್ ಆಗಲು ಸಾಧ್ಯವಿಲ್ಲ.

ವಿಶ್ವದ ರಾಷ್ಟ್ರಗಳಿಗೆ ಹಾಗೂ ಜನತೆಗೆ ನಾವು ಶುಭಾಶಯಗಳನ್ನು ಕಳುಹಿಸೋಣ ಹಾಗೂ ಶಾಂತಿ, ಸ್ವಾತಂತ್ರ ಹಾಗೂ ಪ್ರಜಾತಂತ್ರವನ್ನು ಮುನ್ನಡೆಸಲು ಅವರೊಂದಿಗೆ ಸಹಕರಿಸುವುದಾಗಿ ನಾವಾಗಿಯೇ ಪ್ರತಿಜ್ಞೆಗೈಯೋಣ......

ಜೈ ಹಿಂದ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News