ಅಫ್ಘಾನಿಸ್ತಾನದ ಹಿಂದೂಗಳು, ಸಿಖ್ಖರಿಗೆ ನೆರವು ನೀಡಲು ಆದ್ಯತೆ: ಕೇಂದ್ರ ಸರಕಾರ

Update: 2021-08-16 17:52 GMT
ಸಾಂದರ್ಭಿಕ ಚಿತ್ರ,photo: pti/twitter

ಹೊಸದಿಲ್ಲಿ,ಆ.16: ತಾಲಿಬಾನಿಗಳು ಅಫಘಾನಿಸ್ತಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಕಾಬೂಲಿನಿಂದ ವಾಣಿಜ್ಯ ವಿಮಾನಯಾನ ಸೇವೆಯು ಪುನರಾರಂಭಗೊಂಡ ಬಳಿಕ ಭಾರತಕ್ಕೆ ಮರಳುವ ಅಫಘಾನಿಸ್ತಾನದ ಹಿಂದುಗಳು ಮತ್ತು ಸಿಕ್ಖರಿಗೆ ಆದ್ಯತೆಯನ್ನು ನೀಡಲಾಗುತ್ತದೆ ಎಂದು ಕೇಂದ್ರ ಸರಕಾರವು ಸೋಮವಾರ ಹೇಳಿದೆ. 

ಯುದ್ಧಸಂತ್ರಸ್ತ ದೇಶವನ್ನು ತೊರೆಯಲು ಭಯಭೀತ ಅಫಘಾನಿಗಳು ಕಾಬೂಲ ವಿಮಾನ ನಿಲ್ದಾಣದಲ್ಲಿ ಗುಂಪುಗುಂಪಾಗಿ ಸೇರಿರುವ ನಡುವೆಯೇ ಸರಕಾರವು,ಅಫಘಾನಿಸ್ತಾನವನ್ನು ತೊರೆಯಲು ಬಯಸುವವರಿಗೆ ಭಾರತಕ್ಕೆ ಮರಳಲು ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದೆ.

‘ಅಫಘಾನಿಸ್ತಾನದಲ್ಲಿರುವ ಭಾರತೀಯ ಪ್ರಜೆಗಳು ಮತ್ತು ನಮ್ಮ ಹಿತಾಸಕ್ತಿಗಳ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಲು ಸರಕಾರವು ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ ’ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ದಿನೇದಿನೇ ಹದಗೆಡುತ್ತಿರುವ ಕಾಬೂಲಿನಲ್ಲಿಯ ಸ್ಥಿತಿಯನ್ನು ಬೆಟ್ಟು ಮಾಡಿದ ಅವರು,‘ಅಫಘಾನ್ ಸಿಕ್ಖರು ಮತ್ತು ಹಿಂದು ಸಮುದಾಯಗಳ ಜೊತೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ನಮ್ಮ ಪರಸ್ಪರ ಅಭಿವೃದ್ಧಿ,ಶೈಕ್ಷಣಿಕ ಮತ್ತು ಜನಸಂಪರ್ಕಗಳ ಉತ್ತೇಜನಕ್ಕಾಗಿ ನಾವು ಕೈಗೊಂಡಿದ್ದ ಕ್ರಮಗಳಲ್ಲಿ ನಮ್ಮ ಪಾಲುದಾರರಾಗಿದ್ದ ಹಲವಾರು ಅಫಘಾನಿಗಳಿದ್ದಾರೆ. ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ ’ ಎಂದರು.

‘ಕಾಬೂಲ್ ವಿಮಾನ ನಿಲ್ದಾಣದಿಂದ ವಾಣಿಜ್ಯ ವಿಮಾನಗಳ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿರುವುದು ಭಾರತೀಯರ ವಾಪಸಾತಿಯ ನಮ್ಮ ಪ್ರಯತ್ನಗಳಿಗೆ ನಾವು ವಿರಾಮ ನೀಡುವುದನ್ನು ಅನಿವಾರ್ಯವಾಗಿಸಿದೆ. ವಿಮಾನಗಳ ಹಾರಾಟ ಪುನರಾರಂಭಗೊಳ್ಳುವುದನ್ನು ನಾವು ಕಾಯುತ್ತಿದ್ದೇವೆ ’ಎಂದು ಬಾಗ್ಚಿ ತಿಳಿಸಿದರು.

‘ಅಮೆರಿಕ ಮತ್ತು ನ್ಯಾಟೋ ಪಡೆಗಳ ವಾಪಸಾತಿಯೊಂದಿಗೆ ತಾಲಿಬಾನಿಗಳು ಆಕ್ರಮಣವನ್ನು ಆರಂಭಿಸಿದಾಗಿನಿಂದ ಭಾರತವು ತನ್ನ ಪ್ರಜೆಗಳನ್ನು ಮತ್ತು ಕೆಲವು ಅಫಘಾನ್ ಪ್ರಜೆಗಳನ್ನು ತೆರವುಗೊಳಿಸುತ್ತಿದೆ. ಭಾರತಕ್ಕೆ ಮರಳಲು ಬಯಸಿರುವ ಇನ್ನೂ ಕೆಲವು ಭಾರತಿಯ ಪ್ರಜೆಗಳು ಅಫಘಾನಿಸ್ತಾನದಲ್ಲಿರುವುದು ನಮಗೆ ತಿಳಿದಿದೆ ಮತ್ತು ನಾವು ಅವರ ಸಂಪರ್ಕದಲ್ಲಿದ್ದೇವೆ ’ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News