ನಾವು ಯಾವ ಭಾರತಕ್ಕಾಗಿ ಹೋರಾಡಿದ್ದೆವೋ ಅದು ಇದಲ್ಲ: 110 ವರ್ಷದ ಪ್ರತಿಭಟನಾನಿರತ ರೈತನ ಹತಾಶ ನುಡಿ

Update: 2021-08-15 14:13 GMT
Photo: Thewire.in

ಹೊಸದಿಲ್ಲಿ,ಆ.15: ‘ನಾವು ಯಾವ ಭಾರತಕ್ಕಾಗಿ ಹೋರಾಡಿದ್ದೆವೋ ಅದು ಇದಲ್ಲ’ ಇದು ದಿಲ್ಲಿ ಬಳಿಯ ಗಾಝಿಪುರದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಹಿರಿಯ ರೈತ ಗಂಧರ್ವ ಸಿಂಗ್ (110) ಅವರ ನೋವಿನ ನುಡಿ.

ಕಳೆದ ತಿಂಗಳು ಗಾಝಿಪುರಕ್ಕೆ ಆಗಮಿಸಿ ಪ್ರತಿಭಟನಾನಿರತ ರೈತರೊಂದಿಗೆ ಸೇರಿಕೊಂಡಿರುವ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ನಿವಾಸಿ, ಸ್ವಾತಂತ್ರ ಹೋರಾಟಗಾರರೂ ಆಗಿರುವ ಸಿಂಗ್ ಆಗಿನಿಂದಲೂ ಇಲ್ಲಿಯೇ ಮೊಕ್ಕಾಂ ಹೂಡಿದ್ದು,ಅವರ ಉಪಸ್ಥಿತಿ ಪ್ರತಿಭಟನೆಗೆ ಇನ್ನಷ್ಟು ಬಲವನ್ನು ನೀಡಿದೆ.

‘ದೇಶದ ಸ್ವಾತಂತ್ರಕ್ಕಾಗಿ ಬ್ರಿಟಿಷರ ವಿರುದ್ಧದ ಹೋರಾಟ ಉತ್ತುಂಗದಲ್ಲಿದ್ದಾಗ ನನಗೆ 35-36ರ ವಯಸ್ಸು. ನನ್ನನ್ನು ನಂಬಿ,ಇಲ್ಲಿ ಘಾಝಿಪುರದಲ್ಲಿ ಪ್ರತಿಭಟನಾನಿರತ ರೈತರ ಮುಖದಲ್ಲಿ ನಾನು ಕಾಣುತ್ತಿರುವ ದೃಢಸಂಕಲ್ಪ ನನಗೆ ಆ ದಿನಗಳನ್ನು ನೆನಪಿಸುತ್ತಿದೆ. ಆದರೆ ಇಂದು ನಮ್ಮನ್ನು ದಮನಿಸುತ್ತಿರುವವರು ನಮ್ಮ ಸಹಭಾರತೀಯರೇ ಆಗಿದ್ದಾರೆ ’ ಎಂದು ಸುದ್ದಿ ಜಾಲತಾಣ The Wire ಗೆ ನೀಡಿದ ಸಂದರ್ಶನದಲ್ಲಿ ಸಿಂಗ್ ಹೇಳಿದರು.

ಪ್ರತಿದಿನ ಸೂರ್ಯೋದಯಕ್ಕೆ ಎದ್ದೇಳುವ ಸಿಂಗ್ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸುತ್ತ ಬಿಜೆಪಿ ಮುಕ್ತ ಭಾರತಕ್ಕಾಗಿ ಪ್ರಾರ್ಥಿಸುತ್ತಾರೆ. ರೈತರ ಚಳುವಳಿಯ ಪ್ರಮುಖ ನಾಯಕರಲ್ಲೋರ್ವರಾಗಿರುವ ರಾಕೇಶ ಟಿಕಾಯತ್ ಅವರೊಂದಿಗೆ ಆಪ್ತ ಸಂಬಂಧವನ್ನು ಹೊಂದಿರುವ ಸಿಂಗ್ ಸಂಜೆಯ ವೇಳೆಗೆ ಕ್ರಾಂತಿಗೀತೆಗಳು ಮತ್ತು ತಮ್ಮ ಕಾರ್ಯತಂತ್ರಗಳ ಬಗ್ಗೆ ರೈತರ ಚರ್ಚೆಗಳೊಂದಿಗೆ ಅಲ್ಲಿಯ ಟೆಂಟ್‌ ಗಳು ಜೀವಂತಿಕೆ ಪಡೆದಾಗ ವೌನವಾಗಿ ಎಲ್ಲವನ್ನು ವೀಕ್ಷಿಸುತ್ತಿರುತ್ತಾರೆ.
 

ತಾನು ಹಿಂದೆ ಪ್ರತಿಭಟಿಸಿದ್ದ ವಸಾಹತುಶಾಹಿ ಬ್ರಿಟಿಷ್ ಸರಕಾರ ಮತ್ತು ಈಗ ತಾನು ಪ್ರತಿರೋಧಿಸುತ್ತಿರುವ ನರೇಂದ್ರ ಮೋದಿ ಸರಕಾರದ ನಡುವೆ ಹಲವಾರು ಸಾಮ್ಯತೆಗಳನ್ನು ಸಿಂಗ್ ಬೆಟ್ಟು ಮಾಡಿದರು. ‘ಬ್ರಿಟಿಷರ ಕಾಲದಲ್ಲಿ ನಿರಂಕುಶವಾಗಿ ಕಾನೂನುಗಳನ್ನು ತರಲಾಗುತ್ತಿತ್ತು ಮತ್ತು ಅದೇ ಈಗಲೂ ಪುನರಾವರ್ತನೆಯಾಗುತ್ತಿದೆ. ನಾವು ಬಿಜೆಪಿಯ ಗುಲಾಮರಾಗಿರಬೇಕು ಎನ್ನುವುದು ನಾವು ಹೋರಾಡಿ ಗೆದ್ದಿದ್ದ ಸ್ವಾತಂತ್ರದ ಅರ್ಥವಾಗಿರಲಿಲ್ಲ. ಈ ಸರಕಾರವು ಕಾನೂನುಗಳನ್ನು ಜನರ ಮೇಲೆ ಹೇರುತ್ತಿದೆಯಷ್ಟೇ. ಅವರು ರಾತ್ರೋರಾತ್ರಿ ಕಾನೂನುಗಳನ್ನು ತರುತ್ತಿದ್ದಾರೆ,ಜನರ ಜೀವನೋಪಾಯಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಮತ್ತು ಜನರೊಂದಿಗೆ ಸಮಾಲೋಚಿಸುವುದೂ ಇಲ್ಲ ’ಎಂದು ಸಿಂಗ್ ಆಕ್ರೋಶ ವ್ಯಕ್ತಪಡಿಸಿದರು.

 
ಸ್ವಾತಂತ್ರ ಹೋರಾಟವನ್ನು ನೆನಪಿಸಿಕೊಂಡ ಅವರು,‘ನಾವು ಸಣ್ಣ ಗುಂಪುಗಳಾಗಿ ನಮ್ಮ ಗ್ರಾಮದ ಕಟ್ಟೆಯಲ್ಲಿ ಸೇರುತ್ತಿದ್ದೆವು ಮತ್ತು ಮುಂಬರುವ ಸತ್ಯಾಗ್ರಹಗಳು ಹಾಗೂ ಅಸಹಕಾರ ಚಳುವಳಿಗೆ ನಾವು ಕೊಡುಗೆ ಸಲ್ಲಿಸಲು ಮಾರ್ಗಗಳ ಬಗ್ಗೆ ರಹಸ್ಯವಾಗಿ ಚರ್ಚಿಸುತ್ತಿದ್ದೆವು. ಅದಕ್ಕೆ ವ್ಯತಿರಿಕ್ತವಾಗಿ ಇಂದು ನಾವು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುತ್ತಿರುವ ಭಾರತದ ಪಾಲಿಗೆ ದುಃಖದ ದಿನಗಳಲ್ಲಿ ಬದುಕುತ್ತಿದ್ದೇವೆ. ಅಲ್ಪಸಂಖ್ಯಾತ ಗುಂಪುಗಳತ್ತ ಅಧಿಕಾರಿಗಳ ಧೋರಣೆ ನನಗೆ ಕಳವಳವನ್ನುಂಟು ಮಾಡಿದೆ. ದೇಶದಲ್ಲಿ ಹೆಚ್ಚುತ್ತಿರುವ ಪ್ರತಿಭಟನೆಗಳ ಸಂಖ್ಯೆಯು ಸರಕಾರವು ಹೇಗೆ ಆಗಾಗ್ಗೆ ಜನವಿರೋಧಿ ಕಾನೂನುಗಳನ್ನು ತರುತ್ತಿದೆ ಎನ್ನುವುದನ್ನು ತೋರಿಸುತ್ತಿದೆ ’ಎಂದರು.
 
ಭಾರತದಲ್ಲಿಯ ಇಂದಿನ ವಾತಾವರಣ,ಅಲ್ಪಸಂಖ್ಯಾತರ ವಿರುದ್ಧ ಕಾರಲಾಗುತ್ತಿರುವ ವಿಷ ಇವೆಲ್ಲ ವಿಭಜನೆಯ ಸಮಯದಲ್ಲಿದ್ದಂತೆಯೇ ಇವೆ ಎಂದು ಸಿಂಗ್,ಬ್ರಿಟಿಷರು ‘ಒಡೆದು ಆಳುವ ’ಅತ್ಯಂತ ಸ್ಪಷ್ಟನೀತಿಯನ್ನು ಹೊಂದಿದ್ದರು. ಬಿಜೆಪಿ ಸರಕಾರವೂ ಇದರಿಂದ ಭಿನ್ನವಾಗಿಲ್ಲ, ಸಮುದಾಯಗಳನ್ನು ಪರಸ್ಪರರ ವಿರುದ್ಧ ಎತ್ತಿ ಕಟ್ಟಲು ಇವರು (ಸರಕಾರ) ಅದೇ ಪದ್ಧತಿಯನ್ನು ಬಳಸುತ್ತಿದ್ದಾರೆ ಎಂದರು.

ಬ್ರಿಟಿಷರು ಭಾರತೀಯ ಸಂಸ್ಕೃತಿಯ ಸ್ವರೂಪದಲ್ಲಿ ಧಾರ್ಮಿಕ ಹಸ್ತಕ್ಷೇಪಗಳನ್ನು ನಡೆಸುವ ಮುನ್ನ ಈದ್ ಮತ್ತು ಹೋಲಿ ಕೇವಲ ಧಾರ್ಮಿಕ ಸಂದರ್ಭಗಳಾಗಿರಲಿಲ್ಲ,ಅವು ಜನರು ಸಮನ್ವಯತೆಯಿಂದ ಬದುಕಿದ್ದ ಒಗ್ಗಟ್ಟಿನ ಸಮಾಜದ ಬುನಾದಿಗಳಾಗಿದ್ದವು. ಬ್ರಿಟಿಷರು ಭಾರತವನ್ನು ವಿಭಜಿಸಿದ್ದರು,ಮೋದಿ ಹೃದಯಗಳನ್ನು ವಿಭಜಿಸಿದ್ದಾರೆ. 21ನೇ ಶತಮಾನದ ಭಾರತವು ಮುಸ್ಲಿಮರು,ದಲಿತರು ಮತ್ತು ಸಮಾಜದ ಹಿಂದುಳಿದ ವರ್ಗಗಳನ್ನು ನಾಶಗೊಳಿಸುತ್ತಿದೆ. ಈ ಸರಕಾರವು ದುರ್ಬಲ ವರ್ಗಗಳನ್ನು ತುಳಿಯುತ್ತಿದೆ ಎಂದು ಕಿಡಿಕಾರಿದರು.

ಭಿನ್ನಾಭಿಪ್ರಾಯದ ಧ್ವನಿಗಳನ್ನು ಅಡಗಿಸಲು ಬಿಜೆಪಿಯೂ ಬ್ರಿಟಷರು ಬಳಸಿದ್ದ ಹಣೆಪಟ್ಟಿಗಳನ್ನೇ ಬಳಸುತ್ತಿದೆ. ಭಿನ್ನಮತೀಯರ ಹೋರಾಟದ ಉದ್ದೇಶಗಳು ಏನೇ ಆಗಿದ್ದರೂ ಬ್ರಿಟಷರು ಅವರಿಗೆ ‘ಬಂಡುಕೋರರು ’ಎಂಬ ಹಣೆಪಟ್ಟಿ ಹಚ್ಚುತ್ತಿದ್ದಂತೆ ಈ ಸರಕಾರವೂ ಅವರಿಗೆ ಖಲಿಸ್ತಾನಿ, ಆತಂಕವಾದಿ,ಪಾಕಿಸ್ತಾನಿ,ಸಮಾಜ ವಿರೋಧಿ ಶಕ್ತಿಗಳು ಎಂಬಿತ್ಯಾದಿ ಹಣೆಪಟ್ಟಿಗಳನ್ನು ಅಂಟಿಸುತ್ತಿದೆ ಎಂದ ಸಿಂಗ್,ಅತ್ಯಂತ ವಿಪರ್ಯಾಸವೆಂದರೆ ತಮ್ಮ ಸರಕಾರವನ್ನು ಪ್ರಶ್ನಿಸುವವರನ್ನು ಜೈಲಿಗೆ ತಳ್ಳಲು ಬ್ರಿಟಿಷರು ತಂದಿದ್ದ ಕರಾಳ ಕಾನೂನುಗಳನ್ನೇ ಬಿಜೆಪಿಯು ಬಳಸುತ್ತಿದೆ ಎಂದರು.
  
‘ಈ ಸರಕಾರವು ಎಸಗುತ್ತಿರುವ ಅನ್ಯಾಯಗಳು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ನಾವು ನಡೆಸಿದ್ದ ಹೋರಾಟವನ್ನು ನೆನಪಿಸುತ್ತಿವೆ. ಕೃಷಿ ಕಾಯ್ದೆಗಳು ಮತ್ತು ಪ್ರತಿಭಟನಾಕಾರರ ವಿರುದ್ಧ ಬಳಕೆಯಾಗುತ್ತಿರುವ ಕಾನೂನುಗಳು ‘ನಮ್ಮ’ ಮತ್ತು ‘ಅವರ’ ನಡುವಿನ ವ್ಯತ್ಯಾಸವನ್ನು ನಮಗೆ ಸ್ಪಷ್ಟಪಡಿಸಿವೆ. ಅವರು ನಮ್ಮನ್ನು ಲಕ್ಷಕ್ಕೆ ತೆಗೆದುಕೊಳ್ಳುತ್ತಿಲ್ಲ. ರೈತರ ಪ್ರತಿಭಟನೆಯು ದಶಕದಲ್ಲಿ ಗಾಂಧೀಜಿಯವರು ಪ್ರತಿಭಟನೆಗೆ ಕರೆ ನೀಡಿದ ಬಳಿಕ ನಾವು ಧರಣಿಗಳನ್ನು ನಡೆಸುತ್ತಿದ್ದ 1940ರ ದಶಕವನ್ನು ನೆನಪಿಸುತ್ತಿದೆ. 

ಆದರೆ ನಾವು ಯಾವ ಭಾರತಕ್ಕಾಗಿ ಹೋರಾಡಿದ್ದೆವೋ ಆ ಭಾರತ ಇದಲ್ಲ. ತನ್ನ ಕಾರ್ಪೊರೇಟ್ ಮಿತ್ರರೊಂದಿಗೆ ಶಾಮೀಲಾಗಿರುವ ಮೋದಿ ಸರಕಾರವು ಬ್ರಿಟಿಷ್ ಸಾಮ್ರಾಜ್ಯಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ ’ ಎಂದ ಸಿಂಗ್,‘ಇವರ ಕಾನೂನುಗಳು ನಮ್ಮನ್ನು ರಸ್ತೆಗೆ ತಂದಿವೆ. ಭಾರತೀಯರ ನೋವುಗಳು ಅರ್ಥವಾಗದ ಇವರ ದೇಶಪ್ರೇಮ ಎಂತಹುದು? ನಮ್ಮ ನಂತರದ ತಲೆಮಾರುಗಳು ಮತ್ತು ಜೀವನೋಪಾಯಗಳು ಹಾಳಾಗಲಿವೆ. ಕರಾಳ ಕಾನೂನುಗಳಿಂದ ದೇಶದ ಭವಿಷ್ಯವೂ ಕರಾಳವಾಗುತ್ತದೆಯಷ್ಟೇ ಎಂದರು.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News